ಕಾಂಕ್ರೀಟ್‌ ಕಾಡಾಗುತ್ತಿರುವ ಬೆಂಗಳೂರು ನಗರ

| Published : Jun 28 2024, 12:50 AM IST

ಸಾರಾಂಶ

ಬೆಂಗಳೂರು ನಗರದ ಬಸವನಗುಡಿ, ಜಯನಗರ ಬಡಾವಣೆಗಳು ಮಾದರಿ ಬಡಾವಣೆಗಳಾಗಿವೆ. ಆ ರೀತಿಯ ಬಡಾವಣೆಗಳನ್ನು ಇಂದಿನ ಕಾಲದಲ್ಲಿ ಏಕೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಬಳಸಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದೇವೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾಡಪ್ರಭು ಕೆಂಪೇಗೌಡರು 16 ನೇ ಶತಮಾನದಲ್ಲಿ ಕಂಡಿದ್ದ ದೂರದೃಷ್ಟಿಯ ಕನಸ್ಸಿನ ಫಲವೇ ಇಂದಿನ 1.40 ಕೋಟಿ ಜನರು ವಾಸಿಸುತ್ತಿರುವ ಬೃಹತ್ ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ತಿಳಿಸಿದರು. ಗುರುವಾರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ “ಶ್ರೀ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ”ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಡಾವಣೆಯಾದ ಕೆರೆಗಳು

ಒಂದು ನಗರದ ಭವಿಷ್ಯತ್ತಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಜಲ ಸಂರಕ್ಷಣೆಯ ಮೂಲಗಳಾದ ಕೆರೆ, ಕುಂಟೆಗಳು ಕಲ್ಯಾಣಿಗಳನ್ನು ನಿರ್ಮಿಸಿ ದೂರ ದೃಷ್ಟಿಯ ಕನಸನ್ನು ಕಂಡಿದ್ದರು. ಇಂದಿನ ಪೀಳಿಗೆಯವರು ಕೆರೆಗಳನ್ನು ಬಸ್ ನಿಲ್ದಾಣಗಳ ಮತ್ತು ಬಡವಣೆಗಳನ್ನಾಗಿ ನಿರ್ಮಿಸಿ ಕಾಂಕ್ರೀಟ್‌ ಕಾಡು ಬೆಳೆಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಬೆಂಗಳೂರು ನಗರದ ಬಸವನಗುಡಿ, ಜಯನಗರ ಬಡಾವಣೆಗಳು ಮಾದರಿ ಬಡಾವಣೆಗಳಾಗಿವೆ. ಆ ರೀತಿಯ ಬಡಾವಣೆಗಳನ್ನು ಇಂದಿನ ಕಾಲದಲ್ಲಿ ಏಕೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಬಳಸಿಕೊಳ್ಳುವಂತಹ ಸ್ಥಿತಿಗೆ ಇಂದು ನಾವು ತಲುಪಿರುವುದಕ್ಕೆ ನಾವುಗಳೇ ಕಾರಣ ಎಂದರು. ವಿಜಯನಗರ ಮಾದರಿ ನಗರ

ಪ್ರಗತಿಪರ ಚಿಂತಕರಾದ ಮಳ್ಳೂರು ಶಿವಣ್ಣ ಶ್ರೀ ಕೆಂಪೇಗೌಡ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ, ಬೆಂಗಳೂರು ನಿರ್ಮಾತೃ ಎಂಬ ಹೆಗ್ಗಳಿಕೆಯು ಇವರಿಗಿದೆ. ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಊಳಿಗಮಾನ್ಯ ಆಡಳಿತಗಾರರಾಗಿದ್ದರು. ವಿಜಯನಗರ ಸಾಮ್ರಾಜ್ಯದ ವೈಭವ ನೋಡಿದ್ದರಿಂದ ಅಂತದ್ದೇ ಒಂದು ನಗರವನ್ನು ಸ್ಥಾಪಿಸಬೇಕು ಎಂಬ ಕನಸು ಕಂಡಿದ್ದ ಇವರು ಬೆಂಗಳೂರು ಕಟ್ಟಿ ಬೆಳೆಸಿದರು ಎಂದು ತಿಳಿಸಿದರು.ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಪ್ರಗತಿಪರ ಸಾಧಕ ರೈತರಾದ ಎ. ರಾಮಚಂದ್ರರೆಡ್ಡಿ, ವೀಣಾ.ವಿ, ವೈ.ಎನ್. ಶ್ರೀನಿವಾಸರೆಡ್ಡಿ, ರವಿಚಂದ್ರರೆಡ್ಡಿ, ಕಾಮರೆಡ್ಡಿ, ಸತೀಶ್, ಎ.ಸಿ.ಶಿವಾರೆಡ್ಡಿ, ರಾಧಮ್ಮ, ಡಿ.ನರಸಿಂಹರೆಡ್ಡಿ, ದೊಡ್ಡವೆಂಕಟರೆಡ್ಡಿ, ದೇವೀರಪ್ಪ ಹಾಗೂ ವೈ.ವೆಂಕಟೇಶ ರವರಿಗೆ ಸನ್ಮಾನಿಸಲಾಯಿತು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಚಿವರು ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ಮರಳಸಿದ್ದೇಶ್ವರ ದೇವಸ್ಥಾನದ ಮುಂಭಾಗದಿಂದ ಶ್ರೀ ಕೆಂಪೇಗೌಡರ ಪಲ್ಲಕ್ಕಿ ಮತ್ತು ಜಾನಪದ ಕಲಾತಂಡದ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಮಹಿಳಾ ಮಣಿಗಳ ಪೂರ್ಣಕುಂಭ, ಆರತಿ ಹಾಗೂ ವಿದ್ಯಾರ್ಥಿಗಳ ಬ್ಯಾಂಡ್ ಪ್ರದರ್ಶನಗಳು ಜನರ ಮೆಚ್ಚುಗೆಗೆ ಪಾತ್ರವಾದವು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ. ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮನಿಷಾ, ತಹಶೀಲ್ದಾದರ್ ಅನಿಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್, ಮತ್ತಿತರರು ಇದ್ದರು.ಸಿಕೆಬಿ-4 ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ “ಶ್ರೀ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ”ಯ ಕಾರ್ಯಕ್ರಮವನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು