ಕಾಂಗ್ರೆಸ್‌ ಸರ್ಕಾರದಿಂದ ದಲಿತರಿಗೆ ವಂಚನೆ: ಬಿಜೆಪಿ ಆರೋಪ

| Published : Feb 24 2024, 02:31 AM IST

ಕಾಂಗ್ರೆಸ್‌ ಸರ್ಕಾರದಿಂದ ದಲಿತರಿಗೆ ವಂಚನೆ: ಬಿಜೆಪಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ಬಿಜೆಪಿಯಿಂದ ರಸ್ತೆ ತಡೆ, ಮಾನವ ಸರಪಳಿ ನಿರ್ಮಾಣ. ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯದಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಕಾಂಗ್ರೆಸ್‌ ಆಡಳಿತವು ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿ ತೋರಿಸಿ ಸಮುದಾಯವನ್ನು ವಂಚಿಸುತ್ತಿದ್ದಾರೆ ಎಂದು ದೂರಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯದ ಕಾಂಗ್ರೆಸ್‌ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಗರದಲ್ಲಿ ಬಿಜೆಪಿಯಿಂದ ಮಾನವ ಸರಪಳಿ ನಿರ್ಮಿಸುವ ಮೂಲಕ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆದು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಸಲ್ಲಿಸಿ ರಾಜ್ಯದಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಕಾಂಗ್ರೆಸ್‌ ಆಡಳಿತವು ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿ ತೋರಿಸಿ ಸಮುದಾಯವನ್ನು ವಂಚಿಸುತ್ತಿದ್ದಾರೆ ಎಂದು ದೂರಲಾಯಿತು.

ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ದಲಿತರಿಗೆ ಮೀಸಲಿಟ್ಟಿದ್ದ 11144 ಕೋಟಿ ರು. ಎಸ್ಸಿಪಿಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ವರ್ಗಾಯಿಸಿ ದಲಿತರನ್ನು ಬಲಿಕೊಟ್ಟು ತಮ್ಮ ಸ್ವಾರ್ಥ ಸಾಧನೆ ಪೂರೈಸಿಕೊಂಡು ಇವರ ಢೋಂಗಿ ದಲಿತ ಕಾಳಜಿಯನ್ನು ಬಯಲು ಮಾಡಿದ್ದಾರೆ ಎಂದು ಆರೋಪಿಸಿದರು.

ದಲಿತರ ಹಿತದ ರಕ್ಷಣೆ ಮಾಡಬೇಕಿದ್ದ ಸಮಾಜ ಕಲ್ಯಾಣ ಸಚಿವ ಎಚ್‌.ಸಿ ಮಹದೇವಪ್ಪ ಈ ಅನ್ಯಾಯದ ವಿರುದ್ಧ ಸೊಲ್ಲೆತ್ತದೆ ಕಾಂಗ್ರೆಸ್‌ ಹಿತಕ್ಕಾಗಿ ದಲಿತ ಸಮುದಾಯದ ಹಿತವನ್ನು ರಾಜಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ 10,000 ಕೋಟಿ ಹಣ ವೆಚ್ಚ ಮಾಡಲು ಮಾತ್ರ ಯಾವ ಗ್ಯಾರಂಟಿಯೂ ಅಡ್ಡ ಬಂದಿಲ್ಲ. ಇವರಿಗೆ ದಲಿತರ ಹಿತಾಸಕ್ತಿಗಿಂತ ಓಟ್‌ ಬ್ಯಾಂಕ್‌ ರಾಜಕಾರಣ ಆದ್ಯತೆಯಾಗಿರುವುದು ಶೋಚನೀಯ ಸಂಗತಿ ಎಂದರು.

ಮೊರಾರ್ಜಿ ಶಾಲೆಯ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣವು ಇತರ ಯೋಜನೆಗಳಿಗೆ ಬಳಕೆಯಾಗಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಲಾಗಿದೆ. ಇದಲ್ಲದೆ ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣ ಕೂಡ ದುರ್ಬಳಕೆಯಾಗಿ ಉನ್ನತ ಶಿಕ್ಷಣದಿಂದ ದಲಿತ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಸಲುವಾಗಿ ಶಿಕ್ಷಣವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಲಾಯಿತು.

ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಗೃಹ ನಿರ್ಮಾಣ ಯೋಜನೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ ಹಂಚುತ್ತಿದ್ದರೆ, ರಾಜ್ಯ ಸರ್ಕಾರದ ಯೋಜನೆಯು ಕೋಮಾ ಸ್ಥಿತಿಗೆ ತಲುಪಿದೆ ಎಂದು ವ್ಯಂಗ್ಯವಾಡಿದರು.

ರೈತ ನಿಧಿ ಯೋಜನೆಯಲ್ಲಿ ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವು ಸ್ಥಗಿತಗೊಂಡಿದೆ ಹಾಗೂ ಕಿಸಾನ್‌ ಸಮ್ಮಾನ್‌ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ 4 ಸಾವಿರ ರು. ಸಹ ನಿಲ್ಲಿಸಲಾಗಿದೆ ಎಂದರು.

ಗ್ಯಾರಂಟಿಗೆ ಹಣ ನೀಡಬೇಕಾದ ಕಾರಣ 2024-25 ಮುಂಗಡ ಪತ್ರದಲ್ಲಿ ಮತ್ತೇ ಹನ್ನೊಂದು ಸಾವಿರ ಕೋಟಿ ಅನುದಾನ ಕಡಿತವಾಗಿದೆ. ದಲಿತರಿಗೆ ಸೇರಬೇಕಾದ ಅನುದಾನ ನಿರಾಕರಿಸಿ ಅನ್ಯಾಯ ಮಾಡುತ್ತಿದ್ದಾರೆ. ನಿಮ್ಮ ಸ್ವಾರ್ಥಕ್ಕೆ ದಲಿತರಿಗೆ ಅನ್ಯಾಯ ಮಾಡಬಾರದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಮುಖಂಡರಾದ ಗುರುನಾಥ ಕೊಳ್ಳೂರ, ಬಾಬು ವಾಲಿ, ಬಾಬುರಾವ್‌ ಮದಕಟ್ಟಿ, ಗುರುನಾಥ ಜ್ಯಾಂತಿಕರ್‌, ಶಿವಾನಂದ ಮಂಠಾಳಕರ್‌, ಶಶಿಧರ ಹೊಸಳ್ಳಿ, ಶ್ರಿನಿವಾಸ ಚೌಧರಿ, ಬಸವರಾಜ ಪವಾರ, ಕುಶಾಲ್‌ ಪಾಟೀಲ್‌ ಗಾದಗಿ, ಅರಹಂತ ಸಾವಳೆ, ಕಿರಣ ಪಾಟೀಲ್‌, ಬಾಬು ಮಲ್ಕಾಪೂರೆ ಸೇರಿದಂತೆ ಇನ್ನಿತರ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.