ರಾಜ್ಯದ ತೆರಿಗೆ ತುಂಬದೆ ಮಹಾನಗರ ಹಾಗೂ ವಿವಿಧೆಡೆ ಸಂಚರಿಸುತ್ತಿದ್ದ ಪಾಂಡಿಚೇರಿ ಸೇರಿ ಅನ್ಯ ರಾಜ್ಯಗಳ ವಾಹನ ಜಪ್ತಿ ಮಾಡಲಾಗಿದೆ. ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ಜಿಲ್ಲೆಗಳಲ್ಲಿ ನಡೆದ ತಪಾಸಣೆ ವೇಳೆ 162 ವಾಹನ ಜಪ್ತಿ ಮಾಡಿ ಮಾಲೀಕರಿಂದ ಬರೋಬ್ಬರಿ ₹ 8 ಕೋಟಿ ದಂಡ ಕಟ್ಟಿಸಲಾಗಿದೆ.
ಧಾರವಾಡ:
ತೆರಿಗೆ ಹಣ ಉಳಿಸಲು ಹೋಗಿ ಪಾಂಡಿಚೇರಿ ಸೇರಿದಂತೆ ವಿವಿಧ ರಾಜ್ಯಗಳ ನೋಂದಣಿ ಹೊಂದಿದ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. 162 ವಾಹನ ಜಪ್ತಿ ಮಾಡಿ ಮಾಲೀಕರಿಂದ ₹ 8 ಕೋಟಿ ದಂಡ ಕಟ್ಟಿಸಿಕೊಂಡಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಾರಿಗೆ ಇಲಾಖೆಯ ಅಪರ ಆಯುಕ್ತ ಕೆ.ಟಿ. ಹಾಲಸ್ವಾಮಿ, ರಾಜ್ಯದ ತೆರಿಗೆ ತುಂಬದೆ ಮಹಾನಗರ ಹಾಗೂ ವಿವಿಧೆಡೆ ಸಂಚರಿಸುತ್ತಿದ್ದ ಪಾಂಡಿಚೇರಿ ಸೇರಿ ಅನ್ಯ ರಾಜ್ಯಗಳ ವಾಹನ ಜಪ್ತಿ ಮಾಡಲಾಗಿದೆ. ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ಜಿಲ್ಲೆಗಳಲ್ಲಿ ನಡೆದ ತಪಾಸಣೆ ವೇಳೆ 162 ವಾಹನ ಜಪ್ತಿ ಮಾಡಿ ಮಾಲೀಕರಿಂದ ಬರೋಬ್ಬರಿ ₹ 8 ಕೋಟಿ ದಂಡ ಕಟ್ಟಿಸಲಾಗಿದೆ ಎಂದರು.
ಮಹಾನಗರದಲ್ಲಿ 12 ವಾಹನ:ಹು-ಧಾ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪಾಂಡಿಚೇರಿ ನೋಂದಣಿ ಹೊಂದಿದ್ದ 12 ವಾಹನ ಜಪ್ತಿ ಮಾಡಿ ₹ 1.50 ಕೋಟಿ ದಂಡದ ಹಣ ಸಂಗ್ರಹಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯಲ್ಲಿ ವಾಹನಗಳಿಗೆ ತೆರಿಗೆ ಕಡಿಮೆ ಇದ್ದು, ಸ್ಥಳೀಯರು ಅಲ್ಲಿ ನೋಂದಣಿ ಮಾಡಿಸಿ ಕರ್ನಾಟಕದಲ್ಲಿ ಬಳಸುತ್ತಾರೆ. ಇದು ಅಪರಾಧವಾಗಿದ್ದು, ಅಂತಹ ವಾಹನಗಳಿಗೆ ಬಿಸಿ ಮುಟ್ಟಿಸುತ್ತಿದ್ದೇವೆ ಎಂದು ಹೇಳಿದರು.
3900 ಪ್ರಕರಣ:ಶಾಲಾ ವಾಹನದಲ್ಲಿ ನಿಯಮಾನುಸಾರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿರುವ ಕುರಿತು ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ 3902 ಪ್ರಕರಣಗಳು ದಾಖಲಿಸಲಾಗಿವೆ ಎಂದರು.
ಕಬ್ಬು ಸೇರಿದಂತೆ ಇತರೆ ಕೃಷಿ ಚಟುವಟಿಕೆಗೆ ಬಳಸುವ ಟ್ರ್ಯಾಕ್ಟರ್ ಟ್ರೇಲರ್‌ಗೆ ರಿಫ್ಲೆಕ್ಷನ್ ಬಟ್ಟೆ ಬ್ಯಾನರ್ ಅನ್ನು ಸಾರಿಗೆ ಇಲಾಖೆಯಿಂದ ನೋಂದಣಿಗೆ ಬಂದಾಗ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ಅಪಘಾತ ನಿಯಂತ್ರಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಮಠಪತಿ, ಪ್ರಥಮ ದರ್ಜೆ ಸಹಾಯಕ ದಿನಮನಿ ಟಿ.ವಿ ಇದ್ದರು.ರಾಜ್ಯ ಸರ್ಕಾರ ವಿವಿಧ ರೀತಿಯ ಸಂಚಾರ ವಾಹನಗಳ ನಿಯಮ ಉಲ್ಲಂಘನೆ ಕುರಿತ ಪ್ರಕರಣಗಳಲ್ಲಿ ವಿಧಿಸಿದ ದಂಡದ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿ, ಅಧಿಸೂಚನೆ ಹೊರಡಿಸಿದೆ. 1991-92ರಿಂದ 2019-20ರ ವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಶೇ.50ರಷ್ಟು ವಿನಾಯಿತಿ ನೀಡಿದೆ. ಸಂಬಂಧಪಟ್ಟ ವಾಹನದ ಮಾಲೀಕರು ನ. 21ರಿಂದ ಡಿ. 12ರೊಳಗೆ ಶೇ.50ರಷ್ಟು ದಂಡ ಭರಣ ಮಾಡಿ ಅವಕಾಶ ಬಳಸಿಕೊಳ್ಳಬೇಕು. ಹುಬ್ಬಳ್ಳಿ ಧಾರವಾಡದಲ್ಲಿ ಒಟ್ಟು 3,051, ಬೆಳಗಾವಿ ವಿಭಾಗದಲ್ಲಿ ಒಟ್ಟು 11,557 ಹಾಗೂ ಕಲಬುರಗಿ ವಿಭಾಗದಲ್ಲಿ ಒಟ್ಟು 7,473 ಸೇರಿ ಒಟ್ಟು 19000ಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ.
ಕೆ.ಟಿ. ಹಾಲಸ್ವಾಮಿ, ಸಾರಿಗೆ ಇಲಾಖೆ ಅಪರ ಆಯುಕ್ತ