ಕೋಟೆ ನಾಡಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ

| Published : Apr 20 2024, 01:02 AM IST

ಕೋಟೆ ನಾಡಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆಯ ಮಾರ್ಗದೂದ್ದಕ್ಕೂ ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸಿದವು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಅವರು ಶುಕ್ರವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ನಗರದ ಸಕ್ರಿ ಶಾಲೆ ಹತ್ತಿರದ ಕಾಂಗ್ರೆಸ್ ಕಚೇರಿಯಿಂದ ರೋಡ್ ಶೋ ಪ್ರಾರಂಭವಾಯಿತು. ರೋಡ್ ಶೋ ಉದ್ದಕ್ಕೂ ಸಾವಿರಾರು ಜನರು ಸೇರಿ ತಮ್ಮ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದರು. ಬಿಸಿಲಿನ ಬೇಗೆಯಲ್ಲೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ವಾದ್ಯಗೋಷ್ಠಿ, ಡೊಳ್ಳು ಗಮನಸೆಳೆಯಿತು. ಕಾಂಗ್ರೆಸ್ ಧ್ವಜವನ್ನು ಹಿಡಿದ ಕಾರ್ಯಕರ್ತರು ಜೈಕಾರ ಕೂಗುತ್ತಾ ಹೆಜ್ಜೆ ಹಾಕಿದರು. ಸಂಯುಕ್ತಾ ಪಾಟೀಲ ಅವರೊಂದಿಗೆ ತೆರೆದವಾಹನದಲ್ಲಿ ಸಚಿವರಾದ ಎಚ್.ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ಆರ್‌.ಬಿ.ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್.ಪಾಟೀಲ್, ಉಮಾಶ್ರೀ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಜಿ.ಟಿ.ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯ ಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಮುಖಂಡರಾದ ಬಿ.ಬಿ ಚಿಮ್ಮನಕಟ್ಟಿ, ಸಿದ್ದು ಕೊಣ್ಣೂರ, ಆನಂದ ನ್ಯಾಮಗೌಡ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.

ಜನರೊಂದಿಗೆ ಹೆಜ್ಜೆ ಹಾಕಿದ ಕಾಶಪ್ಪನವರ್:ಮೆರವಣಿಗೆ ಜಾಥಾ ಸಾಗುತ್ತಿದ್ದ ಮಾರ್ಗದಲ್ಲಿ ಜನರೊಂದಿಗೆ ಹೆಜ್ಜೆ ಹಾಕಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಗಮನಸೆಳೆದರು. ಕಾಂಗ್ರೆಸ್ ಧ್ವಜ ಹಿಡಿದು ಜನರೊಂದಿಗೆ ಘೋಷಣೆ ಕೂಗುತ್ತಾ ಸಾಗಿದರು. ಅಂಬೇಡ್ಕರ್‌ ಸರ್ಕಲ್‌ನಲ್ಲಿ ರ್‍ಯಾಲಿ ಸಾಗುತ್ತಿದ್ದ ವೇಳೆ ವೀಣಾ ಕಾಶಪ್ಪನವರ ಅವರೂ ಜೊತೆಗೂಡಿ, ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಜೊತೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಹಾರ ಹಾಕಿದರು. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಕೈ ಶಕ್ತಿ ಪ್ರದರ್ಶನ:

ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷವು ಭರ್ಜರಿ ರೋಡ್ ಶೋ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿತು. ನಗರದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ಪರ ಘೋಷಣೆ, ಸಂಯುಕ್ತಾ ಪಾಟೀಲ ಪರ ಜಯಕಾರ ಮುಗಿಲು ಮುಟ್ಟಿದ್ದವು. ನೆರೆದಿದ್ದ ಸಾವಿರಾರು ಕಾರ್ಯಕರ್ತರು, ಅಭಿಮಾನ ಹರ್ಷೋದ್ಘಾರದ ನಡುವೆ ತೆರೆದ ವಾಹನದಲ್ಲಿ ಅಭ್ಯರ್ಥಿ ಸಂಯುಕ್ತಾ ಪಾಟೀಲ ಕೈ ಬೀಸುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆಯಾದವು. ಸಚಿವರು, ನಾಯಕರು ಕಾರ್ಯಕರ್ತರು, ಅಭಿಮಾನಿಗಳತ್ತ ಕೈ ಬೀಸುತ್ತಿದ್ದಂತೆ ಜಯಘೋಷಗಳು ಮೊಳಗಿದವು.

ಕಾಂಗ್ರೆಸ್‌ ಮೆರವಣಿಗೆ ಎಂ.ಜಿ.ರಸ್ತೆ, ಪೊಲೀಸ್ ಚೌಕಿ, ಅಡತ ಬಜಾರ, ಹೊಸ ಕಾಯಿಪಲ್ಲೆ ಮಾರುಕಟ್ಟೆ ಮಾರ್ಗವಾಗಿ ಪಂಖಾ ಮಸೀದಿ, ಹಳೇ ಪೋಸ್ಟ ಆಫೀಸ್ ಮುಖಾಂತರ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ ತಲುಪಿತು. ಅಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ನಗರದ ಸಕ್ರಿ ಹೈಸ್ಕೂಲ್ ಮೈದಾನ ತಲುಪಿ ಸಮಾಪ್ತಿಯಾಯಿತು. ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆಯ ಮಾರ್ಗದೂದ್ದಕ್ಕೂ ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸಿದವು. ಕಾಂಗ್ರೆಸ್ ಪಕ್ಷ ಜೈ ಕಾರ, ಹಸ್ತಕ್ಕೆ ಮತ ದೇಶಕ್ಕೆ ಹಿತ ಸೇರಿದಂತೆ ನಾನಾ ರೀತಿಯ ಘೋಷಣೆಗಳು ಮೊಳಗಿದವು. ಜಾಂಜ್ ಪತಾಕ್, ಡೊಳ್ಳು ವಾದನ ನಾದಕ್ಕೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ನಾಯಕರು ಕೈ ಮುಗಿದ ಮತಯಾಚನೆ ಮಾಡಿದರು.