ಕೃಷಿ ಅತ್ಯಂತ ಪವಿತ್ರ, ಶ್ರೇಷ್ಠ ಕ್ಷೇತ್ರ

| Published : Jan 13 2024, 01:31 AM IST

ಕೃಷಿ ಅತ್ಯಂತ ಪವಿತ್ರ, ಶ್ರೇಷ್ಠ ಕ್ಷೇತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲಿ ರೈತರು ಕೃಷಿಯಲ್ಲಿ ಲಾಭವಿಲ್ಲವೆಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ ಭಾರತ ಕೃಷಿ ಪ್ರಧಾನ ದೇಶ. ಎಲ್ಲ ಕ್ಷೇತ್ರಕ್ಕಿಂತ ಕೃಷಿ ಕ್ಷೇತ್ರವು ಅತ್ಯಂತ ಪವಿತ್ರವಾದುದು ಎಂದು ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಸ್. ಎಸ್. ಅಂಗಡಿ ಹೇಳಿದರು.

ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆಯ ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಜರುಗಿದ ಸುಸ್ಥಿರ ಕೃಷಿ ಕುರಿತು ನಡೆದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲಿ ರೈತರು ಕೃಷಿಯಲ್ಲಿ ಲಾಭವಿಲ್ಲವೆಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ತಾವು ಬೆಳೆದ ಉತ್ಪನ್ನಗಳನ್ನು ಮೌಲ್ಯವರ್ಧಿಸಿ ಮಾರಾಟ ಮಾಡಿ ಅಧಿಕ ಲಾಭ ಪಡೆಯಬಹುದು. ಇದರಲ್ಲಿ ತೊಡಗಿಸಿಕೊಂಡಿರುವ ರೈತರು ನಿಜವಾಗಿಯೂ ಕಾಯಕಯೋಗಿಗಳು. ಅವರ ಆರ್ಥಿಕಾಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯವು ಅನೇಕ ತರಬೇತಿಗಳನ್ನು, ಪ್ರಾತ್ಯಕ್ಷಿಕೆಗಳನ್ನು ಅವರ ಕಾಯಕ ಗುರುತಿಸಲು ಪ್ರಶಸ್ತಿಗಳನ್ನು ನೀಡುವ ಕೆಲಸ ಮಾಡುತ್ತಿದೆ ಎಂದರು.ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ ಮಾತನಾಡಿ, ಆತ್ಮಾ ಯೋಜನೆಯಡಿಯಲ್ಲಿ ಅನೇಕ ರೈತ ಗುಂಪುಗಳನ್ನು ರಚಿಸಿದ್ದು, ವಿವಿಧ ಆರ್ಥಿಕಾಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ರೈತ ಉತ್ಪಾದಕ ಸಂಸ್ಥೆಗಳ ಮೂಲಕ ರೈತರನ್ನು ಒಗ್ಗೂಡಿಸಿ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸಿ, ರೈತರನ್ನು ಆರ್ಥಿಕವಾಗಿ ಸದೃಡವನ್ನಾಗಿಸುವದು ಒಂದು ಉತ್ತಮ ಮಾರ್ಗ ಎಂದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಡಾ. ಬಾಲರಾಜ ಬಿರಾದಾರ, ಆತ್ಮಾ ಯೋಜನೆಯ ಡಾ.ಎಂ.ಬಿ. ಪಟ್ಟಣಶೆಟ್ಟಿ, ಕಿರಣಸಾಗರ, ಶ್ವೇತಾ ಮನ್ನಿಕೇರಿ, ಮಲ್ಲಪ್ಪ ಉಪಸ್ಥಿತರಿದ್ದರು. ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತ ಮಹಿಳೆಯರಾದ ಲಕ್ಷ್ಮಿ ಶಿರಮಗೊಂಡ, ಹೇಮಶ್ರೀ ಬಿರಾದಾರ ಅವರನ್ನು ಸತ್ಕರಿಸಲಾಯಿತು. ಹಿರಿಯ ವಿಜ್ಞಾನಿ ಡಾ.ಎಸ್.ಎಂ. ವಸ್ತ್ರದ ಸ್ವಾಗತಿಸಿದರು. ಶ್ರೀಶೈಲ ರಾಠೋಡ ನಿರೂಪಿಸಿದರು, ಡಾ.ಪ್ರಕಾಶ ಎಚ್.ಟಿ ವಂದಿಸಿದರು.