ರೈತ, ಕನ್ನಡಪರ ಸಂಘಟನೆಗಳ ಮುಖಂಡರ ಬಂಧನ ಬಿಡುಗಡೆ

| Published : Feb 11 2025, 12:50 AM IST

ಸಾರಾಂಶ

ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ಮುಖಂಡರು ನಗರದ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ನಾಳೆ (ಫೆ.12) ಸಭೆ ಹಮ್ಮಿಕೊಂಡಿದ್ದು, ನಂತರ ಸುದ್ದಿಗೋಷ್ಠಿ ನಡೆಸಲಾಗುವುದು ಎಂದು ಮುಖಂಡರು ಮಾಧ್ಯಮದವರಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗಳಿಗೆ ನಿಷೇಧಾಜ್ಞೆ ವಿಧಿಸಿರುವುದನ್ನು ಹಿಂಪಡೆಯುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶದ್ವಾರದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾದ ರೈತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶದ್ವಾರದ ಎದುರು ಬೆಳಗ್ಗೆ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಿಷೇಧಾಜ್ಞೆ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡುವಂತೆ ಮನವಿ ಕೊಟ್ಟರೂ, ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ವಿರುದ್ಧವೂ ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವೇಶದ್ವಾರದ ಬಳಿ ಶಾಮಿಯಾನ ಹಾಕಿ ಧರಣಿ ಕೂರಲು ಧರಣಿನಿರತರು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ನಿಗದಿತ ಸ್ಥಳದಲ್ಲೇ ಧರಣಿ ನಡೆಸುವಂತೆ ಪೊಲೀಸರು ನಡೆಸಿದ ಮನವೊಲಿಕೆ ಪ್ರಯತ್ನಕ್ಕೆ ಒಪ್ಪದ ಮುಖಂಡರು, ನಾವು ಇಲ್ಲಿಯೇ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಮನವೊಲಿಕೆ ವಿಫಲವಾಗಿದ್ದರಿಂದ ಪೊಲೀಸರು ಮಧ್ಯಾಹ್ನ ಧರಣಿನಿರತರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದು, ಕೆಲ ಹೊತ್ತಿನ ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧಿಕಾರಿಗಳು ರಾಮನಗರಕ್ಕೆ ಜನರ ಸೇವೆ ಮಾಡಲು ಬಂದಿದ್ದಾರೋ ಅಥವಾ ಜನರಿಗೆ ತೊಂದರೆ ಕೊಡಲು ಬಂದಿದ್ದಾರೋ ಗೊತ್ತಿಲ್ಲ. ಇಂತಹ ಅಧಿಕಾರಿಯನ್ನು ರಾಜ್ಯದ ಯಾವ ಜಿಲ್ಲೆಯಲ್ಲಿಯೂ ನೋಡಿಲ್ಲ. ಬೇರೆ ಜಿಲ್ಲೆಗಳಲ್ಲಿ ನಾವು ಧರಣಿ ನಡೆಸಿದರೆ ಜಿಲ್ಲಾಧಿಕಾರಿಯೇ ಬಂದು ಮನವಿ ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾರೆ. ಆದರೆ, ಇಲ್ಲಿನ ಜಿಲ್ಲಾಧಿಕಾರಿ ಯಶವಂತ್ ಅದಕ್ಕೆ ತದ್ವಿರುದ್ಧವಾಗಿದ್ದಾರೆ ಕಿಡಿಕಾರಿದರು.

ಅಧಿಕಾರಿಗಳು ಹೋರಾಟಗಾರರ ಜೊತೆ ಸೌಜನ್ಯದಿಂದ ನಡೆದುಕೊಳ್ಳುತ್ತಾರೆ. ಆದರೆ, ಇಲ್ಲಿನ ಜಿಲ್ಲಾಧಿಕಾರಿ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಹೋರಾಟಗಾರರಿಗೆ ಗೌರವ ಕೊಡುವುದಿಲ್ಲ. ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಪ್ರತಿಭಟನೆಗೆ ಸ್ಥಳ ನಿಗದಿ ಮಾಡಲಾಗಿದೆ. ಇಲ್ಲಿಯೂ ಅದೇ ರೀತಿ ಮಾಡಿ ಎಂಬ ಬೇಡಿಕೆಗೆ ಸ್ಪಂದಿಸದ ಜಿಲ್ಲಾಧಿಕಾರಿ, ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ರೈತ ಸಂಘದ ವಿಭಾಗೀಯ ಅಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ಕಾನೂನಿಗೆ ಗೌರವ ಕೊಟ್ಟು ನಾವು ಬೀದಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಈ ನಮ್ಮ ತಾಳ್ಮೆಯ ಕಟ್ಟೆ ಒಡೆದರೆ, ಕಾನೂನು ಮುರಿದು ರೈತರ ಶಕ್ತಿ ಏನೆಂದು ತೋರಿಸುವುದು ಗೊತ್ತಿದೆ. ಮುಂದಾಗುವ ಅನಾಹುತಕ್ಕೆ ಜಿಲ್ಲಾಧಿಕಾರಿಯೇ ಹೊಣೆಯಾಗುತ್ತಾರೆ. ಅದಕ್ಕೆ ಅವಕಾಶ ಕೊಡದೆ ನಿಷೇಧಾಜ್ಞೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಎದುರು ನ್ಯಾಯ ಕೇಳಲು ಬಂದಾಗ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಇಂತಹವರ ಕಾರಣಕ್ಕೆ ಜನ ಬಂದೂಕು, ಕೊಡಲಿ ಹಿಡಿಯುವ ಸ್ಥಿತಿ ಬಂದಿದೆ. ಜಿಲ್ಲಾಧಿಕಾರಿಗೆ ಪಾಠ ಕಲಿಸುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.

ನಾಳೆ ಸಭೆ: ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ಮುಖಂಡರು ನಗರದ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ನಾಳೆ (ಫೆ.12) ಸಭೆ ಹಮ್ಮಿಕೊಂಡಿದ್ದು, ನಂತರ ಸುದ್ದಿಗೋಷ್ಠಿ ನಡೆಸಲಾಗುವುದು ಎಂದು ಮುಖಂಡರು ಮಾಧ್ಯಮದವರಿಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಚೀಲೂರು ಮುನಿರಾಜು, ಮಹಿಳಾ ಘಟಕದ ರಮ್ಯ, ಚಿಕ್ಕೇನಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

‘ರಾಮನಗರಕ್ಕಷ್ಟೇ ಸೀಮಿತವಾಗಿದ್ದ ಇಲ್ಲಿನ ಜಿಲ್ಲಾಧಿಕಾರಿ ವಿರುದ್ಧದ ಹೋರಾಟವನ್ನು ಇನ್ನು ಮುಂದೆ ರಾಜ್ಯಮಟ್ಟಕ್ಕೆ ವಿಸ್ತರಿಸಲಾಗುವುದು. ರೈತರ ಹೋರಾಟಕ್ಕೆ ಪ್ರಧಾನಿಯೇ ನಡುಗಿರುವಾಗ ಇನ್ನು ಈ ಜಿಲ್ಲಾಧಿಕಾರಿ ಯಾವ ಲೆಕ್ಕ? ಇವರಿಗೆ ರೈತರು ಪಾಠ ಕಲಿಸುವ ದಿನಗಳು ದೂರವಿಲ್ಲ. ರೈತ ಸಂಘ ಸೇರಿದಂತೆ ಸಂಘ– ಸಂಘಟನೆಗಳ ಜೊತೆ ಸಭೆ ನಡೆಸಿ ಸದ್ಯದಲ್ಲೇ ರಾಜ್ಯಮಟ್ಟದ ಹೋರಾಟವನ್ನು ರೂಪಿಸಲಾಗುವುದು’.

- ಬಡಗಲಪುರ ನಾಗೇಂದ್ರ, ಅಧ್ಯಕ್ಷರು, ರೈತಸಂಘ.