ವೆಲೆಂಟೇನ್ಸ್ ಡೇಯಂದು ಮಂಗ್ಳೂರಲ್ಲಿ ‘ಪುಸ್ತಕ ಪ್ರೇಮಿಗಳ ದಿನ’ ಆಚರಣೆ!

| Published : Feb 09 2024, 01:47 AM IST / Updated: Feb 09 2024, 01:14 PM IST

Book Fair
ವೆಲೆಂಟೇನ್ಸ್ ಡೇಯಂದು ಮಂಗ್ಳೂರಲ್ಲಿ ‘ಪುಸ್ತಕ ಪ್ರೇಮಿಗಳ ದಿನ’ ಆಚರಣೆ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಫೆ.14ರಂದು ಸಾಂಕೇತಿಕವಾಗಿ ಪುಸ್ತಕ ಪ್ರೇಮಿಗಳ ದಿನಾಚರಣೆ ನಡೆಯಲಿದೆ. ಆ ದಿನ ಸಂಜೆ ಮಂಗಳೂರು ಸಂತ ಅಲೋಶಿಯಸ್‌ ಕಾಲೇಜ್‌ ಎಲ್.ಎಸ್‌.ರಸ್ಕಿನ್ಹ ಸಭಾಂಗಣದಲ್ಲಿ ಶಶಿರಾಜ್‌ ಕಾವೂರು ಅವರ ಎರಡು ನಾಟಕಗಳ ಬಿಡುಗಡೆ ಆಗಲಿದೆ. 

ಕೃಷ್ಣಮೋಹನ ತಲೆಂಗಳ

ಕನ್ನಡಪ್ರಭ ವಾರ್ತೆ ಮಂಗಳೂರು

ಪುಸ್ತಕ ಪ್ರೇಮ ಹೆಚ್ಚಲು ರಾಜಧಾನಿಯಲ್ಲಿ ಪ್ರಕಾಶಕ ವೀರಕಪುತ್ರ ಶ್ರೀನಿವಾಸ್‌ ಅವರು ಫೆ.10 ಮತ್ತು 11ರಂದು ಬೆಂಗಳೂರು ಎಚ್ಎಸ್‌ಆರ್‌ ಲೇಔಟಿನಲ್ಲಿ ‘ಪುಸ್ತಕ ಸಂತೆ’ ಆಯೋಜಿಸಿದ್ದಾರೆ. 

ಇತ್ತ ಕರಾವಳಿಯ ಮಂಗಳೂರಿನಲ್ಲಿ ಫೆ.14ರ ‘ವೆಲೆಂಟೈನ್ಸ್‌ ಡೇ’ಯನ್ನು ‘ಪುಸ್ತಕ ಪ್ರೇಮಿಗಳ’ ದಿನವಾಗಿ ಆಚರಿಸಲು ಸಿದ್ಧತೆ ನಡೆದಿದೆ. ಜಾಲತಾಣದಲ್ಲಿ ‘ಬುಕ್‌ಲವರ್ಸ್‌ಡೇ/ಪುಸ್ತಕ ಪ್ರೇಮಿಗಳ ದಿನ’ ಹ್ಯಾಶ್‌ಟ್ಯಾಗ್‌ ಸದ್ದು ಮಾಡುತ್ತಿದೆ.

ಪ್ರತಿ ವರ್ಷ ಫೆ.14 ಪ್ರೇಮಿಗಳ ದಿನಾಚರಣೆ ಬಗ್ಗೆ ಪರ-ವಿರೋಧ ಹೇಳಿಕೆ, ಹೋರಾಟ ಹೆಚ್ಚುತ್ತಿದೆ. ಈ ನಡುವೆ ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಫೆ.14ನ್ನು ಪ್ರೇಮಿಗಳ ಪರವೂ, ವಿರೋಧವೂ ಅಲ್ಲದೆ ವಿಶಿಷ್ಟವಾಗಿ ‘ಪುಸ್ತಕ ಪ್ರೇಮಿಗಳ ದಿನ’ವಾಗಿ ಆಚರಿಸುವುದಾಗಿ ಘೋಷಿಸಿದೆ. 

ಆ ದಿನ ಬರಹಗಾರರು, ಪ್ರಕಾಶಕರು, ಸಾಹಿತ್ಯಪ್ರೇಮಿಗಳನ್ನು ಸೇರಿಸಿ ಪುಸ್ತಕ ಪ್ರಕಟಣೆಗೆ ಉತ್ತಮ ವೇದಿಕೆ ಒದಗಿಸಲು ತೀರ್ಮಾನಿಸಲಾಗಿದೆ.

ಜಗತ್ತಿನಲ್ಲಿ ಪುಸ್ತಕ ಹಬ್ಬ ಇದೆ, ಅಪ್ಪನಿಗೊಂದು ದಿನ, ಅಮ್ಮನಿಗೊಂದು ದಿನ, ಇಡ್ಲಿಗೊಂದು, ದೊಸೆಗೊಂದು ದಿನಗಳಿವೆ. ಆದರೆ ಪುಸ್ತಕ ಪ್ರೇಮಿಗಳ ದಿನ ಇಲ್ಲ. ಇದಕ್ಕಾಗಿ ಫೆ.14ನ್ನು ಆರಿಸಿಕೊಂಡು, ಜಾಲತಾಣದಲ್ಲಿ ಕರೆ ನೀಡಿದ್ದೇವೆ. 

ಉತ್ತಮ ಪ್ರತಿಕ್ರಿಯೆ ಬಂದಿದೆ ಎನ್ನುತ್ತಾರೆ ರಂಗಸಂಗಾತಿ ತಂಡದ ಸಂಚಾಲಕ, ನ್ಯಾಯವಾದಿ, ‘ವರಾಹ ರೂಪಂ’ ಹಾಡಿನ ಖ್ಯಾತಿಯ ಸಾಹಿತಿ ಶಶಿರಾಜ್‌ ಕಾವೂರು.

ಆಚರಣೆ ಹೇಗೆ? ಇನ್ನು ಪ್ರತಿ ವರ್ಷ ಫೆ.14ರಂದು ಪ್ರತಿಷ್ಠಾನ ವತಿಯಿಂದ ಹೊಸ ಬರಹಗಾರರ ಪುಸ್ತಕ ಲೋಕಾರ್ಪಣೆ, ವಿಮರ್ಶೆ, ಸಂವಾದ ನಡೆಸಲಾಗುವುದು. ಈ ಮೂಲಕ ಹೊಸ ಬರಹಗಾರರನ್ನು ಬೆಳಕಿಗೆ ತರಲಾಗುವುದು. 

ರಂಗಕರ್ಮಿಗಳು, ಸಿನಿಮಾ ರಂಗದ ದಿಗ್ಗಜರು, ಪ್ರಕಾಶಕರನ್ನು ಕರೆಸುವ ಮೂಲಕ ಹೊಸ ಬರಹಗಾರರ ಪ್ರತಿಭೆಯನ್ನು ಅವರೆದುರು ತೆರೆದಿಟ್ಟು ಪ್ರಕಟಣೆ ಸಾಧ್ಯತೆ ಹೆಚ್ಚಿಸುವುದು ಉದ್ದೇಶ.

ಬೆಂಗಳೂರಿನಲ್ಲಿ ಸಾಕಷ್ಟು ಪ್ರಕಾಶಕರಿದ್ದಾರೆ, ಬರಹಗಾರರಿಗೂ ಪ್ರಕಾಶಕರ ಸಂಪರ್ಕ ಸುಲಭ. ಆದರೆ, ಕರಾವಳಿಯಂತಹ ಭಾಗದಲ್ಲಿ ರಾಜ್ಯವ್ಯಾಪಿ ತಲುಪುವಂತೆ ಪುಸ್ತಕ ಪ್ರಕಟಣೆ ಸುಲಭವಲ್ಲ, ಎಷ್ಟೋ ಮಂದಿ ಸ್ವತಃ ಪುಸ್ತಕ ಪ್ರಕಟಿಸಿ ಕೈಸುಟ್ಟುಕೊಂಡಿದ್ದಾರೆ. 

ಇಂಥವರನ್ನು ಪ್ರಕಾಶಕರಿಗೆ, ಸಿನಿಮಾರಂಗಕ್ಕೆ ಪರಿಚಿಯಿಸುವ ವೇದಿಕೆ ಕಲ್ಪಿಸಲಾಗುವುದು. ಕಷ್ಟದಲ್ಲಿರುವ ಸೃಜನಶೀಲ ಬರಹಗಾರರಿಗೆ ಪ್ರಕಟಣೆ, ಪ್ರಚಾರದ ಜವಾಬ್ದಾರಿಯನ್ನೂ ರಂಗಸಂಗಾತಿಯೇ ವಹಿಸಲಿದೆ ಎನ್ನುತ್ತಾರೆ ಅವರು.

ಇನ್ನು ಮುಂದೆ ಫೆ.14ರಂದು. ಹಿರಿಯರೂ ಮಕ್ಕಳಿಗೆ ಪುಸ್ತಕ ಖರೀದಿಸಿ ಕೊಡಬೇಕು, ಓದಲು ಪ್ರೇರೇಪಿಸಬೇಕು. ದೀಪಾವಳಿ, ದಸರಾ ಥರ ಅಂದು ಪುಸ್ತಕ ಹಬ್ಬದ ವಾತಾವರಣ ಸೃಷ್ಟಿಯಾಗಬೇಕು. ಅಂತಹ ಟ್ರೆಂಡ್‌ಗೆ ನಾವು ನಾಂದಿ ಹಾಡಿದ್ದೇವೆ ಎನ್ನುತ್ತಾರೆ.

ಈ ಬಾರಿ ಫೆ.14ರಂದು ಸಾಂಕೇತಿಕವಾಗಿ ಪುಸ್ತಕ ಪ್ರೇಮಿಗಳ ದಿನಾಚರಣೆ ನಡೆಯಲಿದೆ. ಆ ದಿನ ಸಂಜೆ ಮಂಗಳೂರು ಸಂತ ಅಲೋಶಿಯಸ್‌ ಕಾಲೇಜ್‌ ಎಲ್.ಎಸ್‌.ರಸ್ಕಿನ್ಹ ಸಭಾಂಗಣದಲ್ಲಿ ಶಶಿರಾಜ್‌ ಕಾವೂರು ಅವರ ಎರಡು ನಾಟಕಗಳ ಬಿಡುಗಡೆ ಆಗಲಿದೆ. ಆ ದಿನ ಪುಸ್ತಕ ಪ್ರದರ್ಶನ, ವಿಮರ್ಶೆ, ಸಂವಾದ, ಹೊಸ ಬರಹಗಾರರ ಸಮ್ಮಿಲನ ಎಲ್ಲವೂ ನಡೆಯಲಿದೆ.

ಮುಂದಿನ ವರ್ಷದಿಂದ ಫೆ.14ರಂದು ಬೆಳಗ್ಗಿನಿಂದ ರಾತ್ರಿ ವರೆಗೆ ಬೇರೆ ಬೇರೆ ವಿಭಾಗದ ಪುಸ್ತಕ ಬಿಡುಗಡೆ, ಬಳಿಕ ವಿಮರ್ಶೆ, ಕಷ್ಟದಲ್ಲಿರುವ ಬರಹಗಾರರ ಪುಸ್ತಕ ಬಿಡುಗಡೆ ಮತ್ತು ಪ್ರಚಾರಕ್ಕೂ ಸಹಾಯ ಮಾಡಲು ನಿರ್ಧರಿಸಲಾಗಿದೆ. 

ಹೊಸಬರು ಮಾತ್ರವಲ್ಲ, ಜನಪ್ರಿಯರಾಗಿದ್ದು ಕಾರಣಾಂತರಗಳಿಂದ ಬರಹದಿಂದ ವಿಮುಖರಾದವರನ್ನೂ ಸಕ್ರಿಯರಾಗಿಸಲು ಪ್ರಯತ್ನಿಸಲಾಗುವುದು. ಜಾತಿ, ಧರ್ಮ, ಪಂಥ, ರಾಜಕೀಯ ಭೇದವಿಲ್ಲದೆ ಎಲ್ಲ ವರ್ಗದ ಬರಹಗಾರರಿಗೂ ಅವಕಾಶ ಕಲ್ಪಿಸಲಾಗಿದೆ.

ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ 16ರ ಹರೆಯ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ನಿರತವಾಗಿದೆ. ನಿವೃತ್ತ ಉಪನ್ಯಾಸಕರು, ನಟರು, ಬರಹಗಾರರು, ಸಾಹಿತ್ಯ ಪ್ರೇಮಿಗಳ ಸಹಿತ ಸುಮಾರು 50 ಮಂದಿಯ ತಂಡ. 

ನಿವೃತ್ತ ಕುಲಪತಿ, ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾರ್ಗದರ್ಶಕರು. ಕನ್ನಡ ಸಾಹಿತ್ಯ ಪರಿಷತ್, ಅಖಿಲ ಭಾರತ ಸಾಹಿತ್ಯ ಪರಿಷತ್, ಕನ್ನಡ ಸಂಸ್ಕೃತಿ ಇಲಾಖೆ, ಪುಸ್ತಕ ಅಭಿೃದ್ಧಿ ಪ್ರಾಧಿಕಾರ ಎಲ್ಲವೂ ಸೇರಿ ಮುಕ್ತ ಮನಸ್ಸಿನಿಂದ ಬರುವ ವರ್ಷದಿಂದ ಪುಸ್ತಕ ಪ್ರೇಮಿಗಳ ದಿನ ಆಚರಣೆ ಮಾಡುವ ಹಾಗೆ ಆಗಬೇಕು. 

ನಾವು ಕರಾವಳಿಯಲ್ಲಿ ಶುರು ಮಾಡಿದ ಅಭಿಯಾನದಿಂದ ದೇಶಕ್ಕೇ ಉತ್ತಮ ಸಂದೇಶ ಹೋಗಬೇಕು. ಪ್ರೇಮಿಗಳ ದಿನದ ಅನಾವಶ್ಯಕ ವಾದ ವಿವಾದಗಳ ನಡುವೆ ಒಂದು ಆರೋಗ್ಯಕರ ಸಂಪ್ರದಾಯ ಹುಟ್ಟುಹಾಕುವುದು ನಮ್ಮ ಉದ್ದೇಶ ಎನ್ನುತ್ತಾರೆ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಶಶಿರಾಜ್‌ ಕಾವೂರು.