ಸಾರಾಂಶ
ಟ್ಟಡ ನಕ್ಷೆ ವಿಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಜನತೆಗೆ ಅಲೆದಾಟ ತಪ್ಪಿಸಲು ಸರ್ಕಾರ ಮುಂದಾಗಿದ್ದು, ‘ನಂಬಿಕೆ ನಕ್ಷೆ’ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ
ಬೆಂಗಳೂರು : ಕಟ್ಟಡ ನಕ್ಷೆ ವಿಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಜನತೆಗೆ ಅಲೆದಾಟ ತಪ್ಪಿಸಲು ಸರ್ಕಾರ ಮುಂದಾಗಿದ್ದು, ‘ನಂಬಿಕೆ ನಕ್ಷೆ’ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರೇ ತಮ್ಮ ಕಟ್ಟಡ ನಕ್ಷೆಯನ್ನು ಅನುಮೋದಿತ ಕಟ್ಟಡ ವಿನ್ಯಾಸಕಾರರು ಅಥವಾ ಎಂಜಿನಿಯರ್‌ಗಳ ಬಳಿ ಅನುಮೋದಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳುವ ಯೋಜನೆ ಇದಾಗಿದೆ. 50/80 ವಿಸ್ತೀರ್ಣದವರೆಗಿನ ನಿವೇಶನಗಳಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದರು.
ಬಿಡಿಎ, ಗೃಹ ನಿರ್ಮಾಣ ಸಂಘದವರು 50/80 ವಿಸ್ತೀರ್ಣದವರೆಗಿನ ನಿವೇಶನಗಳನ್ನೇ ಹೆಚ್ಚಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಈ ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಾಣ ಹಾಗೂ ನವೀಕರಣಕ್ಕೆ ಯಾವುದೇ ತೊಂದರೆಯಿಲ್ಲದೇ ಮುಂದಾಗಬಹುದು. ಅನುಮೋದಿತ ಲೆಕ್ಕ ಪರಿಶೋಧಕರಂತೆ ಅನುಮೋದಿತ ಎಂಜಿನಿಯರ್‌ಗಳು ಹಾಗೂ ಕಟ್ಟಡ ವಿನ್ಯಾಸಕಾರ ಮೂಲಕ ತಾತ್ಕಾಲಿಕ ಕಟ್ಟಡ ನಕ್ಷೆಗೆ ಅನುಮತಿ ನೀಡಲಾಗುವುದು. ನಂತರ ಪಾಲಿಕೆಯ ಎಂಜಿನಿಯರ್‌ಗಳು ಪರಿಶೀಲನೆ ನಡೆಸುತ್ತಾರೆ ಎಂದರು.
ಮೊದಲು ಬಿಬಿಎಂಪಿಯ ಕೆಲವೆಡೆ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಅಲ್ಲಿ ಯಶಸ್ವಿಯಾಗಿ ಜಾರಿಯಾದ ಬಳಿಕ ಯೋಜನೆಯ ಸಾಧಕ ಭಾದಕಗಳನ್ನು ಸರಿಪಡಿಸಿ ಪ್ರಸ್ತುತ ಬಿಬಿಎಂಪಿಯ ಎಲ್ಲಾ ವಲಯಗಳಿಗೆ ವಿಸ್ತರಿಸಲಾಗುತ್ತಿದೆ. ಇದರಿಂದ ಜನರು ಪಾಲಿಕೆಗೆ ಅಲೆಯುವುದು ತಪ್ಪುತ್ತದೆ ಎಂದು ನುಡಿದರು.
15 ದಿನದಲ್ಲಿ ರಸ್ತೆಗಳು ಗುಂಡಿ ಮುಕ್ತ
ನಗರದಲ್ಲಿ 2,795 ರಸ್ತೆಗುಂಡಿಗಳನ್ನು ಗುರುತಿಸಲಾಗಿದ್ದು, ಎಲ್ಲಾ ರಸ್ತೆ ಗುಂಡಿಗಳನ್ನು ಮುಂದಿನ 15 ದಿನಗಳಲ್ಲಿ ಸಂಪೂರ್ಣವಾಗಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ₹660 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳ ದುರಸ್ತಿ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಮಳೆ ಬಂದಾಗ ನೀರು ನಿಂತಿರುವ ಮತ್ತು ವಸತಿ ಪ್ರದೇಶಗಳಿಗೆ ನೀರು ನುಗ್ಗಿರುವ ಪ್ರದೇಶಗಳಲ್ಲಿ ಭಾಗಶಃ ಸರಿ ಪಡಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ರಾಜಕಾಲುವೆಯ 50 ಮೀ. ಸುತ್ತಳತೆಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಎನ್‌ಜಿಟಿಯ ನಿಯಮಗಳಿವೆ. ಪ್ರಸ್ತುತ 300 ಕಿ.ಮೀ. ಗುರುತಿಸಿ 30 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು. ಭೂಮಿ ಬಿಟ್ಟುಕೊಡುವ ಖಾಸಗಿ ಜಮೀನುಗಳ ಮಾಲೀಕರಿಗೆ ಪರಿಹಾರವಾಗಿ ಟಿಡಿಆರ್ ನೀಡಲಾಗುವುದು. ಅದನ್ನು ಅವರು ಮಾರಾಟ ಮಾಡಿಕೊಳ್ಳಬಹುದು. ಹೆಬ್ಬಾಳ, ನಾಗಾವರ, ಬೆಳ್ಳಂದೂರು, ಬೆಂಗಳೂರು ದಕ್ಷಿಣ ಭಾಗದಲ್ಲಿ ಒಂದಷ್ಟು ಕಡೆ ಭೂಮಿ ಗುರುತಿಸಲಾಗಿದೆ. ಮೊದಲ ಹಂತದಲ್ಲಿ 100 ಕಿ.ಮೀ. ದೂರ ಕೆಲಸ ಮಾಡಲಾಗುವುದು. ಇದಕ್ಕಾಗಿ ₹200 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ರಸ್ತೆಗಳಲ್ಲಿ ಬಸ್ ಓಡಾಟಕ್ಕೆ ಅವಕಾಶವಿಲ್ಲ. ಬದಲಾಗಿ ಶಾಲಾ, ನಾಗರಿಕರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುವುದು ಎಂದರು.
ನನ್ನ ಬೈಕ್‌ನಲ್ಲಿ ನಗರ ಪ್ರದಕ್ಷಿಣೆ: ಡಿ.ಕೆ.ಶಿವಕುಮಾರ್
ಸಾರ್ವಜನಿಕರಿಗಾಗಿ ‘ರಸ್ತೆ ಗುಂಡಿ ಗಮನʼ ಆ್ಯಪ್ ಅನ್ನು ಪರಿಚಯಿಸಿದ್ದು, ಅದರಲ್ಲಿ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ರಸ್ತೆಗಳ ವೀಕ್ಷಣೆಗಾಗಿ ನನ್ನ ಹಳೆಯ ಬೈಕ್ ದುರಸ್ತಿ ಮಾಡಿಸಿದ್ದು, ಅದರಲ್ಲಿ ಹೋಗಿ ವೀಕ್ಷಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಅಧಿಕಾರಿಗಳು ಮುಖ್ಯರಸ್ತೆಗಳನ್ನು ಮಾತ್ರ ತೋರಿಸುತ್ತಾರೆ. ಅದಕ್ಕೆ ಒಳ ರಸ್ತೆಗಳನ್ನು ಬೈಕ್ ಅಲ್ಲಿ ಓಡಾಡಿ ವೀಕ್ಷಿಸುತ್ತೇನೆ. ಪಾಲಿಕೆ ಆಯುಕ್ತರನ್ನು ಜತೆಯಲ್ಲಿ ಕೂರಿಸಿಕೊಂಡು ಒಂದು ಸುತ್ತು ಹೋಗುತ್ತೇನೆ ಎಂದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))