ಮೇರು ವ್ಯಕ್ತಿತ್ವದ ಅಧ್ಯಾತ್ಮಿಕ ಮಹಾತಾಯಿ ಅಕ್ಕಮಹಾದೇವಿ

| Published : Oct 05 2024, 01:32 AM IST

ಸಾರಾಂಶ

ಬೀದರ್ ನಗರದ ಪ್ರಸಾದ ನಿಲಯದಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಸಮಾರಂಭ ನಡೆಯಿತು.

ಮರಣವೇ ಮಹಾನವಮಿ, ಕಲ್ಯಾಣ ಕ್ರಾಂತಿ ವಿಜಯೋತ್ಸವ ಉದ್ಘಾಟಿಸಿದ ಪ್ರೊ.ಲೀಲಾವತಿಕನ್ನಡಪ್ರಭ ವಾರ್ತೆ ಬೀದರ್

12ನೇ ಶತಮಾನದ ಮೇರು ವ್ಯಕ್ತಿತ್ವದ ಅಧ್ಯಾತ್ಮಿಕ ಮಹಾ ತಾಯಿ ಅಕ್ಕಮಹಾದೇವಿ ಚಿಕ್ಕ ವಯಸ್ಸಿನಲ್ಲಿ ಮನೆಯನ್ನು ತ್ಯಜಿಸಿ ಚೆನ್ನಮಲ್ಲಿಕಾರ್ಜುನನನ್ನು ಆರಾಧ್ಯ ದೇವರೆಂದು ನಂಬಿ ಜೀವನದಲ್ಲಿ ಬಹುದೊಡ್ಡ ಸವಾಲು ಎದುರಿಸಿ ಮನವನ್ನು ಗಟ್ಟಿ ಮಾಡಿಕೊಂಡು ಆತ್ಮಸ್ಥೈರ್ಯದಿಂದ ಅಂತರಂಗದ ಮಹಾ ಬೆಳಕಿಗಾಗಿ ಲೌಕಿಕ ಜೀವನ ತ್ಯಜಿಸಿದರು ಎಂದು ನಿವೃತ್ತ ಪ್ರಾಚಾರ್ಯೆ ಪ್ರೊ.ಲೀಲಾವತಿ ಚಾಕೋತೆ ನುಡಿದರು.

ನಗರದ ಪ್ರಸಾದ ನಿಲಯದಲ್ಲಿ ಅ.3ರಿಂದ 11ರ ವರೆಗೆ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಸಮಾರಂಭ ಉದ್ಛಾಟಿಸಿ ಮಾತನಾಡಿದ ಅವರು, ದಿಗಂಬರೆಯಾಗಿ ಕಲ್ಯಾಣದಡೆಗೆ ಬಸವ ಗುರುವಿನ ಮಹಾ ಮನೆಯಲ್ಲಿ ಜೀವನ ಪಯಣದ ಉದ್ದೇಶಗಳ ಚಿಂತನೆಗೈದು ಇಷ್ಟಲಿಂಗ ಶಿವಯೋಗದಲ್ಲಿ ತೊಡಗಿಸಿಕೊಂಡು ಅನೇಕ ಎಡರು ತೊಡರುಗಳಿಗೆ ಲೆಕ್ಕಿಸದೇ ತನ್ನ ಅಧ್ಯಾತ್ಮಿಕ ಸಾಧನೆಯ ಮತ್ತು ವಚನಗಳ ಮುಖಾಂತರ ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದರು.

ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕಿ ಧನಲಕ್ಷ್ಮೀ ಪಾಟೀಲ್ ಅವರು, ಅಕ್ಕಮಹಾದೇವಿಯ ಕುರಿತು ಅನುಭಾವ ನುಡಿದರು.

ಮಹಾಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ, ಬಸವಾದಿ ಶರಣರು ಮಾನವ ಕಲ್ಯಾಣಕ್ಕಾಗಿ, ಸಕಲ ಜೀವಿಗಳ ಅಂತರಂಗದಲ್ಲಿ ದೇವರನ್ನು ಕಂಡಂತಹ ದಿಶೆಯಲ್ಲಿ ಮಾನವೀಯ ಪ್ರೇಮ, ಜಾತಿ ಹಾಗೂ ವರ್ಗ ರಹಿತ ಸಮಾನತೆಗಾಗಿ ಪ್ರಾಣ ತ್ಯಾಗ ಮಾಡಿದ ದಿನವೇ ಮಹಾನವಮಿ ಆಗಿದೆ ಎಂದರು.

ನಿರ್ಮಲಾ ಸಿದ್ದಯ್ಯಾ ಕೌಡಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾಗೀರಥಿ ಮಡಿವಾಳಪ್ಪಾ, ಶಕುಂತಲಾ ಉಮಾಕಾಂತ ಮೀಸೆ ಮತ್ತು ಪ್ರೊ. ವಜ್ರಾ ಪಾಟೀಲ್, ಶ್ರೀಕಾಂತ ಬಿರಾದಾರ ಮುಖ್ಯ ಅತಿಥಿಯಾಗಿದ್ದರು.

ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ, ಅಕ್ಕಮಹಾದೇವಿ ತಾಯಿಯವರ ವೇಷ-ಭೂಷಣದ ಪಾತ್ರ ವಹಿಸಿರುವ ಮಾಲಾಶ್ರೀ ಗುರುನಾಥ ಉಪಸ್ಥಿತರಿದ್ದರು.