ಡೆಂಪೋ ಡೈರಿ ಬಳಿ ಕಂಗೊಳಿಸುತ್ತಿದೆ ವೃಕ್ಷೋದ್ಯಾನ

| Published : Mar 23 2024, 01:01 AM IST

ಸಾರಾಂಶ

ಜಮಖಂಡಿಯ ಪ್ರಾದೇಶಿಕ ಅರಣ್ಯ ಇಲಾಖೆಯ ಆಶ್ರಯದಲ್ಲಿ ಅಂದಾಜು ೪೨ ಎಕರೆ ಭೂ ಪ್ರದೇಶದಲ್ಲಿ ವೃಕ್ಷೋದ್ಯಾನ ನಿರ್ಮಿಸಲಾಗುತ್ತಿದೆ. ಅಂದಾಜು ₹2 ಕೋಟಿ ವೆಚ್ಚದ ಈ ಯೋಜನೆಗೆ ೨೦೨೨ ಫೆ.೧೬ ರಂದು ಚಾಲನೆ ನೀಡಲಾಗಿತ್ತು.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ - ಬನಹಟ್ಟಿ

ಇತ್ತೀಚೆಗೆ ನಗರಗಳಲ್ಲಿ ಕಾಂಕ್ರೀಟ್ ಕಾಡುಗಳೇ ಹೆಚ್ಚುತ್ತಿವೆ. ಎಲ್ಲೆಂದರಲ್ಲಿ ಮುಗಿಲೆತ್ತರದ ಕಟ್ಟಡಗಳೇ ತಲೆ ಎತ್ತುತ್ತಿವೆ. ಇವುಗಳ ಮಧ್ಯೆ ಕಾಡುಗಳು ಹಾಗೂ ಚೆಂದದ ಉದ್ಯಾನಗಳು ಮರೆಯಾಗುತ್ತಿವೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ರಬಕವಿ - ಬನಹಟ್ಟಿ ತಾಲೂಕಿನ ಆಸಂಗಿಯ ಡೆಂಪೋ ಡೈರಿ ಹತ್ತಿರ ಭವ್ಯ ವೃಕ್ಷೋದ್ಯಾನ ನಿರ್ಮಾಣ ಆಗುತ್ತಿದೆ.

ಜಮಖಂಡಿಯ ಪ್ರಾದೇಶಿಕ ಅರಣ್ಯ ಇಲಾಖೆಯ ಆಶ್ರಯದಲ್ಲಿ ಅಂದಾಜು ೪೨ ಎಕರೆ ಭೂ ಪ್ರದೇಶದಲ್ಲಿ ವೃಕ್ಷೋದ್ಯಾನ ನಿರ್ಮಿಸಲಾಗುತ್ತಿದೆ. ಅಂದಾಜು ₹2 ಕೋಟಿ ವೆಚ್ಚದ ಈ ಯೋಜನೆಗೆ ೨೦೨೨ ಫೆ.೧೬ ರಂದು ಚಾಲನೆ ನೀಡಲಾಗಿತ್ತು. ಸದ್ಯ ವೃಕ್ಷೋದ್ಯಾನದ ಭೂ ಪ್ರದೇಶದ ಸುತ್ತಲೂ ಕಾಂಪೌಂಡ್ ನಿರ್ಮಾಣದ ಕಾಮಗಾರಿ ಬಲು ಬಿರುಸಿನಿಂದ ನಡೆಯುತ್ತಿದೆ. ಇಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಸಿ ರಸ್ತೆ ನಿರ್ಮಾಣ, ಮಕ್ಕಳು ಆಡುವ ಸಲಕರಣೆಗಳು, ಜೊತೆಗೆ ಇಲ್ಲಿರುವ ಎರಡಕ್ಕೂ ಹೆಚ್ಚು ಬಾಂದಾರಗಳನ್ನು ಅಭಿವೃದ್ಧಿಗೊಳಿಸಿ ಅಲ್ಲಿ ದೋಣಿ ವಿಹಾರದ ಯೋಜನೆ ಮಾಡಲಾಗುತ್ತಿದೆ.

ಎಲ್ಲ ಮರಗಳಿಗೆ ಹನಿ ನೀರಾವರಿಯ ಮೂಲಕ ನೀರು ನೀಡುವ ಸೌಕರ್ಯವನ್ನು ಮಾಡುವ ಕಾಮಗಾರಿ ಕೂಡಾ ಪ್ರಗತಿಯಲ್ಲಿದೆ. ಹಂತ ಹಂತವಾಗಿ ಈ ವೃಕ್ಷೋದ್ಯಾನ ಅಭಿವೃದ್ಧಿ ಹೊಂದುತ್ತಿದೆ. ಬನಹಟ್ಟಿಯ ಕೆಎಚ್‌ಡಿಸಿ ರಸ್ತೆಯಲ್ಲಿರುವ ನಾಲ್ಕು ಅರಣ್ಯ ಪ್ರದೇಶದ ಭೂಮಿಯಲ್ಲಿಯೂ ಕೂಡಾ ಅರಣ್ಯೀಕರಣಗೊಳಿಸಿ ಅಲ್ಲಿಯೂ ಮಕ್ಕಳಿಗೆ ಅನುಕೂಲವಾಗುವು ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಗಿಡ ಮರಗಳನ್ನು ರಕ್ಷಿಸುವುದರ ಜೊತೆಗೆ ಸುಂದರ ಪರಿಸರ ನಿರ್ಮಾಣ ಮಾಡುವ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.

ದಟ್ಟ ಅರಣ್ಯ ದರ್ಶನ: ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಭೂ ಪ್ರದೇಶ ಒಂದು ಬೃಹತ್ ಅರಣ್ಯ ನೋಡಿದಂತಾಗುವ ಎಲ್ಲ ಲಕ್ಷಣಗಳು ಇಲ್ಲಿ ಕಾಣುತ್ತಿವೆ. ಈ ಪ್ರದೇಶದಲ್ಲಿ ಅಂದಾಜು ೯೪೯೮೭ ಬೇವಿನ ಮರಗಳು ಬೆಳೆದು ನಿಂತಿವೆ. ಅರಣ್ಯ ಪ್ರದೇಶದಲ್ಲಿ ವಾಯುವಿಹಾರ ಮಾಡಲು ಉತ್ತಮ ರಸ್ತೆ ನಿರ್ಮಾಣವಾಗಿದೆ. ಅಲ್ಲಲ್ಲಿ ವಿಶ್ರಮಿಸಲು ಆಸನಗಳನ್ನು ಕೂಡಾ ಮಾಡಿದ್ದಾರೆ. ವಯೋವೃದ್ದರು, ವಾಯುವಿಹಾರಿಗಳಿಗೆ ಇಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ತಾಲೂಕಿನಲ್ಲಿಯೇ ಇದೊಂದು ಉತ್ತಮ ಮಾದರಿಯ ವೃಕ್ಷೋದ್ಯಾನವಾಗುವುದರಲ್ಲಿಯ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ವಾಯುವಿಹಾರಿಗಳು. ಈ ಮಾದರಿಯಲ್ಲಿಯ ಕಾಮಗಾರಿ ಚುರುಕಿನಿಂದ ಸಾಗಿದೆ.

ಈ ಭೂಮಿಯಲ್ಲಿ ಈ ಮೊದಲು ಸಾರ್ವಜನಿಕರು ಅಲ್ಲಲ್ಲಿ ಅಕ್ರಮಗೊಳಿಸಿಕೊಂಡು ಎಲ್ಲೆಂದರಲ್ಲಿ ರಸ್ತೆಗಳನ್ನು ನಿರ್ಮಿಸಿಕೊಂಡಿದ್ದರು. ಆದರೆ, ಇಲಾಖೆ ಅಧಿಕಾರಿಗಳು ಭೂ ನಕ್ಷೆ ಪ್ರಕಾರ ವ್ಯಾಪ್ತಿ ಪ್ರದೇಶದ ಗುರುತಿಸಿಕೊಂಡ ತಡೆಗೋಡೆ ನಿರ್ಮಿಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಾಸಿಂ ತೇನಗಿ, ವಲಯ ಅರಣ್ಯಾಧಿಕಾರಿ ವಿಜಯಕುಮಾರ ಕಾಳಪ್ಪನವರ, ಅರಣ್ಯ ಅಧಿಕಾರಿಗಳಾದ ಮಲ್ಲಿಕಾರ್ಜುನ ನಾವಿ, ಪಿ. ಎಸ್. ಪಾಟೀಲ, ಅಶ್ವಿನಿ ಮನ್ಮಿ, ಸೇರಿದಿಂತೆ ಅನೇಕರು ನಿತ್ಯ ಇಲ್ಲಿ ಶ್ರಮಿಸುತ್ತಿದ್ದಾರೆ. ಅವಳಿ ನಗರದ ಜನತೆ ಅಧಿಕಾರಿಗಳ ಈ ಪ್ರಾಮಾಣಿಕ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.