ಮತಕ್ಕಾಗಿ ಎಂಥಹ ಕೆಲಸಕ್ಕೂ ಬಿಜೆಪಿ ಸಿದ್ಧ

| Published : Apr 21 2024, 02:24 AM IST

ಸಾರಾಂಶ

ಮಣಿಪುರ ಹಿಂಸಾಚಾರ ಕಂಡೂ ಕಾಣದಂತೆ ಮೌನವಾಗಿದ್ದರು. ದೇಶದ ಆರ್ಥಿಕ ಸ್ಥಿತಿ ಸುಧಾರಣೆ, ಸಮಾಜದಲ್ಲಿ ಕೋಮು ಸೌಹಾರ್ದತೆ ಪಾಲನೆ, ಅಭಿವೃದ್ಧಿ ಬಿಜೆಪಿ ಸರ್ಕಾರದ ಆದ್ಯತೆ ಪಟ್ಟಿಯಲ್ಲೇ ಇಲ್ಲ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಧಾನಿ ನರೇಂದ್ರ ಮೋದಿಯ ಮಾತು ಕೇಳಲು ಮಾತ್ರ ಚೆಂದ. ಆದರೆ, ಕೃತಿ ಶೂನ್ಯ. ಬಿಜೆಪಿಯವರು ವೋಟಿಗಾಗಿ ಎಂಥ ಕೆಲಸವನ್ನೂ ಮಾಡಲು ಹಿಂಜರಿಯುವುದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಆರೋಪಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಭಾಗವಾನ ಸಮಾಜ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾತನಾಡ ಬೇಕಾದ ವಿಷಯದ ಬಗ್ಗೆ ಮೋದಿ ತುಟಿ ಪಿಟಕ್‌ ಎನ್ನುವುದಿಲ್ಲ. ಮಣಿಪುರ ಹಿಂಸಾಚಾರ ಕಂಡೂ ಕಾಣದಂತೆ ಮೌನವಾಗಿದ್ದರು. ದೇಶದ ಆರ್ಥಿಕ ಸ್ಥಿತಿ ಸುಧಾರಣೆ, ಸಮಾಜದಲ್ಲಿ ಕೋಮು ಸೌಹಾರ್ದತೆ ಪಾಲನೆ, ಅಭಿವೃದ್ಧಿ ಬಿಜೆಪಿ ಸರ್ಕಾರದ ಆದ್ಯತೆ ಪಟ್ಟಿಯಲ್ಲೇ ಇಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌ 70 ವರ್ಷ ಅಧಿಕಾರ ನಡೆಸಿ ದೇಶಕ್ಕೆ ಏನು ಕೊಡುಗೆ ನೀಡಿದೆ ಎಂದು ಬಿಜೆಪಿ ಮುಖಂಡರು ಪ್ರಶ್ನಿಸುತ್ತಾರೆ. ಆದರೆ, ಅವರ 10 ವರ್ಷದ ಕೊಡುಗೆ ಏನು ಎಂಬುದನ್ನು ದೇಶದ ಜನರಿಗೆ ಹೇಳಬೇಕಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೂ ಮಾಡದಿದ್ದರೆ ಭಾರತ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿತ್ತೇ ? ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಏಕೈಕ ಪಕ್ಷ ಕಾಂಗ್ರೆಸ್. ಸಮಾಜದಲ್ಲಿ ಕೋಮು ಸಾಮರಸ್ಯ ಕಾಯ್ದುಕೊಳ್ಳಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಆಡಳಿತ ಬಂದರೆ ದೇಶ ಗಂಡಾಂತರಕ್ಕೆ ಸಿಲುಕಲಿದೆ ಎಂದು ಆತಂಕ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುವ ಆತಂಕವಿದೆ. ಈ ಅಪಾಯವನ್ನು ತಪ್ಪಿಸಲು ಕಾಂಗ್ರೆಸ್ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವ ಅಗತ್ಯವಿದೆ. ನನಗೆ ಕೆಲಸ ಮಾಡುವ ಉತ್ಸಾಹ ಇದೆ. ನೀವೆಲ್ಲಾ ಒಂದು ಅವಕಾಶ ಕಲ್ಪಿಸಿದರೆ ಬಾಗಲಕೋಟೆಯಲ್ಲಿ ಹೊಸ ಅಧ್ಯಾಯ ಬರೆಯಲು ನಾನು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಹೇಳಿಕೆಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ಮಾಡಿದರು. ನರೇಂದ್ರ ಮೋದಿ ಪ್ರಧಾನಿಯಾದರೆ ಭಾರತ ದೇಶ ಬಿಟ್ಟು ಹೋಗುವೆ ಎಂದು ಹೇಳಿದ್ದ ಗೌಡರು, ಇಂದು ಅವರ ಪಕ್ಕದಲ್ಲೇ ಕುಳಿತು ಗುಣಗಾನ ಮಾಡುತ್ತಾರೆ. ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸುತ್ತಾರೆ. ಅವರ ಪಕ್ಷದ ತತ್ವ-ಸಿದ್ಧಾಂತಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಶ್ರೀಮಂತರ ಪರ. ಅವರಿಗೆ ಈ ದೇಶದ ಬಡವರ ಬಗ್ಗೆ ಕಾಳಜಿ ಇಲ್ಲ. ಅಂಬಾನಿ, ಅದಾನಿ ಅವರಂಥ ಉದ್ಯಮಗಳ ಪರ ನಿಲ್ಲುವ ಮೋದಿಗೆ ನೇಕಾರರು, ರೈತರು, ಕೂಲಿ ಕಾರ್ಮಿಕರ ಬಗ್ಗೆ ಕಳಕಳಿ ಇಲ್ಲ. ಬಣ್ಣದ ಮಾತುಗಳ ಮೂಲಕ ಜನರನ್ನು ಮರುಳು ಮಾಡಿ ಮತ ಗಳಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಗೇಲಿ ಮಾಡಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ದೇಶಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನೆ ಮಾಡುವ ಬಿಜೆಪಿ ನಾಯಕರು ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂದಿ, ರಾಜೀವಗಾಂಧಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅನುಷ್ಠಾನಕ್ಕೆ ತಂದಿರುವ ಅಭಿವೃದ್ಧಿ ಯೋಜನೆಗಳ ಅವಲೋಕನ ಮಾಡಬೇಕು. ಆಹಾರ ಭದ್ರತೆ, ಹಸಿರು ಕ್ರಾಂತಿ, ಡಿಜಿಟಲೈಸೇಷನ್, ಬ್ಯಾಂಕುಗಳ ರಾಷ್ಟ್ರೀಕರಣ ಇವೆಲ್ಲ ಕೊಡುಗೆ ಯಾರದ್ದು ಎಂಬುದನ್ನು ನೆನಪು ಮಾಡಿಕೊಳ್ಳಬೇಕು ಎಂದರು.

ಮಾಜಿ ಸಚಿವ ಎಸ್.ಆರ್‌. ಪಾಟೀಲ, ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ, ಹಟ್ಟಿ ಗೋಲ್ಡ್ ಮೈನ್ಸ್ ಅಧ್ಯಕ್ಷ ಜೆ.ಟಿ. ಪಾಟೀಲ, ಶಾಸಕ ಎಚ್.ವೈ. ಮೇಟಿ ಮಾತನಾಡಿದರು. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಮಾತ ಅಧ್ಯಕ್ಷ ಎಂ.ಎಂ. ಭಾಗವಾನ್, ಐ.ಎ. ಮಮದಾಪುರ, ಎಚ್.ಡಿ. ಚೌಧರಿ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಾಂತಾನಾಯಕ್, ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ ಸೇರಿದಂತೆ ಹಲವು ಮುಖಂಡರು ಇದ್ದರು.

--

ಬಾಕ್ಸ್

ನಿಷ್ಠೆ ಪ್ರಶ್ನಾತೀತ

ಭಾಗವಾನ ಸಮಾಜದ ಕಾಂಗ್ರೆಸ್ ನಿಷ್ಠೆ ಪ್ರಶ್ನಾತೀತ. ಆದರೆ ಪಕ್ಷ ನಿಷ್ಠೆಯೊಂದೇ ಸಾಲದು. ಮತಗಟ್ಟೆಗೆ ಹೋಗಿ ಮತ ಚಲಾವಣೆ ಮಾಡಿದರೆ ಮಾತ್ರ ನಿಷ್ಠೆಗೆ ಅರ್ಥ ಬರುತ್ತದೆ. ಐದು ವರ್ಷ ನೆಮ್ಮದಿಯ ಬದುಕು ಬೇಕೆಂದರೆ ಒಂದು ದಿನ ಅಂಗಡಿಗಳಿಗೆ ರಜೆ ಮಾಡಿ ಮತ ಹಾಕಲು ಮತಗಟ್ಟೆಗಳಿಗೆ ಹೋಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ. ಸೌದಾಗಾರ್ ಹೇಳಿದರು.

ಎಲ್ಲ ಧರ್ಮಗಳಿಗೂ ಅಧಿಕಾರ ನೀಡಿದ ಏಕೈಕ ಪಕ್ಷ ಎಂದರೆ ಕಾಂಗ್ರೆಸ್. ಅಲ್ಪಸಂಖ್ಯಾತ ಸಮಾಜಕ್ಕೆ ಕಾಂಗ್ರೆಸ್‌ ಸಾಕಷ್ಟು ಪ್ರಾತಿನಿಧ್ಯ ನೀಡಿದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಭಾಗವಾನ ಸಮಾಜದ ಅಧ್ಯಕ್ಷ ಎಂ.ಎಂ. ಭಾಗವಾನ್ ಮಾತನಾಡಿ, ಈ ಚುನಾವಣೆಯಲ್ಲಿ ಪ್ರತಿಶತ 98ರಷ್ಟು ಮತ ಚಲಾವಣೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.