ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಅಗರ್ತ-25’

| Published : Aug 23 2025, 02:00 AM IST

ಸಾರಾಂಶ

ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಉದ್ಯಮಶೀಲತೆ ನಾಯಕತ್ವವನ್ನು ಬೆಳೆಸಿಕೊಂಡು ಅಭಿವೃದ್ದಿಯತ್ತ ಸಾಗಬೇಕು. ವಿದ್ಯಾರ್ಥಿಗಳು ನವೀನ ಚಿಂತನೆ, ಸಂಘಟನಾ, ನಿರ್ವಹಣ ಕೌಶಲ್ಯಗಳನ್ನು ವೃದ್ದಿಸಿಕೊಂಡು ಜೀವನದ ವಿವಿಧ ಸಂದರ್ಭಗಳಲ್ಲಿ ಅನ್ವಯಿಸಿಕೊಂಡು ಪ್ರತಿಭಾವಂತರಾಗಬೇಕು. ಸಮಾಜದ ಯಾವುದೇ ಕ್ಷೇತ್ರದಲ್ಲಿ ಉತ್ತಮ ನಾಯಕತ್ವ ಸಮಗ್ರ ಬೆಳವಣಿಗೆಗೆ ಸಹಾಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

‘ಮೆಗಾ ಮೇನೆಜ್ ಮೆಂಟ್ ಫೆಸ್ಟ್ ಅಗರ್ತ-2025’ ಎಂದರೆ ತಾಂತ್ರಿಕತೆ ಮತ್ತು ಸಂಸ್ಕೃತಿಯನ್ನು ಒಟ್ಟುಗೂಡಿಸುವ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಮತ್ತು ಕಲಾತ್ಮಕ ಪ್ರತಿಭೆಗಳನ್ನು ಪ್ರದರ್ಶಿಸಲು ಇದು ಸಹಕಾರಿಯಾಗಿದೆ ಎಂದು ಎಸ್ ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು ತಿಳಿಸಿದರು.

ನಗರ ಹೊರವಲಯದ ಎಸ್ ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಶುಕ್ರವಾರ ಎರ್ಪಡಿಸಿದ್ದ ಮೆಗಾ ಮೇನೆಜ್ ಮೆಂಟ್ ಫೆಸ್ಟ್ ಅಗರ್ತ-2025 ಕಾರ್ನಿವಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪತಿಭಾ ಪ್ರದರ್ಶನಕ್ಕೆ ಅ‍ವಕಾಶ

ಈ ಹಬ್ಬದಲ್ಲಿ ಸಂಗೀತ, ನೃತ್ಯ, ಫ್ಯಾಷನ್, ನಾಟಕ, ಫೋಟೋಗ್ರಫಿ, ರಸಪ್ರಶ್ನೆ, ಮತ್ತು ವೈಜ್ಞಾನಿಕ ಪ್ರಯೋಗಗಳಂತಹ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸ ಉತ್ತಮ ವೇದಿಕೆಯಾಗಿದೆ. ಇದು ನಾಯಕತ್ವ ಮತ್ತು ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಸಿಕ್ಕ ಅವಕಾಶವಾಗಿದೆ ಎಂದರು.

ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಉದ್ಯಮಶೀಲತೆ ನಾಯಕತ್ವವನ್ನು ಬೆಳೆಸಿಕೊಂಡು ಅಭಿವೃದ್ದಿಯತ್ತ ಸಾಗಬೇಕು. ವಿದ್ಯಾರ್ಥಿಗಳು ನವೀನ ಚಿಂತನೆ, ಸಂಘಟನಾ, ನಿರ್ವಹಣ ಕೌಶಲ್ಯಗಳನ್ನು ವೃದ್ದಿಸಿಕೊಂಡು ಜೀವನದ ವಿವಿಧ ಸಂದರ್ಭಗಳಲ್ಲಿ ಅನ್ವಯಿಸಿಕೊಂಡು ಪ್ರತಿಭಾವಂತರಾಗಬೇಕೆಂದರು. ಸಮಾಜದ ಯಾವುದೇ ಕ್ಷೇತ್ರದಲ್ಲಿ ಉತ್ತಮ ನಾಯಕತ್ವ ಸಮಗ್ರ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಮಹಿಳೆಯರಿಗೆ ಶಿಕ್ಷಣ ಮುಖ್ಯ

ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಭಾರತದ ಭವಿಷ್ಯವನ್ನು ಕಟ್ಟುವ ಪ್ರತಿಭಾನ್ವಿತ ವ್ಯಕ್ತಿಗಳಾಗಬೇಕು ಹಾಗೂ ಜೀವನದ ಮುಂದಿನ ಹಂತಕ್ಕೆ ಹೋಗುವ ಕಾಲಘಟ್ಟದಲ್ಲಿ ನೀವಿದ್ದೀರ, ನಿಮ್ಮ ಪೋಷಕರ ಕನಸನ್ನು ಸಾಕಾರಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ, ಹೆಣ್ಣುಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ ಹಾಗೂ ಸಾಮರ್ಥ್ಯಕ್ಕೆ ತಕ್ಕಂತ ವೇದಿಕೆ ಕಲ್ಪಿಸಬೇಕು ಎಂದರು.

ನಮ್ಮ ಹೊಂಡಾ ಮ್ಯಾನೇಜಿಂಗ್ ಪಾರ್ಟನರ್ ಮೊಹಮದ್ ಉಸ್ಮಾನ್ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸಿನ ಹಿಂದೆ ಹೋಗದೆ ಯಶಸ್ಸು ನಿಮ್ಮ ಹಿಂದೆ ಬರುವಂತೆ ಸದಾ ಕಲಿಯುತ್ತಾ ಗಲುವಿನ ಹಾದಿಯಲ್ಲಿ ಮುನ್ನೆಡೆಯಬೇಕು ಎಂದು ಹೇಳಿದರು.

ವಿವಿಧ ಸ್ಪರ್ಧೆಗಳ ಆಯೋಜನೆ

ಈ ಸಂಭ್ರಮದಲ್ಲಿ ಹಣಕಾಸು, ಅತ್ಯುತ್ತಮ ಮ್ಯಾನೇಜರ್, ಮಾರ್ಕೆಟಿಂಗ್, ವ್ಯಾಪಾರ, ರಸಪ್ರಶ್ನೆ, ಮಾನವ ಸಂಪನ್ಮೂಲ, ಟ್ರೆಶರ್ ಹಂಟ್ ಇನ್ನೂ ಮುಂತಾದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಈ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿದ್ದರು

ಈ ವೇಳೆ ಅರುಣ್ ಅಡ್ಡ ಮೆನ್ಸ್‌ವೇರ್ ಮಾಲಿಕ ಅರುಣ್ ರೆಡ್ಡಿ, ಬಿ.ಎಂ.ಕೆ ಕ್ಯಾಟರಿಂಗ್ ಮಾಲಿಕ ರವಿಚಂದ್ರ, ಎಸ್ ಜೆಸಿಐಟಿ ಆಡಳಿತಾಧಿಕಾರಿ ಜಿ.ಆರ್.ರಂಗಸ್ವಾಮಿ, ಡೀನ್ ಅಕಾಡೆಮಿಕ್ಸ್ ಮುಖ್ಯಸ್ಥ ಬಿ.ಎಚ್.ಡಾ.ಮಂಜುನಾಥ ಕುಮಾರ್, ಸ್ಟೂಡೆಂಟ್ ವೆಲ್‌ಫೇರ್ ಡೀನ್ ಡಾ.ಜಿ.ನಾರಾಯಣ್, ಎಂ.ಬಿ.ಎ ವಿಭಾಗದ ಮುಖ್ಯಸ್ಥ ಡಾ. ಐ.ಜಿ.ಶ್ರೀಕಾಂತ್, ಬೌತಶಾಸ್ತ್ರ ಮುಖ್ಯಸ್ಥ ರಾಜಶೇಖರ್, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.