ಸಾರಾಂಶ
ಶಾಸಕರು ತಾವು ನೀಡಿದ ವಾಗ್ದಾನದಂತೆ ಪಟ್ಟಣದ ಕುಡಿಯುವ ನೀರಿನ ಯೋಜನೆಯನ್ನು ಮೇಲ್ದರ್ಜೆಗೇರಿಸಲು ಅಮೃತ್ 2.0 ಯೋಜನೆಯಡಿಯಲ್ಲಿ ₹59 ಕೋಟಿ ಅನುದಾನ ಮಂಜೂರು
ಹಳಿಯಾಳ: ಹಳಿಯಾಳ ಪಟ್ಟಣವು ಕೆಲವು ದಿನಗಳಿಂದ ಎದುರಿಸುತ್ತಿದ್ದ ಜೀವಜಲದ ಸಮಸ್ಯೆಗೆ ಶಾಸಕ ಆರ್.ವಿ.ದೇಶಪಾಂಡೆ ಶಾಶ್ವತ ಪರಿಹಾರವಾಗಿ ಅಮೃತ್ 20 ಯೋಜನೆಯಡಿಯಲ್ಲಿ ₹59 ಕೋಟಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿದ್ದಾರೆ ಎಂದು ಕಾಂಗ್ರೆಸ್ ಯುವಮುಖಂಡ ಅಜರ ಬಸರಿಕಟ್ಟಿ ಹೇಳಿದ್ದಾರೆ.
ಶನಿವಾರ ಪತ್ರಿಕಾ ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಹಳಿಯಾಳ ಪಟ್ಟಣವು ಹಿಂದಿನಿಂದಲೂ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ದಾಂಡೇಲಿಯ ಕಾಳಿನದಿಯಿಂದ ಕುಡಿಯುವ ನೀರಿನ ಯೋಜನೆಯನ್ನು ಶಾಸಕ ದೇಶಪಾಂಡೆ ಆರಂಭಿಸಿದ್ದು, ತದ ನಂತರ ಇಪ್ಪತ್ತನಾಲ್ಕು ಗಂಟೆ ಕುಡಿಯುವ ನೀರು ಪೂರೈಸುವ ನಿರಂತರ ನೀರು ಯೋಜನೆ ಆರಂಭಿಸಿದ್ದರು. ಈ ಯೋಜನೆಯು ಆರಂಭಗೊಂಡಾಗ ಪಟ್ಟಣದಲ್ಲಿ ಕೇವಲ 3200 ನಲ್ಲಿ ನೀರಿನ ಸಂಪರ್ಕಗಳಿದ್ದವು, ಆದರೆ ಕೆಲವೇ ಕೆಲವು ವರ್ಷಗಳಲ್ಲಿ ನಲ್ಲಿ ಸಂಪರ್ಕಗಳ ಸಂಖ್ಯೆಯು 7000ಕ್ಕೂ ಮೀರಿತು ಪರಿಣಾಮ ಪಟ್ಟಣಕ್ಕೆ ಕುಡಿಯುವ ನೀರಿನ ಕೊರತೆಯು ಎದುರಾಯಿತು. ಪಟ್ಟಣವು ಎದುರಿಸುತ್ತಿರುವ ಜೀವಜಲದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಶಾಸಕರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈಗ ಶಾಸಕರು ತಾವು ನೀಡಿದ ವಾಗ್ದಾನದಂತೆ ಪಟ್ಟಣದ ಕುಡಿಯುವ ನೀರಿನ ಯೋಜನೆಯನ್ನು ಮೇಲ್ದರ್ಜೆಗೇರಿಸಲು ಅಮೃತ್ 2.0 ಯೋಜನೆಯಡಿಯಲ್ಲಿ ₹59 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ. ಅಮೃತ್ 20 ಯೋಜನೆಯ ಕಾಮಗಾರಿಯು ಅತೀ ಶೀಘ್ರದಲ್ಲಿ ಆರಂಭಗೊಳ್ಳಲಿದ್ದು, ಪಟ್ಟಣ ಎದುರಿಸುತ್ತಿರುವ ಜೀವಜಲದ ಸಮಸ್ಯೆಯು ಶಾಶ್ವಾತವಾಗಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.