ಸಾರಾಂಶ
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಮಕ್ಕಳು ಶೇ.೯೦ರಷ್ಟು ಉತ್ತಮ ಫಲಿತಾಂಶ ಪಡೆದಿದ್ದಾರೆ, ಮುಖ್ಯ ಪರೀಕ್ಷೆಯಲ್ಲಿಯೂ ಮೂರನೇ ಸ್ಥಾನದೊಳಗೆ ಬರುತ್ತೇವೆ ಎಂಬ ಭರವಸೆಯಿದೆ. ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಶಿಕ್ಷಕರು ಹೆಚ್ಚು ಪರಿಶ್ರಮ ಹಾಕಿದ್ದೀರಿ, ಖಂಡಿತ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದರಲ್ಲದೆ, ಹೆಚ್ಚಿನ ಶ್ರಮ ಹಾಕಿ ಮಕ್ಕಳ ಏಳಿಗಾಗಿ ಶ್ರಮಿಸಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುವುದು ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ.೨೧ರಿಂದ ಏ.೪ ರವರೆಗೆ ಜಿಲ್ಲಾ ವ್ಯಾಪ್ತಿಯ ೭೭ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಯಾವುದೇ ಲೋಪಗಳಾಗದಂತೆ ಎಚ್ಚರವಹಿಸಿ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಸೂಚಿಸಿದ್ದಾರೆ.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ೨೦೨೪-೨೫ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಹಾಗೂ ಪಶ್ನೆ ಪತ್ರಿಕೆ ಪಾಲಕರಿಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಸಂದರ್ಭದಲ್ಲಿ ಯಾವುದೇ ರೀತಿಯ ಅವ್ಯವಹಾರಗಳು, ಅವಘಢಗಳು ಸಂಭವಿಸದಂತೆ ನಿಗಾವಹಿಸುವುದರ ಜೊತೆಗೆ ಪ್ರಾಮಾಣಿಕವಾಗಿ ಪರೀಕ್ಷೆ ನಡೆಸುವ ಮೂಲಕ ಜಿಲ್ಲೆಗೆ ಉತ್ತಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿ ಎಂದು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಹಾಗೂ ಪಶ್ನೆ ಪತ್ರಿಕೆ ಪಾಲಕರಿಗೆ ಹೇಳಿದರು.ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಮಕ್ಕಳು ಶೇ.೯೦ರಷ್ಟು ಉತ್ತಮ ಫಲಿತಾಂಶ ಪಡೆದಿದ್ದಾರೆ, ಮುಖ್ಯ ಪರೀಕ್ಷೆಯಲ್ಲಿಯೂ ಮೂರನೇ ಸ್ಥಾನದೊಳಗೆ ಬರುತ್ತೇವೆ ಎಂಬ ಭರವಸೆಯಿದೆ. ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಶಿಕ್ಷಕರು ಹೆಚ್ಚು ಪರಿಶ್ರಮ ಹಾಕಿದ್ದೀರಿ, ಖಂಡಿತ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದರಲ್ಲದೆ, ಹೆಚ್ಚಿನ ಶ್ರಮ ಹಾಕಿ ಮಕ್ಕಳ ಏಳಿಗಾಗಿ ಶ್ರಮಿಸಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುವುದು ಎಂದರು.ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆಯಲೇಬೇಕು ಎಂದು ಮಕ್ಕಳಿಗೆ ಒತ್ತಡ ಹೇರಬೇಡಿ, ಮಕ್ಕಳಲ್ಲಿ ಪರೀಕ್ಷಾ ಭಯವಿರುತ್ತದೆ. ಆ ಭಯವನ್ನು ಹೋಗಲಾಡಿಸಿ, ಯಾವುದೇ ರೀತಿಯಲ್ಲೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಇದೇ ಅಂತಿಮ ಪರೀಕ್ಷೆಯಲ್ಲ ಎಂದು ಮಕ್ಕಳಿಗೆ ಧೈರ್ಯ ತುಂಬಿ ಎಂದ ಅವರು ಪರೀಕ್ಷೆ ಬರೆಯುವ ಮಕ್ಕಳೆಲ್ಲರಿಗೂ ಶುಭ ಹಾರೈಸಿದರು.ಪರೀಕ್ಷಾ ಕೇಂದ್ರದಲ್ಲಿ ಕುಡಿಯುವ ನೀರು, ಮತ್ತಿತರ ಮೂಲಭೂತ ಸೌಕರ್ಯಗಳ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ನೋಡಲ್ ಅಧಿಕಾರಿ ಗಾಯಿತ್ರಿ ಅವರು ಮಾತನಾಡಿ, ಪರೀಕ್ಷಾ ಸಂದರ್ಭದಲ್ಲಿ ಯಾವುದೇ ರೀತಿಯ ಗಾಬರಿ, ಒತ್ತಡಕ್ಕೆ ಒಳಗಾಗದೆ ತಾಳ್ಮೆಯಿಂದ ನಮ್ಮ ಜವಾಬ್ದಾರಿ ನಿರ್ವಹಿಸೋಣ, ಯಾವ ಕೆಂದ್ರದಲ್ಲಿಯೂ ಯಾವುದೇ ರೀತಿಯ ತೊಂದರೆಗಳಾಗದಂತೆ ಜಾಗೃತಿ ವಹಿಸೋಣ, ಪರೀಕ್ಷೆಗೆ ನೇಮಕ ಮಾಡಿರುವ ಅಧಿಕಾರಿಗಳ ಹೊರತು ಯಾರನ್ನೂ ಸಹ ಪರೀಕ್ಷಾ ಕೇಂದ್ರಗಳಿಗೆ ಬಿಡಬೇಡಿ. ನಿರ್ಭೀತಿಯಿಂದ ಆತ್ಮವಿಶ್ವಾಸದಿಂದ ಪರೀಕ್ಷೆ ನಡೆಸಿ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾತನಾಡಿ, ಪರೀಕ್ಷಾ ಸೂಚನೆಗಳನ್ನು ಕಡ್ಡಾಯವಾಗಿ ಎಲ್ಲರೂ ಓದಿ, ಆ ನಿಯಮಗಳನ್ನೆಲ್ಲಾ ಪಾಲಿಸಿ ಯಶಸ್ವಿಯಾಗಿ ಪರೀಕ್ಷೆ ಮಾಡಿ, ನಮ್ಮ ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಡೋಣ ಎಂದರಲ್ಲದೆ, ಪರೀಕ್ಷಾ ಸಮಯ ತೊಂದರೆಗಳಾದಲ್ಲಿ ಸಂಪರ್ಕಿಸಲು ಸಹಾಯವಾಣಿ ಸಂಖ್ಯೆ ನೀಡಿದರಲ್ಲದೆ, ಮೊಬೈಲ್ ಸ್ವಾಧೀನಾಧಿಕಾರಿಗಳ ತಕ್ಷಣ ನೇಮಕ ಮಾಡಿಕೊಳ್ಳಲು ಸೂಚಿಸಿದರು.ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಮುಖ್ಯ ಅಧೀಕ್ಷಕರು ಹಾಗೂ ಪಶ್ನೆಪತ್ರಿಕೆ ಪಾಲಕರು ಉಪಸ್ಥಿತರಿದ್ದರು.