ಸಾರಾಂಶ
ಮಂಡ್ಯ: ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ವೇತನ ವಿಳಂಬ ಮಾಡಿರುವ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಗುರುವಾರ ಮನವಿ ನೀಡಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರನ್ನು ಸರಬರಾಜು ಮಾಡಲು ಟೆಂಡರ್ ಪಡೆದ ಮೈಸೂರಿನ ಖಾಸಗಿ ಸಂಸ್ಥೆಯೊಂದು ಆರು ತಿಂಗಳಿಂದ ನೌಕರರಿಗೆ ವೇತನ ನೀಡಿದೇ ವಂಚಿಸಿದೆ ಎಂದು ಆರೋಪಿಸಿದರು. ನೌಕರರು ವೇತನ ನೀಡದಿದ್ದರ ಬಗ್ಗೆ ಪ್ರಶ್ನಿಸಿದರೆ ವೇತನ ನೀಡುವುದರ ಆದೇಶವೇ ಬಂದಿಲ್ಲವೆಂದು ಸಂಸ್ಥೆಯು ಸಬೂಬು ಹೇಳುತ್ತಾ ಮುಂದೂಡುತ್ತಾ ಬಂದಿದ್ದಾರೆ, ವೇತನದ ಮೇಲೆ ಅವಲಂಬಿತರಾದ ನೌಕರರ ಕುಟುಂಬಗಳು ಸಂಕಷ್ಟದಲ್ಲಿವೆ. ಹಾಗಾಗಿ ನಮಗೆ ವೇತನ ಕೊಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ನೌಕರರಿಗೆ ನ್ಯಾಯ ಸಿಗುವವರೆಗೂ ಖಾಸಗಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ನಮಗೆ ನ್ಯಾಯ ನೀಡಬೇಕು. ತಕ್ಷಣವೇ ಕ್ರಮ ತೆಗೆದುಕೊಂಡು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನೌಕರರ ಕುಟುಂಬಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.