‘ಬದುಕಿನ ಸತ್ಯಗಳು’, ‘ಸ್ವಾತಿ ಮುತ್ತು’ ಕೃತಿ ಲೋಕಾರ್ಪಣೆ

| Published : May 27 2024, 01:13 AM IST

ಸಾರಾಂಶ

‘ಬದುಕಿನ ಸತ್ಯಗಳು’ ಕೃತಿಯನ್ನು ಹಿರಿಯ ಲೇಖಕಿ ಬಿ.ಎಂ ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಹಿರಿಯ ಲೇಖಕ ಸದಾನಂದ ನಾರಾವಿ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಹಿತಿ ನಳಿನಾಕ್ಷಿ ಉದಯರಾಜ್ ಅವರ ‘ಬದುಕಿನ ಸತ್ಯಗಳು’ ಸಮಕಾಲೀನ ಚಿಂತನೆಗಳ ಸಂಕಲನ ಮತ್ತು ‘ಸ್ವಾತಿಮುತ್ತು ’ ಚುಟುಕು ಸಂಕಲನ ನಗರದ ಮಹಿಳಾ ಸಭಾದಲ್ಲಿ ಲೋಕಾರ್ಪಣೆಗೊಂಡವು.ಕರಾವಳಿ ಲೇಖಕಿಯರ- ವಾಚಕಿಯರ ಸಂಘ ಹಾಗೂ ಬೆಂಗಳೂರು ವಸಂತಪುರದ ಸುಶಾಂತ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಉದ್ಘಾಟಿಸಿದರು. ‘ಬದುಕಿನ ಸತ್ಯಗಳು’ ಕೃತಿಯನ್ನು ಹಿರಿಯ ಲೇಖಕಿ ಬಿ.ಎಂ ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಹಿರಿಯ ಲೇಖಕ ಸದಾನಂದ ನಾರಾವಿ ಅನಾವರಣಗೊಳಿಸಿದರು.

ಬಳಿಕ ಮಾತನಾಡಿ ಮುದ್ದು ಮೂಡುಬೆಳ್ಳೆ, ಲೇಖಕಿ ನಳಿನಾಕ್ಷಿ ಉದಯರಾಜ್ ಅವರ ಎರಡೂ ಕೃತಿಗಳು ಬದುಕಿನ ಸತ್ಯಗಳೊಂದಿಗೆ ಸಾರ್ವಕಾಲಿಕ ಸತ್ಯಗಳನ್ನು ಅನಾವರಣಗೊಳಿಸಿವೆ. ಅಂಕಣ ಬರಹಗಳನ್ನು ಈ ರೀತಿಯಾಗಿ ಕೃತಿ ರೂಪದಲ್ಲಿ ಕಟ್ಟಿಕೊಟ್ಟಾಗ ಅದು ಓದುವ ಆಸಕ್ತಿಯನ್ನು ಮೂಡಿಸುವುದರೊಂದಿಗೆ ಜೀವನಾನುಭವಗಳನ್ನು ನೀಡುವ ಸಂದೇಶಗಳಾಗಿ ಜನಸಾಮಾನ್ಯರಿಗೆ ತಲುಪಲು ಸಾಧ್ಯ ಎಂದರು.

ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಮತ್ತು ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಸೈನ್ಯಾಧಿಕಾರಿ ಹಾಗೂ ಕೆನರಾ ಬ್ಯಾಂಕಿನ ಪ್ರಬಂಧಕ ಸುಕುಮಾರ್ ಕುಂಬಳೆ, ಸುಶಾಂತ ಪ್ರಕಾಶನದ ಪ್ರಕಾಶಕ ಹಾಗೂ ಇನ್ಫೋಸಿಸ್ ಸಂಸ್ಥೆಯಲ್ಲಿ ಸಂಶೋಧಕರಾಗಿರುವ ಸುಶಾಂತ್ ರಾಜ್ ಇದ್ದರು.

ನಳಿನಾಕ್ಷಿ ಉದಯರಾಜ್ ಸ್ವಾಗತಿಸಿದರು. ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಆಶಯ ಗೀತೆ ಹಾಡಿದರು. ವಿಜಯಲಕ್ಷ್ಮೀ ಕಟೀಲು ನಿರೂಪಿಸಿದರು. ಅಕ್ಷತಾ ಅನಿಕೇತ್ ವಂದಿಸಿದರು.