ಕರ್ನಾಟಕಕ್ಕೆ ₹ 7600 ಕೋಟಿ ರೈಲ್ವೆ ಅನುದಾನ: ಸಚಿವ ಪ್ರಹ್ಲಾದ್ ಜೋಶಿ

| Published : May 23 2025, 12:14 AM IST / Updated: May 23 2025, 12:15 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಈ ವರ್ಷ ಕರ್ನಾಟಕದ ವಿವಿಧ ರೈಲು ಯೋಜನೆಗಳಿಗೆ ₹ 7600 ಕೋಟಿ ಅನುದಾನ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಈ ವರ್ಷ ಕರ್ನಾಟಕದ ವಿವಿಧ ರೈಲು ಯೋಜನೆಗಳಿಗೆ ₹ 7600 ಕೋಟಿ ಅನುದಾನ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಅವರು ಗುರುವಾರ ಗದಗ ನಗರದಲ್ಲಿ ಅಮೃತ್ ಭಾರತ ರೈಲು ನಿಲ್ದಾಣ ಯೋಜನೆಯಡಿಯಲ್ಲಿ ನವೀಕೃತ ಗದಗ ರೈಲು ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

2007–08ರ ಅವಧಿಯಲ್ಲಿ ಯುಪಿಎ ಸರ್ಕಾರದ ಕಾಲದಲ್ಲಿ ಕೇವಲ ₹ 800 ಕೋಟಿ ಅನುದಾನ ನೀಡಲಾಗಿತ್ತು. ಆದರೆ ನಾವು ಈ ವರ್ಷ ₹ 7600 ಕೋಟಿ ನೀಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಮಾಡಿದೆ, ಎಲ್ಲಿದೆ ಅಚ್ಚೇ ದಿನ್ ಎಂದು ಪ್ರಶ್ನಿಸುತ್ತಾರೆ. ರಾಜ್ಯದಾದ್ಯಂತ ₹ 51 ಸಾವಿರ ಕೋಟಿ ಮೌಲ್ಯದ ರೈಲು ಯೋಜನೆಗಳು ಪ್ರಾರಂಭದಲ್ಲಿವೆ, ಇದೆಲ್ಲಾ ಗೊತ್ತಿದ್ದರೂ ಗೊತ್ತಿಲ್ಲದಂತೆ ಮಾತನಾಡುತ್ತಿದ್ದಾರೆ ಎಂದರು.

ದೇಶಾದ್ಯಂತ ಒಂದೇ ಭಾರತ ರೈಲು ಗಂಟೆಗೆ 130 ಕಿಮೀ ವೇಗದಲ್ಲಿ ಓಡುತ್ತಿವೆ. ಇದರಿಂದಾಗಿ ಐತಿಹಾಸಿಕ ಪ್ರಸಿದ್ಧ ವಾರಣಾಸಿ ಹಾಗೂ ಅಯೋಧ್ಯಾದಂಥ ಹಲವಾರು ನಗರಗಳಿಗೆ ಜನರು ಅತ್ಯಂತ ವೇಗವಾಗಿ ತಲುಪುವಂತಾಗಿದೆ. ಗೂಡ್ಸ್ ರೈಲು ಸಂಚಾರಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ. ಹಿಂದಿನ ಸರ್ಕಾರಗಳು ಅದನ್ನು ರಾಜಕೀಯವಾಗಿ ಬಳಸಿಕೊಂಡಿದ್ದವು ಎಂದು ಟೀಕಿಸಿದರು.

ವಿದ್ಯುದೀಕರಣ, ಉಳಿತಾಯ:

2014ರ ವರೆಗೆ ದೇಶದಲ್ಲಿ ಕೇವಲ 20 ಸಾವಿರ ಕಿಮೀ ವರೆಗೆ ಮಾತ್ರ ವಿದ್ಯುದೀಕರಣವಾಗಿತ್ತು. ಆದರೆ ನಮ್ಮ ಸರ್ಕಾರದ ಆಡಳಿತದಲ್ಲಿ 40 ಸಾವಿರ ಕಿಮೀ ವಿಸ್ತರಿಸಲಾಗಿದ್ದು, ಇದರಿಂದಾಗಿ ಸರಕು ಸಾಗಾಣಿಕೆ ವಿಭಾಗದಲ್ಲಿ ಸಾಕಷ್ಟು ಮಹತ್ತರ ಬೆಳವಣಿಗೆಯಾಗಿದೆ. ರೈಲು ಸಂಚಾರದಲ್ಲಿ ವಿದ್ಯುದೀಕರಣ ಮಾಡಿದ ಹಿನ್ನೆಲೆಯಲ್ಲಿ 640 ಕೋಟಿ ಲೀಟರ್ ಡೀಸೆಲ್ ಉಳಿತಾಯವಾಗಿದೆ. ಇದರಿಂದ ದೇಶಕ್ಕೆ ಸಾವಿರಾರು ಕೋಟಿ ಆಮದು ಸುಂಕ ಉಳಿದಿದೆ. ಬದಲಾಗಿ, 16 ಲಕ್ಷ ಗಿಡಗಳು ನೀಡುವಷ್ಟು ಆಮ್ಲಜನಕ ಪರಿಸರದಲ್ಲಿ ಉಳಿದಿದೆ.

ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ, ಶೇ.50 ವಿದ್ಯುತ್‌ನ್ನು ಕಲ್ಲಿದ್ದಲು ಮತ್ತು ಜಲಾಶಯಗಳಿಂದ ಮತ್ತು ಉಳಿದ ಶೇ.50 ಸೌರಶಕ್ತಿ ಮತ್ತು ಗಾಳಿಯಂತ್ರಗಳಿಂದ ಉತ್ಪಾದಿಸಲಾಗುತ್ತಿದೆ. ಇದರಿಂದಲೂ ಸಾಕಷ್ಟು ಆಮದು ತೆರಿಗೆ ಉಳಿತಾಯವಾಗುತ್ತಿದೆ. ಇದು ಅಚ್ಚ ದಿನ್ ಅಲ್ಲವೇ? ದೇಶದಾದ್ಯಂತ 1275 ರೈಲುಗಳು ಆಧುನೀಕರಣಗೊಳ್ಳುತ್ತಿದ್ದು, ಅದರ ಭಾಗವಾಗಿಯೇ ಗದಗ ನಿಲ್ದಾಣವೂ ಕೂಡಾ₹ 23 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಿದೆ ಎಂದರು.

₹1.16 ಲಕ್ಷ ಕೋಟಿ ಹಣವನ್ನು ರೈಲ್ವೆ ಸುರಕ್ಷಾ ಯೋಜನೆಗೆ ಖರ್ಚು ಮಾಡಲಾಗುತ್ತಿದೆ. 1652 ಕಿಮೀ ಹೊಸ ರೈಲು ಮಾರ್ಗ ನಮ್ಮ ಸರ್ಕಾರ ಬಂದ ನಂತರ ನಿರ್ಮಾಣವಾಗಿದೆ. ಇದು ಪಕ್ಕದ ಶ್ರೀಲಂಕಾದ ಒಟ್ಟು ರೈಲು ಸಂಪರ್ಕಕ್ಕಿಂತಲೂ ಹೆಚ್ಚಾಗಿದೆ. ಇದು ಅಚ್ಚೇ ದಿನ್ ಅಲ್ಲವೇ ? ಭಾರತ ಇಂದು ₹ 25 ಸಾವಿರ ಕೋಟಿ ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಭಯೋತ್ಪಾದಕ ಚಟುವಟಿಕೆಗಳೆಡೆಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದೆ ಎಂದರೆ ಇದು ಅಚ್ಚೇ ದಿನ ಅಲ್ಲವೇ.. ನೀವೆಲ್ಲಾ ಅಚ್ಚೇ ದಿನ್ ನೋಡಬೇಕು ಎಂದರೆ ಚಶ್ಮಾ ಹಾಕಿಕೊಳ್ಳಿ ಎಂದು ಜೋಶಿ ಹಾಸ್ಯ ಮಿಶ್ರಿತ ಉತ್ತರ ಕರ್ನಾಟಕ ಭಾಷೆಯಲ್ಲಿ ಸಿದ್ಧರಾಮಯ್ಯ ಅವರನ್ನು ಟೀಕಿಸಿದರು.

ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಶಾಸಕರಾದ ಡಾ. ಚಂದ್ರು ಲಮಾಣಿ, ಜಿ.ಕೆ. ಆದಪ್ಪಗೌಡ್ರ, ರಾಜು ಕುರುಡಗಿ, ಡಿಸಿ ಸಿ.ಎನ್. ಶ್ರೀಧರ್ ಹಾಗೂ ಜಿಲ್ಲೆಯ ಪ್ರಮುಖರು ಭಾಗವಹಿಸಿದ್ದರು.

ಮನೆಗೆ ಬೇಸರವಾದ ಮಕ್ಕಳನ್ನು ಕರೆದುಕೊಂಡು ಬಂದು ಅವರನ್ನು ತಮ್ಮ ಆಶ್ರಮದಲ್ಲಿಟ್ಟುಕೊಂಡು ಅವರಿಗೆ ಸಂಗೀತ ವಿದ್ಯೆ ನೀಡುವ ಮೂಲಕ ಬದುಕು ಕಟ್ಟಿಕೊಟ್ಟಿರುವ ವೀರೇಶ್ವರ ಪುಣ್ಯಾಶ್ರಮ, ಐತಿಹಾಸಿಕ ತ್ರಿಕೋಟೇಶ್ವರ, ತೋಂಟದಾರ್ಯ ಮಠಗಳಂತಹ ಆಧ್ಯಾತ್ಮಿಕ ಕೇಂದ್ರಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ನೂತನ ರೈಲು ನಿಲ್ದಾಣ ವೇದಿಕೆಯಾಗಲಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನೈರುತ್ಯ ರೈಲ್ವೆ ವಿಭಾಗದ ಹಿರಿಯ ಅಧಿಕಾರಿ ಎಚ್.ವಿ. ಶಾಸ್ತ್ರಿ, ಗದಗ ನಿಲ್ದಾಣದಲ್ಲಿ ಪ್ರತಿದಿನ 4 ಸಾವಿರ ಪ್ರಯಾಣಿಕರ ಸಂಚಾರ ಹಾಗೂ 5 ಲಕ್ಷ ರು. ವಹಿವಾಟು ನಡೆಯುತ್ತದೆ. ನೈರುತ್ಯ ರೈಲ್ವೆ ವಲಯದಲ್ಲಿ ಗದಗ ಜಂಕ್ಷನ್ ಅತ್ಯಂತ ಮಹತ್ವದ ನಿಲ್ದಾಣವಾಗಿದೆ ಎಂದರು.