ಹಾಸನ ಜಿಲ್ಲಾ ಆಸ್ಪತ್ರೆ (ಹಿಮ್ಸ್)ನಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಭದ್ರತಾ ಸಿಬ್ಬಂದಿಗೆ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಎಬಿಆರ್‌ಕೆ ಇನ್ಸೆಂಟಿವ್ ಸೌಲಭ್ಯ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಮ್ಸ್ ಆಡಳಿತ ಪರಿಷತ್ ಸದಸ್ಯರಾದ ರವೀಶ್ ಬಸವಾಪುರ ಅವರನ್ನು ಆಸ್ಪತ್ರೆ ಸಿಬ್ಬಂದಿ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು. ಆಸ್ಪತ್ರೆಯ ಸುಗಮ ಕಾರ್ಯಾಚರಣೆಗೆ ನಿರಂತರವಾಗಿ ಶ್ರಮಿಸುತ್ತಿರುವ ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ವರ್ಗದ ನೌಕರರಿಗೂ ನ್ಯಾಯಸಮ್ಮತವಾಗಿ ಮತ್ತು ಸರಿಯಾದ ಸಮಯಕ್ಕೆ ಇನ್ಸೆಂಟಿವ್ ತಲುಪಬೇಕು ಎಂದು ಸಚಿವರ ಗಮನ ಸೆಳೆದಿದ್ದಾಗಿ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ಜಿಲ್ಲಾ ಆಸ್ಪತ್ರೆ (ಹಿಮ್ಸ್)ನಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಭದ್ರತಾ ಸಿಬ್ಬಂದಿಗೆ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಎಬಿಆರ್‌ಕೆ ಇನ್ಸೆಂಟಿವ್ ಸೌಲಭ್ಯ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಮ್ಸ್ ಆಡಳಿತ ಪರಿಷತ್ ಸದಸ್ಯರಾದ ರವೀಶ್ ಬಸವಾಪುರ ಅವರನ್ನು ಆಸ್ಪತ್ರೆ ಸಿಬ್ಬಂದಿ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರವೀಶ್ ಬಸವಾಪುರ ಅವರು, ಈ ಹಿಂದೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಭದ್ರತಾ ಸಿಬ್ಬಂದಿ ತಮ್ಮ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನನ್ನ ಗಮನಕ್ಕೆ ತಂದಿದ್ದರು. ಅದರಲ್ಲೂ ಹಲವು ವರ್ಷಗಳಿಂದ ತಮಗೆ ದೊರಕಬೇಕಾದ ಎಬಿಆರ್‌ಕೆ ಇನ್ಸೆಂಟಿವ್ ಸಿಗದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆಸ್ಪತ್ರೆಯ ಭದ್ರತೆ ಹಾಗೂ ಶಿಸ್ತು ಕಾಯುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಸಿಬ್ಬಂದಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇತ್ತೀಚೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿಮ್ಸ್ ಆಡಳಿತ ಪರಿಷತ್ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲಾಯಿತು ಎಂದು ತಿಳಿಸಿದರು.ಆಸ್ಪತ್ರೆಯ ಸುಗಮ ಕಾರ್ಯಾಚರಣೆಗೆ ನಿರಂತರವಾಗಿ ಶ್ರಮಿಸುತ್ತಿರುವ ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ವರ್ಗದ ನೌಕರರಿಗೂ ನ್ಯಾಯಸಮ್ಮತವಾಗಿ ಮತ್ತು ಸರಿಯಾದ ಸಮಯಕ್ಕೆ ಇನ್ಸೆಂಟಿವ್ ತಲುಪಬೇಕು ಎಂದು ಸಚಿವರ ಗಮನ ಸೆಳೆದಿದ್ದಾಗಿ ಅವರು ಹೇಳಿದರು. ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ ಪರಿಣಾಮ, ಇಂದು ಭದ್ರತಾ ಸಿಬ್ಬಂದಿಗೆ ಬಾಕಿ ಇದ್ದ ಪ್ರೋತ್ಸಾಹಧನ ದೊರೆಯುವಂತಾಗಿದೆ ಎಂದು ರವೀಶ್ ಬಸವಾಪುರ ವಿವರಿಸಿದರು.ಸೇವೆಯಲ್ಲಿ ತೊಡಗಿರುವ ಕಾರ್ಮಿಕರ ಹಿತದೃಷ್ಟಿಯಿಂದ ಸಚಿವರು ಕೈಗೊಂಡ ನಿರ್ಧಾರಕ್ಕೆ ಹಾಗೂ ಈ ಪ್ರಕ್ರಿಯೆಯಲ್ಲಿ ಸಹಕರಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಅವರು ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಭದ್ರತಾ ಸಿಬ್ಬಂದಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಆಸ್ಪತ್ರೆ ಆಡಳಿತದ ಪ್ರತಿನಿಧಿಗಳು ಉಪಸ್ಥಿತರಿದ್ದು, ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.