‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷಣೆಯಡಿ ಮೂರು ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ) ರೈತರ ಹಿತ ಕಾಯುವ ನಿಟ್ಟಿನಲ್ಲಿ ಒಮ್ಮತದ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮುನಿರಾಬಾದ್ (ಕೊಪ್ಪಳ):

‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷಣೆಯಡಿ ಮೂರು ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ) ರೈತರ ಹಿತ ಕಾಯುವ ನಿಟ್ಟಿನಲ್ಲಿ ಒಮ್ಮತದ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ಸರ್ಕಾರ, ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ''''ತುಂಗಭದ್ರಾ ಜಲಾಶಯದ ನೂತನ 33 ಸ್ಪಿಲ್‌ವೇ ಗೇಟುಗಳ ಲೋಕಾರ್ಪಣೆ'''' ಸಮಾರಂಭದಲ್ಲಿ ಅವರು ಮಾತನಾಡಿದರು. ​

ಇಂದು ಜಲಸಂಪನ್ಮೂಲ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ಪ್ರಮುಖವಾದ ದಿನ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಎತ್ತಿ ಹಿಡಿಯಲು, ನಮ್ಮ ಹಕ್ಕುಗಳನ್ನು ರಕ್ಷಿಸಲು ಹಾಗೂ ರೈತರನ್ನು ಬದುಕಿಸಲು ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷಣೆಯಡಿ ಮೂರು ರಾಜ್ಯಗಳ ರೈತರ ಹಿತ ಕಾಯುವ ನಿಟ್ಟಿನಲ್ಲಿ ಈ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ ಎಂದರು.

ರೈತ ಸಂಘಟನೆಗಳು ಹಾಗೂ ವೇದಿಕೆಯವರು ನೀಡಿರುವ ಅರ್ಜಿ ಮತ್ತು ಪ್ರತಿಪಾದನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ದಿನದಿನಕ್ಕೆ ಹೂಳು ತುಂಬಿಕೊಂಡು ನೀರಿನ ಸಾಮರ್ಥ್ಯ ಕುಸಿಯುತ್ತಿದೆ. ಹೀಗಾಗಿ, ಮೂರು ರಾಜ್ಯಗಳ ರೈತರಿಗೆ ನೀರಿನ ಅಭಾವ ಸೃಷ್ಟಿಯಾಗದಂತೆ ಜಲಾಶಯದ ಹೂಳು ತೆಗೆಯುವುದು ಅಥವಾ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಿಸುವ ಕುರಿತು ಕೇಂದ್ರ ಸಚಿವರ ಜತೆಗೆ ಒಂದು ತಾಸು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಮೂರು ರಾಜ್ಯಗಳ ಅನೇಕ ನೀರಾವರಿ ಸಮಸ್ಯೆಗಳು ಸೇರಿದಂತೆ ಕೃಷ್ಣ, ಕಾವೇರಿ, ಗೋದಾವರಿ ನದಿಗಳ ಜೋಡಣೆ ಕುರಿತಾಗಿಯೂ ಚರ್ಚಿಸಿದ್ದೇವೆ ಎಂದು ತಿಳಿಸಿದರು.

ರೈತರ ಹಿತವನ್ನು ಕಾಯಲು ಮತ್ತು ಅವರ ರಕ್ಷಣೆ ಮಾಡಲು ನಾವೆಲ್ಲರೂ ಸೇರಿ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದೇವೆ. ಮೂರು ರಾಜ್ಯಗಳ ನೀರಾವರಿ ಸಮಸ್ಯೆಗಳನ್ನು ಒಟ್ಟಾಗಿ ಹೇಗೆ ಬಗೆಹರಿಸಿ ರೈತರನ್ನು ಬದುಕಿಸಬೇಕು ಎನ್ನುವುದಕ್ಕೆ ಇವತ್ತಿನ ದಿನ ಸಾಕ್ಷಿಯಾಗಿದೆ ಎಂದು ಡಿಕೆಶಿ ಸಂತಸ ವ್ಯಕ್ತಪಡಿಸಿದರು.

ನೆರೆಹೊರೆಯ ರಾಜ್ಯಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಆಗುವ ಪ್ರಯೋಜನಗಳ ಕುರಿತು ತಿಳಿಸಿದ ಸಿಎಂ, ಜತೆಗೂಡುವುದು ಆರಂಭ, ಜತೆಗೂಡುವುದೇ ಪ್ರಗತಿ, ಜತೆಗೂಡಿ ಕೆಲಸ ಮಾಡುವುದರಿಂದ ಯಶಸ್ಸು ಸಾಧ್ಯ. ದೇವರು ವರ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ಕೊಟ್ಟ ಅವಕಾಶವನ್ನು ಬಳಸಿಕೊಂಡು ಖಂಡಿತವಾಗಿ ರೈತರ ಹಿತ ಕಾಯುವ ಕೆಲಸವನ್ನು ಮೂವರು ಮುಖ್ಯಮಂತ್ರಿಗಳು ಸೇರಿ ಮಾಡುತ್ತೇವೆ ಎಂದರು.

ಈ ಹಿಂದೆ ನಾನು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಶಿಥಿಲಗೊಂಡ ಕ್ರಸ್ಟ್‌ಗೇಟ್‌ ಮುರಿದು ಬಿತ್ತು. ಇದರಿಂದ ಅಪಾರ ಪ್ರಮಾಣದ ನೀರು ಪೋಲಾಯಿತು. ವಿಷಯ ಗೊತ್ತಾಗುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕೆ ಆಗಮಿಸಿ, ಹದಿನೈದು ದಿನಗಳಲ್ಲಿ 19ನೇ ಕ್ರಸ್ಟ್‌ ಗೇಟ್ ಬದಲಾಯಿಸಿ, ರೈತರ ಹಿತ ಕಾಯುವ ಕೆಲಸ ಮಾಡಿದೆ. ಬಳಿಕ 33 ಗೇಟ್‌ಗಳನ್ನು ಬದಲಾಯಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ರೈತರನ್ನು ರಕ್ಷಣೆ ಮಾಡಲು ಭಗವಂತನೇ ಅವಕಾಶ ಮಾಡಿಕೊಟ್ಟಿದ್ದಾನೆ. ನೀರಾವರಿ ಸಚಿವನಾಗಿ ಕಾರ್ಯ ನಿರ್ವಹಿಸಿದ ಬಳಿಕ ಮುಖ್ಯಮಂತ್ರಿಯಾಗಿದ್ದೇನೆ. ರೈತರ ಬದುಕು ಉಳಿಸುವ, ಭತ್ತದ ಕಣಜವನ್ನು ಕಾಪಾಡುವ ಐತಿಹಾಸಿಕ ತೀರ್ಮಾನಕ್ಕೆ ಮುನಿರಾಬಾದ್‌ನಲ್ಲಿ ನಡೆದ ಈ ಸಮಾರಂಭವೇ ಸಾಕ್ಷಿ ಎಂದು ಹೇಳಿದರು.ತುಂಗಭದ್ರಾ ಜಲಾಶಯಕ್ಕೆ ಹೊಸ ಕಳೆ:

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕೋಟ್ಯಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೊಸ ಕಳೆ ಬಂದಿದೆ.ಜಲಾಶಯದ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಮೈಲಿಗಲ್ಲಾಗಿ, ನೂತನವಾಗಿ ಅಳವಡಿಸಲಾದ ಎಲ್ಲ 33 ಕ್ರಸ್ಟ್‌ಗೇಟ್‌ಗಳನ್ನು ಗುರುವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.ಜಲಾಶಯದ ಒಟ್ಟು 33 ಕ್ರೆಸ್ಟ್‌ಗೇಟ್‌ಗಳ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಸಾಂಕೇತಿಕವಾಗಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರು 17ನೇ ಗೇಟ್, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 18ನೇ ಗೇಟ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು 19ನೇ ಗೇಟ್ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು 20ನೇ ಕ್ರಸ್ಟ್‌ಗೇಟ್‌ ನ್ನು ಬಟನ್ ಒತ್ತುವ ಮೂಲಕ ಲೋಕಾರ್ಪಣೆಗೊಳಿಸಿದರು.