ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಯತ್ನ

| Published : Jan 19 2024, 01:45 AM IST

ಸಾರಾಂಶ

ಪಟ್ಟಣದ ಪ್ರತಿಷ್ಠಿತ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೋತ್ತರಗಳಿಗೆ ಉತ್ತರಿಸಿದರು

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಶೈಕ್ಷಣಿಕ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜತೆಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ಪಟ್ಟಣದ ಪ್ರತಿಷ್ಠಿತ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೋತ್ತರಗಳಿಗೆ ಉತ್ತರಿಸಿದರು. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಐದು ಕಿಮೀ ವ್ಯಾಪ್ತಿಯಲ್ಲಿ ಒಂದು ಪ್ರೌಢಶಾಲೆ ಸ್ಥಾಪಿಸುವ ನಿಯಮವಿದೆ. ಪಟ್ಟಣದಲ್ಲಿ 10 ಖಾಸಗಿ ಶಾಲೆಗಳಿದ್ದು, ಅದರಲ್ಲಿ ಅನೇಕ ಶಾಲೆಗಳು ಸರ್ಕಾರದ ಅನುದಾನಕ್ಕೆ ಒಳಪಟ್ಟಿವೆ. ಹೀಗಾಗಿ ಸರ್ಕಾರಿ ಪ್ರೌಢಶಾಲೆ ನೀಡಿಲ್ಲ. ಆದರೂ ನಾನು ಶಾಸಕನಾದ ಬಳಿಕ ಎರಡು ಬಾರಿ ಮನವಿ ಸಲ್ಲಿಸಿರುವೆ. ವಿಶೇಷ ಪ್ರಕರಣದಡಿ ಪಟ್ಟಣಕ್ಕೊಂದು ಪ್ರೌಢಶಾಲೆ ಮಂಜೂರಾತಿ ಪಡೆದುಕೊಳ್ಳುವ ಯತ್ನ ಮಾಡುವೆ ಎಂದರು.ಈಗಾಗಲೇ ಉದ್ಘಾಟನೆಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯ ಶೀಘ್ರ ಕಾರ್ಯಾರಂಭವಾಗಲಿದೆ. ಕಳೆದ 8 ತಿಂಗಳಿಂದ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ಅನುಮತಿ ದೊರಕಿದ ಕೂಡಲೇ ತರಗತಿಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.ಪಟ್ಟಣದ ಜೋಡಿ ಕೆರೆಗಳ ಅಭಿವೃದ್ಧಿ ಮತ್ತು ಭಾಗೀರಥಿ ನಾಲಾ ಅಭಿವೃದ್ಧಿಗಾಗಿ ಸರ್ಕಾರದಿಂದ ಒಟ್ಟು ₹35 ಕೋಟಿ ಮಂಜೂರಾತಿ ಪಡೆದುಕೊಳ್ಳಲಾಗಿದೆ. ತಾಲೂಕಿನ ಪೂರ್ವ ಭಾಗದ ಕಕಮರಿಯ ಅಮ್ಮಾಜೇಶ್ವರಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ 65 ಸಾವಿರ ಬೇಕರಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದ ಅವರು, ತಾಲೂಕಿನಲ್ಲಿ ಇನ್ನಷ್ಟು ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ರೈತಾಪಿ ಜನರಿಗೆ ಮತ್ತು ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.ವಿಧಾನಸಭೆ ಕಾರ್ಯಕಲಾಪಗಳಲ್ಲಿ ಎಂಎಲ್ಎ ಮತ್ತು ಎಂಎಲ್‌ಸಿ ಪಾತ್ರವೇನು? ಚುನಾವಣಾ ಆಯೋಗದ ಕೆಲಸವೇನು? ನೀತಿ ಸಂಹಿತೆ ಎಂದರೇನು? ಪ್ರಧಾನ ಮಂತ್ರಿಗಳ ಆಯ್ಕೆ ಹೇಗೆ ನಡೆಯುತ್ತದೆ? ರಾಷ್ಟ್ರಪತಿಗಳ ಆಯ್ಕೆ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ? ಹಿಂದಿನ ಶಿಕ್ಷಣ ಪದ್ಧತಿಗೂ ಇಂದಿನ ಶಿಕ್ಷಣ ಪದ್ಧತಿಗೆ ಇರುವ ವ್ಯತ್ಯಾಸವೇನು? ಸರ್ಕಾರಿ ನೌಕರ ಚುನಾವಣೆಗೆ ನಿಲ್ಲಬೇಕಾದರೆ ರಾಜೀನಾಮೆ ಯಾಕೆ ನೀಡಬೇಕು? ಇಂತಹ ಅನೇಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಶಾಸಕ ಲಕ್ಷ್ಮಣ ಸವದಿ ಅವರಿಗೆ ಕೇಳುವ ಮೂಲಕ ಉತ್ತರಗಳನ್ನು ಕಂಡುಕೊಂಡರು.ವೈದ್ಯರಿಗೆ ಕಾಡಲ್ಲಿದೆ ನಿರುದ್ಯೋಗ ಸಮಸ್ಯೆ: ಇಂದಿನ ದಿನಮಾನಗಳಲ್ಲಿ ಎಲ್ಲಾ ಪಾಲಕರು ತಮ್ಮ ಮಕ್ಕಳು ಡಾಕ್ಟರ್‌ ಮತ್ತು ಇಂಜಿನಿಯರ್ ಆಗಬೇಕೆಂಬ ಕನಸು ಹೊಂದಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆ ಇಂದಿನ ವೈದ್ಯಕೀಯ ಪರೀಕ್ಷೆಗಳಲ್ಲಿ ಯಂತ್ರಗಳದ್ದೇ ಹೆಚ್ಚಿನ ಮಹತ್ವವಿದೆ. ಮುಂದುವರಿದ ದೇಶಗಳಿಂದ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ಆಸ್ಪತ್ರೆಗಳು ಇಂದು ನಮ್ಮ ಶರೀರದ ಪರೀಕ್ಷೆ ನಡೆಸಿವೆ. ಮುಂಬರುವ ದಿನಮಾನಗಳಲ್ಲಿ ವೈದ್ಯಕೀಯ ಪದವಿ ಮುಗಿಸಿ ವೈದ್ಯರಾಗಿ ಬರುವವರಿಗೆ ನಿರುದ್ಯೋಗ ಸಮಸ್ಯೆ ಕಾಡುವ ಸಾಧ್ಯತೆ ಅಧಿಕವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ಆಗಬೇಕೆಂಬ ಕನಸು ಕಾಣದೇ, ಬೇರೆ ಬೇರೆ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನಿಲ ಶಿವಣಗಿ, ಉಪಾಧ್ಯಕ್ಷ ಅಶೋಕ ಬುರ್ಲಿ, ಕಾರ್ಯದರ್ಶಿ ವಿಜಯಕುಮಾರ ಬುರ್ಲಿ, ಶಿವಶಂಕರ ಹಂಜಿ, ಶ್ರೀಶೈಲ ಸಂಕ, ಓಂಕಾರಪ್ಪ ಸಾವಡಕರ, ಮುಖ್ಯೋಪಾಧ್ಯಾಯ ಎಂ.ಎಸ್.ದೇಸಾಯಿ, ಎಂ.ಬಿ.ಬಿರಾದಾರ, ಆಡಳಿತ ಅಧಿಕಾರಿಗಳಾದ ಪ್ರತಿಭಾ ನಾಯಕ, ಹನುಮಂತ ಗುಡೋಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿವಶಂಕರ ಹಂಜಿ ಸ್ವಾಗತಿಸಿದರು. ಪ್ರಕಾಶ್ ಮೊಹಜನ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿ. ವಿ. ಕವಟೇಕರ ವಂದಿಸಿದರು.