ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ಎಲೈಟ್ ಪುರಸ್ಕಾರ ನೇರವೇರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ತಜ್ಞ ಹಾಗೂ ಶೈಕ್ಷಣಿಕ ಸಲಹೆಗಾರ ಡಾ. ಟಿ.ಎನ್. ರಾಜುರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌಲ್ಯಯುತವಾದ ನೀತಿಕತೆಗಳೊಂದಿಗೆ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಮಗುವಿನ ಕಲಿಕೆಗೆ ಆತ್ಮಸ್ಥೈರ್ಯ ತುಂಬಬೇಕು. ಪ್ರಸ್ತುತ ದಿನಗಳಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣ ಹಾಗೂ ಸಂಶೋಧನೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು. ಮಕ್ಕಳಿಗೆ ಬೇಕಾದ ಕಲಿಕಾ ಪರಿಸರವನ್ನು ಮನೆಯಲ್ಲಿಯೇ ಒದಗಿಸಬೇಕೆಂದು ಪೋಷಕರಿಗೆ ಸಲಹೆ ನೀಡುವುದರೊಂದಿಗೆ ಮಕ್ಕಳನ್ನು ನೇರವಾಗಿ ಕೆಲವು ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಕ್ಕಳ ಬುದ್ಧಿವಂತಿಕೆ ಮತ್ತು ಆಲೋಚನಾ ಸಾಮರ್ಥ್ಯವನ್ನು ಪರೀಕ್ಷಿಸಿದರು.
ಶಾಲೆಯ ಕಾರ್ಯದರ್ಶಿ ಎಚ್.ಪಿ. ಕಿರಣ್‌ರವರು ಮಾತನಾಡುತ್ತಾ, ಮಕ್ಕಳು ಶಿಕ್ಷಣದ ಜೊತೆಗೆ ದಿನನಿತ್ಯದ ಚಟುವಟಿಕೆಗಳೊಂದಿಗೆ ಶಿಸ್ತು, ಸಂಸ್ಕಾರ, ಸಂಸ್ಕೃತಿ, ದೇಶಪ್ರೇಮ, ಗುರುಹಿರಿಯರಲ್ಲಿ ಗೌರವ ಭಾವನೆಗಳನ್ನು ಬೆಳೆಸುವಂತೆ ಪೋಷಕರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಮಕ್ಕಳು ಯಶಸ್ಸನ್ನು ಗಳಿಸಲು ಶಾಲೆಯೊಂದೇ ಪ್ರಮುಖವಲ್ಲದೆ ಪೋಷಕರ ಪಾತ್ರವೂ ಪ್ರಮುಖವಾದದ್ದು. ಮಕ್ಕಳಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸಿ ಎಂದು ಹೇಳುತ್ತಾ ನಮ್ಮ ಶಾಲೆಯಿಂದ ಹೊರಹೊಮ್ಮುವ ಎಲ್ಲಾ ವಿದ್ಯಾರ್ಥಿಗಳೂ ಮುಂದೆ ಯಶಸ್ವಿ ಜೀವನವನ್ನು ಕಾಣಬೇಕು ಎಂದು ಮಕ್ಕಳಿಗೆ ಶುಭ ಹಾರೈಸಿದರು.ಕಲಿಕೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಕಣ್ಮನ ಸೆಳೆದವು. ಶಾಲಾ ವ್ಯವಸ್ಥಾಪಕ ಕೆ.ಸಿ. ಪುಟ್ಟಸ್ವಾಮಿ ಗೌಡರು, ಶಾಲಾ ಖಜಾಂಚಿಗಳಾದ ಸಪ್ನ ಕಿರಣ್, ಶಾಲಾ ಆಡಳಿತಾಧಿಕಾರಿ ಕೆ.ಎಂ.ನಾಗರಾಜು, ಪ್ರಾಂಶುಪಾಲರಾದ ಕ್ರಿಸ್ಟೀನಾ ಎಸ್., ಶಾಲೆಯ ಬೋಧಕ, ಬೋಧಕೇತರ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.