ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷದ ಕಾರ್ಯಕರ್ತರು ಬೆಳಗಾವಿಯಲ್ಲಿ ನಡೆಯುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಲ್ಲಿನ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಮಾಜಿ ಸಚಿವ ಶಿವರಾಮ್ ತಿಳಿಸಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಜೈ ಬಾಪು, ಜೈಭೀಮ್, ಜೈ ಸಂವಿಧಾನ, ಬೆಳಗಾವಿ ಶತಮಾನೋತ್ಸವ ಸಮಾವೇಶದ ಪೂರ್ವಭಾವಿ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಇಂದು ಆತಂಕದಲ್ಲಿದೆ. ಸಂವಿಧಾನ ಆತಂಕದಲ್ಲಿದ್ದರೆ ನಾವೆಲ್ಲ ಆತಂಕದಲ್ಲಿ ಇದ್ದಂತೆ. ಆದ್ದರಿಂದ ಕಾಂಗ್ರೆಸ್ ಉಳಿಸಿದರೆ ದೇಶ ಉಳಿಯುತ್ತದೆ ಎಂಬ ಭಾವನೆಯೊಂದಿಗೆ ಇದೆ ಜನವರಿ 21ರಂದು ಬೆಳಗಾವಿಯಲ್ಲಿ ನಡೆಯುವ ಜೈ ಬಾಪು, ಜೈಭೀಮ್, ಜೈ ಸಂವಿಧಾನ, ಬೆಳಗಾವಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಲ್ಲಿ ನಡೆಯುವ ವಿಚಾರಧಾರೆಗಳನ್ನು ಪ್ರತಿಯೊಬ್ಬ ಬೂತ್ ಮಟ್ಟದ ಮತದಾರರಿಗೆ ತಲುಪಿಸುವ ಮೂಲಕ ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷ ಬಲವರ್ಧಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಜಾತ್ಯತೀತ ನಿಲುವಿನೊಂದಿಗೆ ಜನಸಾಮಾನ್ಯರೊಂದಿಗೆ ಸಂವಿಧಾನದ ಅಡಿಯಲ್ಲಿ ಹೋರಾಡುತ್ತ ಇಡೀ ರಾಷ್ಟ್ರದ ಜನರಿಗೆ ರಕ್ಷಣೆ ಕೊಟ್ಟಿದೆ. ಅದನ್ನು ಬಿಜೆಪಿಯವರು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ನಮ್ಮ ಪಕ್ಷದ ತತ್ವ, ಸಿದ್ಧಾಂತಗಳನ್ನು ಯಾರೇ ಒಪ್ಪಿ ಬಂದರು ತುಂಬು ಹೃದಯದಿಂದ ಸ್ವಾಗತಿಸಬೇಕು. ಒಬ್ಬೊಬ್ಬ ಕಾರ್ಯಕರ್ತರು ಇಬ್ಬರು ಯುವಕರನ್ನು ಪಕ್ಷಕ್ಕೆ ಕರೆತಂದರೆ ಪಕ್ಷ ಸಂಘಟನೆ ಬಲಿಷ್ಠವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.ಬಳಿಕ ಕೆಪಿಸಿಸಿ ವೀಕ್ಷಕ ವಿಜಯ್ ಕುಮಾರ್ ಮಾತನಾಡಿ, ಆರ್‌ಎಸ್‌ಎಸ್ ಮುಖಂಡರು ಮತ್ತು ಬಿಜೆಪಿಯವರು ರಾಮ ಜನ್ಮಭೂಮಿಯಲ್ಲಿ ರಾಮನ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಕಳೆದ ಸಂಭ್ರಮದಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದು ರಾಮನ ಪ್ರತಿಷ್ಠಾಪನೆ ಆದಮೇಲೆ ಎಂದು ಬಿಂಬಿಸುತ್ತಿದ್ದಾರೆ. ನಿಜವಾಗಲೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟ ಮಾಡಿದ ಮಹಾತ್ಮರಿಗೆ ಅವಮಾನಿಸುತ್ತಿದ್ದಾರೆ. ಕೇಂದ್ರದ ಮಂತ್ರಿ ಅಮಿತ್ ಶಾ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಡಾ ಬಿ. ಆರ್ ಅಂಬೇಡ್ಕರ್ ದೀನದಲಿತರ ಬಡವರ ಶೋಷಿತರ ಪರವಾಗಿ ನೀಡಿದಂತ ಸಂವಿಧಾನಕ್ಕೆ ಅವಮಾನಿಸಿದ್ದಾರೆ ಎಂದು ಕಿಡಿಕಾರಿದರು.
ಪಕ್ಷ ಸೇರ್ಪಡೆಗೊಂಡ ಪುರಸಭಾ ಮಾಜಿ ನಾಮಿನಿ ಸದಸ್ಯ ಪೈಂಟ್ ರವಿ ಮಾತನಾಡಿ, ಈ ಹಿಂದೆ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣಕರ್ತನಾಗಿದ್ದೆ, ಕೆಲವು ಕಾರಣಗಳಿಂದ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡು ಇಂದಿನ ಬಿಜೆಪಿ ಶಾಸಕ ಎಚ್ ಕೆ ಸುರೇಶ್ ಗೆಲುವಿಗೆ ಕಾರಣಕರ್ತನಾಗಿ ಉತ್ತಮ ಕೆಲಸ ಮಾಡಿದ್ದೆ. ಆದರೆ ಇತ್ತೀಚಿಗೆ ಬಿಜೆಪಿ ಪಕ್ಷದಲ್ಲಿ ವಾತಾವರಣ ಹಾಗೂ ಶಾಸಕರು ಸಾರ್ವಜನಿಕರೊಂದಿಗೆ ತೆಗೆದುಕೊಳ್ಳುವ ದ್ವಂದ ತೀರ್ಮಾನಗಳನ್ನು ಖಂಡಿಸಿ ಹೊರಬಂದಿದ್ದೇನೆ ಎಂದು ಹೇಳಿದರು.ಇದೇ ಸಂದರ್ಭ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತರೋದು ಮಾಜಿ ಪುರಸಭಾ ನಾಮಿನಿ ಸದಸ್ಯ ಪೈಂಟ್ ರವಿ. ಜೆಡಿಎಸ್ ಮುಖಂಡ ಕೋಗಿಲೆ ಮನೆ ಕುಮಾರ್, ಬಿಜೆಪಿ ಮುಖಂಡರಾದ ರಾಜು, ಮಂಜುನಾಥ್, ವಿನಯ್, ಸಂತೋಷ್ ಸೇರಿದಂತೆ ಇತರರು ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಜೆ ನಿಶಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೈಯದ್ ತೊಫಿಕ್, ಪುರಸಭಾ ಅಧ್ಯಕ್ಷ ಎ ಆರ್ ಅಶೋಕ್, ಕೆ ಜಿ ಗೋಪಿನಾಥ್, ಕೆಡಿಪಿ ಸದಸ್ಯರಾದ ನಂದೀಶ್, ಚೇತನ್, ಆಶ್ರಯ ಸಮಿತಿ ಸದಸ್ಯ ಇಕ್ಬಾಲ್, ಪುರಸಭಾ ಸದಸ್ಯರಾದ ಅಕ್ರಂಪಾಷಾ, ಜಮಾಲ್, ಮಾಜಿ ಸದಸ್ಯರಾದ ಜುಬೇರ ಆಹಮದ್ ಸೇರಿದಂತೆ ಇತರರು ಹಾಜರಿದ್ದರು.