ಬೇಲೂರು ಶ್ರೀ ಚನ್ನಕೇಶವಸ್ವಾಮಿ ಅದ್ಧೂರಿ ಬ್ರಹ್ಮರಥೋತ್ಸವ

| Published : Apr 11 2025, 12:35 AM IST

ಸಾರಾಂಶ

ಬೇಲೂರು ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ಜಿಲ್ಲೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಶ್ರೀ ಚನ್ನಕೇಶವ ಸ್ವಾಮಿಯ ದಿವ್ಯ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥವನ್ನು ಪುಷ್ಪಲಂಕಾರಗಳಿಂದ ಶೃಂಗರಿಸಿ ಪೂಜಾ ವಿಧಿವಿಧಾನ ನೆರವೇರಿಸಿ ರಾಜಗೋಪುರದ ಮಹಾದ್ವಾರದಿಂದ ಶ್ರೀ ಚನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಯನ್ನು ವೇದಘೋಷಗಳ ನಡುವೆ ಪ್ರತಿಷ್ಠಾಪಿಸಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ವಿಶ್ವವಿಖ್ಯಾತ, ಐತಿಹಾಸಿಕ ಬೇಲೂರು ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.

ಗುರುವಾರ ಬೆಳಗ್ಗೆ 10:30ರಿಂದ 11 ಗಂಟೆಯ ಮಿಥುನ ಲಗ್ನ ಶುಭ ಆರಂಭದಲ್ಲಿ ಸಲ್ಲುವ ಅಮೃತಗಳಿಗೆಯಲ್ಲಿ ಐತಿಹಾಸಿಕ ಬ್ರಹ್ಮ ರಥೋತ್ಸವ ಗಳಿಗೆ ತೇರು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಜಿಲ್ಲೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಶ್ರೀ ಚನ್ನಕೇಶವ ಸ್ವಾಮಿಯ ದಿವ್ಯ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥವನ್ನು ಪುಷ್ಪಲಂಕಾರಗಳಿಂದ ಶೃಂಗರಿಸಿ ಪೂಜಾ ವಿಧಿವಿಧಾನ ನೆರವೇರಿಸಿ ರಾಜಗೋಪುರದ ಮಹಾದ್ವಾರದಿಂದ ಶ್ರೀ ಚನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಯನ್ನು ವೇದಘೋಷಗಳ ನಡುವೆ ಪ್ರತಿಷ್ಠಾಪಿಸಲಾಯಿತು.

ಭದ್ರತೆ:

ನಾಡಿನಲ್ಲಿ ಮಳೆ, ಬೆಳೆ, ಆರೋಗ್ಯ, ಶಾಂತಿ, ನೆಮ್ಮದಿ ವೃದ್ಧಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಪ್ರದಾಯದಂತೆ ನಾಡಗೌಡರು ಕಹಳೆ ವಾದ್ಯ, ಡೊಳ್ಳು ಕುಣಿತ, ಸಾಂಸ್ಕೃತಿಕ ಮೆರವಣಿಗೆಯಲ್ಲಿ ಆಗಮಿಸಿ ಶ್ರೀ ಚನ್ನಕೇಶವ ಸ್ವಾಮಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರಾ ಮಹೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಸುಮಾರು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಜಾತ್ರೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿ.ಸಿ ಕ್ಯಾಮೆರಾ ಅಳವಡಿಸಿ ಸರ್ಪಗಾವಲಿನಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿತ್ತು.

ಮೂಲ ಸೌಕರ್ಯ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ ಭಕ್ತರಿಗಾಗಿ ವಿಶೇಷ ಬಸ್ ವ್ಯವಸ್ಥೆ, ಪುರಸಭೆಯಿಂದ ಕುಡಿಯುವ ನೀರು, ಕಸದ ತೊಟ್ಟಿ, ಭಕ್ತರಿಗೆ ಹರಕೆ ಮೂಡಿ ತೀರಿಸಿದ ನಂತರ ಸ್ನಾನಕ್ಕೆ ಕೊಠಡಿ, ಮೊಬೈಲ್ ಶೌಚಾಲಯ ಸ್ವಚ್ಛತೆ ಮತ್ತು ಪಾರ್ಕಿಂಗ್ ವ್ಯವಸ್ಥೆ, ಅನ್ನಪ್ರಸಾದ ವಿನಿಯೋಗ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಜಿಲ್ಲಾಡಳಿತ ಮತ್ತು ಸ್ಥಳೀಯ ಪುರಸಭೆಯಿಂದ ಈ ಬಾರಿ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿತ್ತು.

ಭಕ್ತಾದಿಗಳಿಗೆ ಮಜ್ಜಿಗೆ:

ರಥೋತ್ಸವದ ಅಂಗವಾಗಿ ಪಟ್ಟಣದ ಎಸ್ ಬಿಐ ಬ್ಯಾಂಕ್ ವತಿಯಿಂದ ಬಿಸಿಲಲ್ಲಿ ಬಾಯಾರಿದ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಲಾಯಿತು‌.

ಎಸ್ ಬಿಐ ಬ್ಯಾಂಕ್ ವ್ಯವಸ್ಥಾಪಕಿ ಜಿ. ಭಾರತಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಎಸ್ ಬಿ ಐ ಬ್ಯಾಂಕ್ ವತಿಯಿಂದ ಮಜ್ಜಿಗೆ ವಿತರಿಸಲಾಗುತ್ತಿದೆ. ಬಿಸಿಲಿನ ಬೇಗೆ ಹಾಗು ರಥೋತ್ಸವ ಮುಗಿಸಿ ದಣಿದು ಬರುವ ಭಕ್ತಾದಿಗಳಿಗೆ ನಮ್ಮ ಬ್ಯಾಂಕ್ ವತಿಯಿಂದ ಮಜ್ಜಿಗೆ ಸೇವೆ ಹಮ್ಮಿಕೊಳ್ಳಲಾಗಿದ್ದು ಚನ್ಬಕೇಶವ ಸ್ವಾಮಿಎಲ್ಲರಿಗೂ ಒಳ್ಳೆಯದು ಮಾಡಲಿ ಹಾಗೂ ಉತ್ತಮ ಮಳೆ ಬೆಳೆ ಬಂದು ನಾಡಿನ ರೈತರು ಸಂತೋಷವಾಗಿರಲಿ ಎಂದರು.ಈ ಸಂದರ್ಭದಲ್ಲಿ ನೆಹರೂನಗರ ಎಸ್ ಬಿಐ ಶಾಖೆಯ ಮಮತಾ,ಶರತ್, ಅಶ್ವಿನಿ, ಸಲೀನಾ, ಮಂಜುನಾಥ್, ಎಸ್ಬಿಐ ಮಂಜು, ಸುನೀಲ್,ಪ್ರದೀಪ್, ಮನೋಜ್ ಸಾಯಿಕಿರಣ್, ಸುಮಿತ್ರ ಲಕ್ಷ್ಮೀ,ನಾಗಭೂಷಣ್ ,ವಾಸು, ಅಡುಗೆ ರವಿ ಇತರರು ಇದ್ದರು. ರಥೋತ್ಸವದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್, ಜಿಲ್ಲಾಧಿಕಾರಿ ಸತ್ಯಭಾಮ, ಮಾಜಿ ಸಚಿವ ರೇವಣ್ಣ, ಹಾಸನ ಆಡಳಿತ ಅಧಿಕಾರಿ ಶಾಂತಲಾ, ತಾಲೂಕು ದಂಡಾಧಿಕಾರಿ ಎಂ.ಮಮತಾ, ಪುರಸಭೆ ಅಧ್ಯಕ್ಷ ಅಶೋಕ್, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಯೋಗೇಶ್, ವೃತ್ತ ನಿರೀಕ್ಷಕ ರೇವಣ್ಣ ಇತರರು ಹಾಜರಿದ್ದರು.