ಸಾರಾಂಶ
ಹಾಸನ ಜಿಲ್ಲೆಯಲ್ಲಿ ಗುರುವಾರ ನಡೆಯುವ ಕಾಂಗ್ರೆಸ್ ಪಕ್ಷದ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ದುರುದ್ದೇಶದಿಂದ ಕೂಡಿದೆ. ಈ ಸಮಾವೇಶಕ್ಕೆ ಕೋಟ್ಯಾಂತರ ರು. ಹಣವನ್ನು ವಿನಿಯೋಗ ಮಾಡುವ ಬದಲು ಸರ್ಕಾರಿ ಶಾಲೆ, ರಸ್ತೆ, ಆಸ್ಪತ್ರೆಗಳು ಹಾಗೂ ಸ್ಥಳೀಯ ಶಾಸಕರಿಗೆ ಅನುದಾನ ನೀಡಿದರೆ ಆದಷ್ಟು ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಅದನ್ನು ಹೊರತುಪಡಿಸಿ ಇಂದು ಹಾಸನ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ವಾಭಿಮಾನದ ಸಮಾವೇಶ ನಡೆಸುತ್ತಿರುವುದು ಸರಿಯಲ್ಲ ಎಂದು ಕೆಂಪೇಗೌಡ ವೇದಿಕೆ ರಾಜ್ಯಾಧ್ಯಕ್ಷ ಆನಂದ್ ಕಾಳೇನಹಳ್ಳಿ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶ ಕೈಗೊಂಡಿರುವುದು ಸರಿಯಲ್ಲ ಎಂದು ಕೆಂಪೇಗೌಡ ವೇದಿಕೆ ರಾಜ್ಯಾಧ್ಯಕ್ಷ ಆನಂದ್ ಕಾಳೇನಹಳ್ಳಿ ಕಿಡಿಕಾರಿದರು.ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಗುರುವಾರ ನಡೆಯುವ ಕಾಂಗ್ರೆಸ್ ಪಕ್ಷದ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ದುರುದ್ದೇಶದಿಂದ ಕೂಡಿದೆ. ಈ ಸಮಾವೇಶಕ್ಕೆ ಕೋಟ್ಯಾಂತರ ರು. ಹಣವನ್ನು ವಿನಿಯೋಗ ಮಾಡುವ ಬದಲು ಸರ್ಕಾರಿ ಶಾಲೆ, ರಸ್ತೆ, ಆಸ್ಪತ್ರೆಗಳು ಹಾಗೂ ಸ್ಥಳೀಯ ಶಾಸಕರಿಗೆ ಅನುದಾನ ನೀಡಿದರೆ ಆದಷ್ಟು ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಅದನ್ನು ಹೊರತುಪಡಿಸಿ ಇಂದು ಹಾಸನ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ವಾಭಿಮಾನದ ಸಮಾವೇಶ ನಡೆಸುತ್ತಿರುವುದು ಸರಿಯಲ್ಲ. ಯಾವ ಉದ್ದೇಶವನ್ನು ಇಟ್ಟುಕೊಂಡು ಈ ಸಮಾವೇಶವನ್ನು ನಡೆಸುತ್ತಿದ್ದಾರೆ ಎಂಬುದು ಅವರಿಗೇ ತಿಳಿಯಬೇಕು.
ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಭಾಗಗಳಲ್ಲಿ ಸಮಾವೇಶ ಮಾಡಿದರೆ ಅದಕ್ಕೆ ಒಂದು ಅರ್ಥ ಬರುತ್ತದೆ. ಹಾಸನ ಜಿಲ್ಲೆಯಲ್ಲಿ ಸಮಾವೇಶ ಕೈಗೊಂಡಿರುವುದು ಯಾವ ಪುರುಷಾರ್ಥಕ್ಕಾಗಿ? ಇತ್ತೀಚೆಗೆ ಕಾಂಗ್ರೆಸ್‌ನ ಮಾಜಿ ವಿಧಾನಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿಯವರು ತಾಲೂಕಿಗೆ ೨೦೦ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಸಮಾವೇಶದಿಂದ ಬಹಳಷ್ಟು ತೊಂದರೆ ಉಂಟಾಗುತ್ತದೆ. ಜೊತೆಗೆ ಈಗಾಗಲೇ ತಾಲೂಕಿನ ಸರ್ಕಾರಿ ಅಧಿಕಾರಿಗಳು ತಾಲೂಕಿನಲ್ಲಿ ಯಾವುದೇ ಸಾರ್ವಜನಿಕರ ಕೆಲಸ, ಕಾರ್ಯಗಳನ್ನು ನಿರ್ವಹಿಸದೆ ಮುಖ್ಯಮಂತ್ರಿಗಳ ಆಗಮನವಾಗುತ್ತದೆ ಎಂದು ತಾಲೂಕನ್ನು ಬಿಟ್ಟು ಜಿಲ್ಲಾ ಕೇಂದ್ರಕ್ಕೆ ತೆರಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುವುದು. ಇಂತಹ ಸಮಾವೇಶಗಳ ರಾಜಕಾರಣ ಬಿಟ್ಟು ಜನಪರ ಕೆಲಸಕಾರ್ಯಗಳನ್ನು ಮಾಡಲು ಮುಂದಾಗಬೇಕು ಎಂದರು.