ಶಿಕ್ಷಕರ ಬೇಡಿಕೆ ಈಡೇರಿಸಲು ಸದಾ ಬದ್ಧ

| Published : Feb 14 2024, 02:22 AM IST

ಸಾರಾಂಶ

ಪ್ರಮುಖವಾಗಿ ಶಾಲೆಗಳ ಮೂಲ ಸೌಕರ್ಯಗಳನ್ನು ಸರಿಪಡಿಸುವುದರ ಜೊತೆಗೆ ಬದಲಾಗುತ್ತಿರುವ ಪದ್ಧತಿಗಳಿಗೆ ಅನುಗುಣವಾಗಿ ಶಾಲೆಗಳಿಗೆ ಆಧುನಿಕ ವ್ಯವಸ್ಥೆಗಳ ಸ್ಪರ್ಶ ನೀಡಲು ಶ್ರಮಿಸಲಾಗುತ್ತಿದೆ. ಶಿಕ್ಷಣಕ್ಕೆ ನಾನು ಮೊದಲ ಆದ್ಯತೆ ನೀಡಿದ್ದೇನೆ .

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಳೆ ಪಿಂಚಣಿ ಅನುಷ್ಠಾನ, ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆ ಭರ್ತಿ, ಬಡ್ತಿಯಲ್ಲಾದ ದೋಷ ಸರಿಪಡಿಸುವುದು ಸೇರಿದಂತೆ ಶಿಕ್ಷಕರ ಸರ್ವ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಾಯುವ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಘಟಕದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ರಾಜು ಶೇಠ ಮಾತನಾಡಿ, ಪ್ರಮುಖವಾಗಿ ಶಾಲೆಗಳ ಮೂಲ ಸೌಕರ್ಯಗಳನ್ನು ಸರಿಪಡಿಸುವುದರ ಜೊತೆಗೆ ಬದಲಾಗುತ್ತಿರುವ ಪದ್ಧತಿಗಳಿಗೆ ಅನುಗುಣವಾಗಿ ಶಾಲೆಗಳಿಗೆ ಆಧುನಿಕ ವ್ಯವಸ್ಥೆಗಳ ಸ್ಪರ್ಶ ನೀಡಲು ಶ್ರಮಿಸಲಾಗುತ್ತಿದೆ. ಶಿಕ್ಷಣಕ್ಕೆ ನಾನು ಮೊದಲ ಆದ್ಯತೆ ನೀಡಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಎಸ್ಎಂ ಪಾಟೀಲ ಮಾತನಾಡಿ, ಸಂಘ ಶಿಕ್ಷಕರ ಬೇಕು ಬೇಡಿಕೆಗಳನ್ನು ಈಡೇರಿಸಲು ಶಕ್ತಿ ಒದಗಿಸುವುದರ ಜೊತೆಗೆ ಎಲ್ಲಾ ಹಂತಗಳಲ್ಲೂ ಶಿಕ್ಷಣದ ಗುಣಮಟ್ಟ ಮತ್ತು ವ್ಯವಸ್ಥೆಗಳ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ಮಾತನಾಡಿ, ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರಗಳ ಜನಪ್ರತಿನಿಧಿಗಳು ಶಿಕ್ಷಣ, ಮತ್ತು ಶಿಕ್ಷಕರ ಅಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ. ಅದೇ ರೀತಿ ಅತೀ ಅವಶ್ಯಕವಾದ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮತ್ತು ಖಾಲಿ ಹುದ್ದೆಗಳ ಭರ್ತಿಯತ್ತ ವಿಶೇಷ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.

ಈ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿ ಉಪ ನಿರ್ದೇಶಕ ಮೋಹನ ಕುಮಾರ ಹಂಚಾಟಿ, ಬಿಇಒಗಳಾದ ಎಸ್.ಪಿ ದಾಸಪ್ಪನವರ, ಮೋಹನ ದಂಡಿನ, ಸಂಘದ ಸಂಘಟನಾ ಕಾರ್ಯದರ್ಶಿ ತುಕಾರಾಂ ಬಾಗೆನ್ನವರ, ಉಪಾಧ್ಯಕ್ಷ ಶಿವಾನಂದ ಮಳಗಲಿ, ಎಂ.ಎಸ್ ತಲ್ಲೂರ, ಎಲ್ಎಸ್ ಬಹದ್ದೂರಿ, ಬಿ.ಎಸ್ ಗಾಣಿಗೇರ, ಬಿಆರ್‌ಸಿ ಎಂ.ಎಸ್. ಮೇದಾರ, ಪರಶುರಾಮ ಪಾಂಡವ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಘಟಕಗಳ ಸರ್ವ ಪದಾಧಿಕಾರಿಗಳು ಇದ್ದರು. ಕಾರ್ಯದರ್ಶಿ ಅಶೋಕ ಖೋತ ಸ್ವಾಗತಿಸಿದರು. ಸುಮಿತ್ರಾ ಕರವಿನಕೊಪ್ಪ ನಿರೂಪಿಸಿದರು. ವೀರೇಶ ಗಣಾಚಾರಿ ವಂದಿಸಿದರು.