ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿ ನಾಯಕರ ವರ್ತನೆ ಹಾಗೂ ಹೇಳಿಕೆಗಳನ್ನು ಗಮನಿಸಿದರೆ ಅವರಿಗೆ ಸೋಲಿನ ಭೀತಿ ಆರಂಭವಾಗಿದೆ ಎಂಬುದು ಅರ್ಥವಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.ನೀಲಾನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆ ರಕ್ಷಣೆ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ, ಮಣಿಪುರ ಹಿಂಸಾಕೃತ್ಯಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದನ ಮೇಲೆ ಕ್ರಮಕ್ಕೆ ಆಗ್ರಹಿಸಿ ಕುಸ್ತಿಪಟುಗಳ ಹೋರಾಟಕ್ಕೆ ಸ್ಪಂದಿಸಲಿಲ್ಲ. ಪದಕಗಳನ್ನು ಮರಳಿಸಿದರೂ ಪ್ರತಿಕ್ರಿಯೆ ನೀಡಲಿಲ್ಲ. ಲೈಂಗಿಕ ಕಿರುಕುಳದ ಆರೋಪ ಹೊತ್ತ ಅದೇ ವ್ಯಕ್ತಿಗೆ ಮತ್ತೆ ಲೋಕಸಭೆಗೆ ಟಿಕೆಟ್ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದರೆ ಮಹಿಳೆಯರ ರಕ್ಷಣೆಗೆ ಕಠಿಣ ಕಾಯ್ದೆ ತರಬಹುದಿತ್ತು. ಆದರೆ, ಆ ಕೆಲಸ ಮಾಡಲಿಲ್ಲ. ಮಹಿಳೆಯರ ರಕ್ಷಣೆ ಮಾತುಗಳು ನೈಜ ಕಳಕಳಿ ಹೊಂದಿಲ್ಲ. ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ. ಅವರೇ ಅಧಿಕಾರದಲ್ಲಿದ್ದಾರೆ. ಮಹಿಳಾ ರಕ್ಷಣೆಗೆ ಕಠಿಣ ಕಾಯ್ದೆ ರೂಪಿಸಬಹುದು. ರಾಜ್ಯ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿ ಇದ್ದಿದ್ದರಿಂದಲೇ ಗೃಹಲಕ್ಷ್ಮೀ, ಶಕ್ತಿಯಂತಹ ಯೋಜನೆಗಳನ್ನು ರೂಪಿಸಿದೆ. ಆದರೆ, ಈ ಯೋಜನೆಗಳ ಯಶಸ್ಸು ಸಹಿಸದ ಕೆಲವರು ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿ ತಮ್ಮ ವ್ಯಕ್ತಿತ್ವ ಏನು ಎಂಬುದನ್ನು ತೋರಿಸಿದರು ಎಂದು ಕುಟುಕಿದರು.ಒಬಿಸಿ ಘಟಕದ ಅಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ನಾಯಕರ ಮಕ್ಕಳೆ ಮುಸ್ಲಿಂ ಸಮಾಜದೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದ್ದಾರೆ. ದಿನೇಶ್ ಗುಂಡೂರಾವ್ ಬಗ್ಗೆ ಟೀಕೆ ಮಾಡುವ ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ಬಾಗಲಕೋಟೆ ಕ್ಷೇತ್ರದ ಹಾಲು ಮತ ಸಮಾಜದವರು ಕಾಂಗ್ರೆಸ್‌ಗೆ ಮತ ನೀಡಬೇಡಿ ಎಂದು ಯತ್ನಾಳ್ ಕರೆ ನೀಡಿದ್ದಾರೆ. ಯಾರಿಗೆ ಮತ ನೀಡಬೇಕು ಎಂದು ಹಾಲುಮತ ಸಮಾಜಕ್ಕೆ ಹೇಳುವ ಹಕ್ಕನ್ನು ಅವರಿಗೆ ಯಾರು ಕೊಟ್ಟರು ಎಂದು ಪ್ರಶ್ನಿಸಿದರು.
ರವೀಂದ್ರ ಕಲಬುರ್ಗಿ, ರಹಿಮಾನ್ ಸಾಬ್, ವೆಂಕಟೇಶ್, ಶರಣಪ್ಪ ಮತ್ತಿತರರು ಮಾತನಾಡಿದರು.