ಕಸುವಿನಹಳ್ಳಿ, ಸೂರಹಳ್ಳಿ ಗ್ರಾಮಕ್ಕೆ 4 ಕಾಡಾನೆಗಳು ದಾಳಿ

| Published : Mar 01 2024, 02:17 AM IST

ಕಸುವಿನಹಳ್ಳಿ, ಸೂರಹಳ್ಳಿ ಗ್ರಾಮಕ್ಕೆ 4 ಕಾಡಾನೆಗಳು ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಿನಿಂದ ಆಹಾರವನ್ನು ಅರಸಿಕೊಂಡು ನಾಡಿನತ್ತ ಬಂದಿರುವ 4 ಕಾಡಾನೆಗಳನ್ನು ನಾಡಿನಿಂದ ಮರಳಿ ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ. ಈಗಾಗಲೇ ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ರವರ ನೇತೃತ್ವದಲ್ಲಿ 20 ಜನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ತಾಲೂಕಿನ ಕಸುವಿನಹಳ್ಳಿ, ಸೂರಹಳ್ಳಿ ಗ್ರಾಮಕ್ಕೆ 4 ಕಾಡಾನೆಗಳು ದಾಳಿ ಇಟ್ಟಿದ್ದು, ಕಸುವಿನಹಳ್ಳಿ- ಸೂರಹಳ್ಳಿ ಮಾರ್ಗ ಮಧ್ಯದಲ್ಲಿರುವ ಕುರುಚಲು ಪ್ರದೇಶದಲ್ಲಿ ಬೀಡುಬಿಟ್ಟಿವೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರೇಶ್ವರ ಅರಣ್ಯ ವ್ಯಾಪ್ತಿಗೆ ಒಳಪಡುವ ಬೋಳೇಗೌಡನಕಟ್ಟೆಯ ಮೂಲಕ ಕಾಡಿನಿಂದ ನಾಡಿನತ್ತ ಬಂದ 4 ಕಾಡಾನೆಗಳು ತಾಲೂಕಿನ ದೇಪೇಗೌಡನಪುರ ಮಾರ್ಗವಾಗಿ ಕಸುವಿನಹಳ್ಳಿ ಗ್ರಾಮದತ್ತ ಬಂದಿವೆ. ಮಾರ್ಗ ಮಧ್ಯದಲ್ಲಿ ಕಸುವಿನಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ತುಳಿದು ನಾಶ ಮಾಡಿವೆ. ಜನರ ಕಿರುಚಾಟ, ಶಿಳ್ಳೆ, ತಮಟೆ ಶಬ್ದಕ್ಕೆ ಕಾಡಾನೆಗಳು ಗಾಬರಿಗೊಂಡು ಚಲ್ಲಾಪಿಲ್ಲಿಯಾಗಿ ಓಡಾಡುತ್ತಿದ್ದು, ಕಸುವಿನಹಳ್ಳಿ ಗ್ರಾಮದಿಂದ ಸೂರಹಳ್ಳಿ ಮಾರ್ಗವಾಗಿ ತೆರಳಿದ ಕಾಡಾನೆಗಳು ಮಾರ್ಗ ಮಧ್ಯೆಯಿರುವ ಕುರುಚಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಇದರಿಂದಜನರು ಜೀವ ಭಯದಲ್ಲಿ ಓಡಾಡುವಂತಾಗಿದೆ.

ಆನೆಗಳನ್ನು ಮರಳಿ ಕಾಡಿಗಟ್ಟಲು ರಾತ್ರಿ ಕಾರ್ಯಾಚರಣೆ:

ಕಾಡಿನಿಂದ ಆಹಾರವನ್ನು ಅರಸಿಕೊಂಡು ನಾಡಿನತ್ತ ಬಂದಿರುವ 4 ಕಾಡಾನೆಗಳನ್ನು ನಾಡಿನಿಂದ ಮರಳಿ ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ. ಈಗಾಗಲೇ ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ರವರ ನೇತೃತ್ವದಲ್ಲಿ 20 ಜನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ಮಾತನಾಡಿ, 4 ಕಾಡಾನೆಗಳು ಓಂಕಾರೇಶ್ವರ ಅರಣ್ಯ ಪ್ರದೇಶದ ಬೋಳೇಗೌಡನಕಟ್ಟೆಯಿಂದ ದೇಪೌಗೌಡನಪುರ ಮಾರ್ಗವಾಗಿ ಸೂರಹಳ್ಳಿ ಗ್ರಾಮದತ್ತ ಬಂದಿವೆ. ಬೇಸಿಗೆಯಾದ್ದರಿಂದ ಜಮೀನಿನಲ್ಲಿ ಬೆಳೆಗಳು ಇಲ್ಲದೆ ಬರೀ ಉಳಿಮೆ ಮಾಡಿರುವ ಜಮೀನಿನಲ್ಲಿ ಬಂದಿರುವುದರಿಂದ ಹೆಚ್ಚಿನ ಬೆಳೆ ಹಾನಿಯಾಗಿಲ್ಲ, ಕಸುವಿನಹಳ್ಳಿ ಗ್ರಾಮದ ರೈತರ ಬಾಳೆ ಬೆಳೆಯನ್ನು ನಾಶಪಡಿಸಿವೆ. ಹೆಚ್ಚಿನ ಬೆಳೆ ನಷ್ಟ ಕಂಡುಬಂದಿಲ್ಲ, ನಂಜನಗೂಡು ವ್ಯಾಪ್ತಿಯ ರವಳಪ್ಪನ ಕೆರೆ ಮಾರ್ಗವಾಗಿ ಕಾಡಾನೆಗಳನ್ನು ಮರಳಿ ಕಾಡಿಗಟ್ಟಲು ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದ್ದು ಆನೆಗಳ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿ ಪಟಾಕಿ ಸಿಡಿಸಿ ಬ್ಯಾಟರಿ ಬಿಟ್ಟು ಬಂದ ಮಾರ್ಗವಾಗಿಯೇ ಮರಳಿ ಕಾಡಿಗಟ್ಟಲು ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಉಪ ವಲಯ ಅರಣ್ಯಾಧಿಕಾರಿ ಮದನ್ ಕುಮಾರ್, ಆನೆ ಕಾರ್ಯಪಡೆಯ ಸಿಬ್ಬಂದಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.