ಜಾತಿಗಣತಿಗೆ ಎಲ್ಲ ಸಮುದಾಯ ಶಾಸಕರು ಹೋರಾಡಬೇಕು: ಮುಖ್ಯಮಂತ್ರಿ ಚಂದ್ರು

| Published : Dec 18 2023, 02:00 AM IST

ಜಾತಿಗಣತಿಗೆ ಎಲ್ಲ ಸಮುದಾಯ ಶಾಸಕರು ಹೋರಾಡಬೇಕು: ಮುಖ್ಯಮಂತ್ರಿ ಚಂದ್ರು
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿಗಣತಿಗೆ ಓಬಿಸಿ, ಅಲ್ಪಾಸಂಖ್ಯಾತ, ದಲಿತ ಸಮುದಾಯದ ಶಾಸಕರು ಹೋರಾಟ ಮಾಡಬೇಕು. ಈ ಸಂಬಂಧ ಸದನದಲ್ಲಿ ಚರ್ಚೆ ಮಾಡಬೇಕು ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ರಾಜ್ಯ ಸರ್ಕಾರಕ್ಕೆ ಆಗ್ರಹಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಾತಿಗಣತಿ ಸಾರ್ವಜನಿಕರ ಆಸ್ತಿ. ಅದನ್ನು ಸ್ವೀಕಾರ ಮಾಡಿ ಸದನದಲ್ಲಿಟ್ಟು ಚರ್ಚೆ ಮಾಡಬೇಕು. ಈ ನಿಟ್ಟಿನಲ್ಲಿ ಓಬಿಸಿ, ಅಲ್ಪಾಸಂಖ್ಯಾತ, ದಲಿತ ಸಮುದಾಯದ ಶಾಸಕರು ಹೋರಾಟ ಮಾಡಬೇಕು ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 170 ಕೋಟಿ ರು. ಖರ್ಚು ಮಾಡಿ ಜಾತಿಗಣತಿ ಆಗಬೇಕು. ವೈಜ್ಞಾನಿಕವಾಗಿ ಮೀಸಲಾತಿ ಸಿಗಬೇಕು ಎಂಬ ದೃಷ್ಟಿಯಿಂದ ಮಾಡಿದ್ದಾರೆ. 2015ರಲ್ಲಿ 52 ವಿಚಾರಗಳನ್ನು ಇಟ್ಟುಕೊಂಡು ಮನೆ ಮನೆಗೆ ಹೋಗಿ ಜಾತಿಗಣತಿಯನ್ನು ಮಾಡಲಾಗಿದೆ. 1931ರಲ್ಲಿ ಜಾತಿಗಣತಿ ಆಗಿತ್ತು. ಆದರೆ ಜನಗಣತಿ ಪ್ರಕಾರ ಮೀಸಲಾತಿಯನ್ನು ಹೆಚ್ಚಳ ಮಾಡಿಕೊಂಡು ಹೋಗಲಾಗುತ್ತಿದೆ. ಮೀಸಲಾತಿ ಇರುವುದು ಜಾತಿ ಆಧಾರದ ಮೇಲೆ, ಜನಸಂಖ್ಯೆ ಆಧಾರದ ಮೇಲೆ ಅಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿಯನ್ನು ಸ್ವೀಕಾರ ಮಾಡಬೇಕು ಎಂದು ಒತ್ತಾಯಿಸಿದರು.

‘ಕಳೆದ ನ.24ರಂದು ಜಾತಿಗಣತಿಯನ್ನು ಜಯಪ್ರಕಾಶ್‌ ಅವರು ಅವಧಿ ಮುಂದೂಡಿದ್ದು, ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ತಾವು ಸಿಎಂ ಆಗಿದ್ದರೆ ಸ್ವೀಕಾರ ಮಾಡುತ್ತಿದೆ ಎಂದು ತೊಡೆ ತಟ್ಟಿ ಹೇಳಿದ್ದೀರಾ ನುಡಿದಂತೆ ನಡೆಯುವ ಸಿದ್ದರಾಮಯ್ಯ ಅವರು ಜಾತಿಗಣತಿಯನ್ನು ಸ್ವೀಕಾರ ಮಾಡಬೇಕು’ ಎಂದರು.

ಜಾತಿಗಣತಿ ಸಾರ್ವಜನಿಕರ ಆಸ್ತಿಯಾಗಿದ್ದು, ಅದನ್ನು ಸ್ವೀಕಾರ ಮಾಡಿ ಸದನಕ್ಕೆ ಇಡಬೇಕು. ಸದನದಲ್ಲಿ ಚರ್ಚೆ ಮಾಡಬೇಕು. ಅದನ್ನು ಒಪ್ಪುವುದು ಬಿಡುವುದು ಸದನಕ್ಕೆ ಸೇರಿದ್ದು ಎಂದು ಹೇಳಿದರು.

ಬಲಾಢ್ಯ ಸಮುದಾಯಗಳು ಜಾತಿಗಣತಿ ಸ್ವೀಕಾರ ಮಾಡದಂತೆ ಹೋರಾಟ ಮಾಡುತ್ತಿವೆ. ಅದೇ ರೀತಿಯಲ್ಲಿ ಓಬಿಸಿ, ಅಲ್ಪಸಂಖ್ಯಾತ, ದಲಿತ ಸಮುದಾಯ ಹಾಗೂ ಸಮುದಾಯದ ಶಾಸಕರು ಜಾತಿಗಣತಿ ಸ್ವೀಕಾರಕ್ಕೆ ಹೋರಾಟ ಮಾಡಬೇಕು ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ವಿಫಲರಾಗಿದ್ದಾರೆ. ವಿದ್ಯುತ್‌ ಉಚಿತ ನೀಡುತ್ತೇವೆ ಎಂದು ರೈತರಿಗೆ 8 ಗಂಟೆ ನೀಡುತ್ತಿದ್ದ ವಿದ್ಯುತ್‌ ಅನ್ನು 2-3 ಗಂಟೆಗೆ ನಿಲ್ಲಿಸಿದ್ದೀರಾ. ಕೆಪಿಎಸ್‌ಸಿಯ ಮೂಲಕ ಹುದ್ದೆಗಳನ್ನು ತುಂಬಿಲ್ಲ, ಶೇ.60ರಷ್ಟು ಉದ್ಯೋಗ ಖಾಲಿ ಇದೆ. ಹೈಕೋರ್ಟ್‌ನಿಂದ ಛೀಮರಿ ಹಾಕಿಸಿಕೊಂಡಿದ್ದಾರೆ ಎಂದು ಕುಟುಕಿದರು.

ರಾಜ್ಯದ್ಯಂತ ಆಮ್‌ ಆದ್ಮಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅರಳಿಕಟ್ಟೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅರಳಿಕಟ್ಟೆ ಕಾರ್ಯಕ್ರಮ ಜಿಲ್ಲೆಯಲ್ಲೂ ನಡೆಸಲಾಗುತ್ತಿದೆ ಎಂದರು.

ರಾಜ್ಯ ಪ್ರದಾನ ಕಾರ್ಯದರ್ಶಿ ಸೋಸಲೆ ಸಿದ್ದರಾಜು, ಜಿಲ್ಲಾಧ್ಯಕ್ಷ ಹರೀಶ್‌, ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್‌, ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ ಇದ್ದರು.

ಪ್ರತಾಪ್‌ ಸಿಂಹ ಮೇಲೆ ಕ್ರಮವಾಗಬೇಕು

ಹೊಸ ಪಾರ್ಲಿಮೆಂಟ್‌ನಲ್ಲಾದ ಒಂದು ದುರ್ಘಟನೆ ನಡೆದಿದ್ದು, ಈ ದುರ್ಘಟನೆಗೆ ಕಾರಣರಾದವರು ಅವರೊಂದಿಗೆ ಸುಮಾರು ವರ್ಷಗಳಿಂದ ನಿಕಟವಾದ ಸಂಪರ್ಕ ಹೊಂದಿರುವವರು ಬಹಳಷ್ಟು ಜನ ಸಂಸದ ಪ್ರತಾಪ್‌ಸಿಂಹ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಮುಂದಿನ ಚುನಾವಣೆಗೆ ಸಿಂಪತಿ ಪಡೆಯಲು ಮಾಡಿರುವ ಉದ್ದೇಶವಿದೆ ಇದನ್ನು ಪಕ್ಷದವರು ಪ್ರತಾಪ್‌ ಸಿಂಹ ಅವರಿಂದ ಮಾಡಿಸಿದ್ದಾರೋ ಏನೋ ಇರಬೇಕು. ಇಲ್ಲದಿದ್ದರೆ ಪ್ರತಾಪ್‌ ಸಿಂಹ ಮೇಲೆ ಕ್ರಮವಾಗಬೇಕು ಎಂದರು.

ನಮ್ಮ ಯೋಜನೆ ಕದ್ದಿದ್ದಾರೆ

‘ಆಮ್‌ ಆದ್ಮಿ ಪಾರ್ಟಿ ದೆಹಲಿಯಲ್ಲಿ 8 ವರ್ಷ ಆಡಳಿತ ನಡೆಸಿ ಸಾಧನೆ ಮಾಡಿದ್ದು, ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್‌ ಉಚಿತವಾಗಿ ನೀಡಿದ್ದು, ನಮ್ಮ ಪಕ್ಷದ ಯೋಜನೆಯನ್ನು ಕದ್ದು ಕಾಂಗ್ರೆಸ್‌ ಪಕ್ಷ ಕರ್ನಾಟಕದ ಮಾದರಿ ಎಂದು ಹೇಳಿಕೊಳ್ಳುತ್ತಿದೆ. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಕಾಣುವುದಿಲ್ಲ ಎಂದು ಕೊಂಡಂತಾಗಿದೆ’ ಎಂದು ವ್ಯಂಗ್ಯವಾಡಿದರು.

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸುದ್ದಿಗೋಷ್ಠಿ ನಡೆಸಿದರು.