ವೀರಮಾರುತಿ ಸಭಾಭವನದಲ್ಲಿ ‘ಕಲಾ ಸಂಭ್ರಮ 2025’ ನ್ನು ನಿವೃತ್ತ ಶಿಕ್ಷಕಿ ಬಜಿರೆ ವಿಜಯಲಕ್ಷ್ಮಿ ಹೆಗ್ಡೆ ಉದ್ಘಾಟಿಸಿದರು.

ಮೂಡುಬಿದಿರೆ: ಶ್ರೀ ವೀರಮಾರುತಿ ದೇವಸ್ಥಾನ ಕೋಟೆಬಾಗಿಲು ಹಾಗೂ ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಸಹಯೋಗದಲ್ಲಿ ದ.ಕ. ಜಿಲ್ಲಾ ಹೆಗ್ಗಡೆ ಯುವ ಘಟಕ ವತಿಯಿಂದ ವೀರಮಾರುತಿ ಸಭಾಭವನದಲ್ಲಿ ‘ಕಲಾ ಸಂಭ್ರಮ 2025’ ನ್ನು ನಿವೃತ್ತ ಶಿಕ್ಷಕಿ ಬಜಿರೆ ವಿಜಯಲಕ್ಷ್ಮಿ ಹೆಗ್ಡೆ ಉದ್ಘಾಟಿಸಿದರು. ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಹಟ್ಟಾಜೆಗುತ್ತು ಪ್ರಭಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿ ಬೆಂಗಳೂರು ಹೆಗ್ಗಡೆ ಸೇವಾ ಸಂಘದ ಕಾರ್‍ಯದರ್ಶಿ ಶಶಿಧರ ಹೆಗ್ಡೆ ಮಾತನಾಡಿ, ಯುವಕರು ಶಿಕ್ಷಣದ ಜತೆಗೆ ಕಲೆ, ಸಾಹಿತ್ಯದಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಶಿಸ್ತು ಮತ್ತು ಆತ್ಮಸ್ಥೈರ್ಯ ಬೆಳೆಯುತ್ತದೆ. ಇಂದಿನ ದಿನಗಳಲ್ಲಿ ಸಾಕಷ್ಟು ಯುವ ಪ್ರತಿಭೆಗಳನ್ನು ಕಾಣುತ್ತಿದ್ದೇವೆ. ಅವಕಾಶಗಳು ಸಿಗುತ್ತಿವೆ. ಆದರೆ ಅದರಲ್ಲಿ ತೊಡಗಿಸಿಕೊಳ್ಳಲು ಯುವಕರಿಗೆ ಸಮಯ ಸಿಗುತ್ತಿಲ್ಲ‌. ಮೊಬೈಲ್ ಗೀಳಿನಿಂದ ಹೊರಬರಬೇಕು ಎಂದರು. ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ ಮಾತನಾಡಿ, ಹೆಗ್ಗಡೆ ಸಮಾಜವು ಯುವ ಶಕ್ತಿ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕೆಂದರು.

ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ ಮಾತನಾಡಿ, ಕಲೆಯನ್ನು ದೇವಕಲೆ ಎನ್ನುತ್ತೇವೆ. ಇಂತಹ ಕಲೆಯನ್ನು ಸಿದ್ಧಿಸಿಕೊಂಡಾಗ ನಮ್ಮನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ ಎಂದರು. ಉತ್ತಮ ಮಕ್ಕಳ ಚಲನಚಿತ್ರ ನಿರ್ದೇಶನಕ್ಕಾಗಿ ಕರ್ನಾಟಕ ಸರಕಾರದಿಂದ ಪುರಸ್ಕೃತರಾದ ಕಿಶೋರ್ ಮೂಡುಬಿದಿರೆ ಮತ್ತು ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಸಬ್ ಇನ್ ಸ್ಪೆಕ್ಟರಾಗಿ ಆಯ್ಕೆಯಾದ ಸಂಹಿತ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಕಾರ್‍ಯದರ್ಶಿ ಶುಭರಾಜ ಹೆಗ್ಡೆ, ಕಾರ್ಕಳ ವಲಯ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಸನತ್ ಹೆಗ್ಡೆ, ಸಂಧ್ಯಾ ವಸಂತ ಹೆಗ್ಡೆ, ಜಿಲ್ಲಾ ಹೆಗ್ಗಡೆ ಯುವ ಘಟಕದ ಅಧ್ಯಕ್ಷ ಅಶೋಕ್ ಹೆಗ್ಡೆ ಮತ್ತು ಕಾರ್‍ಯದರ್ಶಿ ನೀರಜ್ ಹೆಗ್ಡೆ ಉಪಸ್ಥಿತರಿದ್ದರು. ವೈಷ್ಣವ್ ಹೆಗ್ಡೆ ನಿರೂಪಿಸಿದರು. ದಿಶಾ ಹೆಗ್ಡೆ ಸ್ವಾಗತಿಸಿ ಶೈಲಾ ಹೆಗ್ಡೆ ವಂದಿಸಿದರು.