ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಶ್ರೀ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಶ್ರೀ ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವ ಶನಿವಾರ ರಾತ್ರಿ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ, ಡಿಜೆ ಇಲ್ಲದೇ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನಗಳು ಹಾಗೂ ಪೌರ ಕಾರ್ಮಿಕರ ವಿಶೇಷ ಬ್ಯಾಂಡ್ ಸೆಟ್ ವೈಭವದೊಂದಿಗೆ ನೆರವೇರಿತು.ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಗಣೇಶನ ಉತ್ಸವ ೩೨ ದಿನಗಳ ಕಾಲ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಂದ ವೈಭವದಿಂದ ಜರುಗಿತ್ತು. ವಿಸರ್ಜನಾ ಮಹೋತ್ಸವಕ್ಕೆ ಶನಿವಾರ ಮಧ್ಯಾಹ್ನ ಪೂಜೆಯಲ್ಲಿ ಸಮಿತಿಯ ಗೌರಾವಾಧ್ಯಕ್ಷ ಟಿ.ಶಿವಕುಮಾರ್ ಚಾಲನೆ ನೀಡಿದರು. ಶನಿವಾರ ಸಂಜೆ ಸಂಪ್ರದಾಯದಂತೆ ಪೂಜಾ ಕೈಂಕರ್ಯ ನೆರವೇರಿಸಿ, ವಿವಿಧ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಸರ್ವಾಲಂಕೃತಗೊಂಡ ವೈಭವದ ರಥದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಪೇಟೆ ಮುಖ್ಯರಸ್ತೆ, ಕೋಟೆ ರಾಜ ಬೀದಿಯಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಡಾ. ಅಂಬೇಡ್ಕರ್ ನಗರದಲ್ಲಿ ಮಹಿಳೆಯರು ಮನೆಗಳ ಮುಂದೆ ರಂಗೋಲಿ ಇಟ್ಟು, ಶ್ರೀಸ್ವಾಮಿಯ ಮೂರ್ತಿಗೆ ಪೂಜೆಯನ್ನು ಭಕ್ತಿಯಿಂದ ನೆರವೇರಿಸಿದರು. ಶ್ರೀ ವಿನಾಯಕ ಮೂರ್ತಿಯ ಉತ್ಸವದ ವಾಹನಕ್ಕೆ ಶ್ರೀ ರೇವಣ್ಣ ಸಿದ್ಧೇಶ್ವರ ಡೆಕೊರೇಟ್ಸ್ ಹಾಗೂ ಶ್ರೀ ವಿನಾಯಕ ಫ್ಲವರ್ ಡೆಕೋರೇಟರ್‍ಸ್ ಮಾಲೀಕರು ಆಕರ್ಷಕ ಪುಷ್ಪಗಳಿಂದ ಸಿಂಗರಿಸಿ, ಮೆಚ್ಚುಗೆಗೆ ಪಾತ್ರರಾದರು.
ಭಕ್ತರು ದಾರಿಯುದ್ದಕ್ಕೂ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿ ಪೂರೈಸುವಂತೆ ವರಸಿದ್ಧಿ ವಿನಾಯಕನಲ್ಲಿ ಪ್ರಾರ್ಥಿಸಿದರು ಮತ್ತು ಭಾನುವಾರ ಮಧ್ಯಾಹ್ನ ೨ ಗಂಟೆಯ ನಂತರ ಹೇಮಾವತಿ ನದಿಯಲ್ಲಿ ಗೌರಿಗಣೇಶ ಸ್ವಾಮಿಯ ಮೂರ್ತಿಗಳನ್ನು ತೆಪ್ಪೋತ್ಸವ ನಡೆಸಿ, ವಿಸರ್ಜಿಸಲಾಯಿತು.ಶ್ರೀ ರಾಘವೇಂದ್ರ ಮಠದ ಆಡಳಿತಾಧಿಕಾರಿ ಶ್ರೀಷಾಚಾರ್ ಮಾರ್ಗದರ್ಶನದಲ್ಲಿ ರಾಮಮೂರ್ತಿ ಶ್ರೀ ಗಣೇಶೋತ್ಸವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮಹೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಮೆರವಣಿಗೆಯ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಮಹಾಗಣಪತಿ ಸೇವಾ ಸಮಿತಿ ಗೌರವಾಧ್ಯಕ್ಷ ಟಿ.ಶಿವಕುಮಾರ್, ಅಧ್ಯಕ್ಷ ಎಚ್.ಕೆ.ಪ್ರಸನ್ನ, ಕಾರ್ಯಾಧ್ಯಕ್ಷ ಪುಟ್ಟಸೋಮಪ್ಪ, ಸುಧಾ ನಳಿನಿ, ದೊಡ್ಡಮಲ್ಲೇಗೌಡ, ಎಚ್.ವಿ.ಸುರೇಶ್ ಕುಮಾರ್, ಎಚ್.ಎಸ್.ಸುದರ್ಶನ್, ಎಸ್.ಗೋಕುಲ್, ಗುರುರಾಜ್, ಅಶೋಕ್, ಪಿಎಚ್‌ಇ ವೆಂಕಟೇಶ್, ಈಶ್ವರ್, ಮಂಜುನಾಥ್, ನರಸಿಂಹಶೆಟ್ಟಿ, ವೈ.ವಿ.ಚಂದ್ರಶೇಖರ್, ಶಿವಕುಮಾರ್, ಶಂಕರನಾರಾಯಣ ಐತಾಳ್, ಲೋಕೇಶ್, ಗೋವಿಂದ, ಮುರಳೀಧರ ಗುಪ್ತ, ಮಹಮ್ಮದ್ ಕಾಲೀದ್, ಶಿವಾನಂದ, ನಾಗರಾಜ್, ಆರ್.ಬಿ.ಪುಟ್ಟೇಗೌಡ, ಕಿಶೋರ್, ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ, ಸದಸ್ಯರಾದ ಎ.ಜಗನ್ನಾಥ್, ಕುಮಾರಸ್ವಾಮಿ, ಶಿವಣ್ಣ, ಜ್ಯೋತಿ ಮಂಜುನಾಥ್, ಚಂದ್ರು ಹಾಗೂ ಇತರರು ಭಾಗವಹಿಸಿದ್ದರು.