15ರಿಂದ ಬೆಂಗಳೂರಿನಲ್ಲಿ ‘ಪುಸ್ತಕ ಸಂತೆ’: ಕೊಡಗಿನ ಲೇಖಕರು ಭಾಗಿ

| Published : Nov 07 2024, 12:00 AM IST

15ರಿಂದ ಬೆಂಗಳೂರಿನಲ್ಲಿ ‘ಪುಸ್ತಕ ಸಂತೆ’: ಕೊಡಗಿನ ಲೇಖಕರು ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಪುಸ್ತಕ ಸಂಸ್ಕೃತಿ ಇಮ್ಮಡಿಗೊಳಿಸುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ವರ್ಷದ ‘ವೀರಲೋಕ ಪುಸ್ತಕ ಸಂತೆ’ಗೆ ಭಾರೀ ತಯಾರಿ ನಡೆದಿದೆ ಎಂದು ವೀರಲೋಕ ಪ್ರಕಾಶನದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಒಂದೇ ಸೂರಿನಡಿ ನೂರಕ್ಕೂ ಅಧಿಕ ಲೇಖಕರು, ಪ್ರಕಾಶಕರು, ನ.15,16,17 ರಂದು ಜಯನಗರದ ಅಲಂಕೃತ ಶಾಲಿನಿ ಮೈದಾನದಲ್ಲಿ ಭೇಟಿಗೆ ಲಭ್ಯವಾಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ಪುಸ್ತಕ ಸಂಸ್ಕೃತಿ ಇಮ್ಮಡಿಗೊಳಿಸುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ವರ್ಷದ ‘ವೀರಲೋಕ ಪುಸ್ತಕ ಸಂತೆ’ಗೆ ಭಾರೀ ತಯಾರಿ ನಡೆದಿದೆ ಎಂದು ವೀರಲೋಕ ಪ್ರಕಾಶನದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

ಒಂದೇ ಸೂರಿನಡಿ ನೂರಕ್ಕೂ ಅಧಿಕ ಲೇಖಕರು, ಪ್ರಕಾಶಕರು, ನ.15,16,17 ರಂದು ಜಯನಗರದ ಅಲಂಕೃತ ಶಾಲಿನಿ ಮೈದಾನದಲ್ಲಿ ಭೇಟಿಗೆ ಲಭ್ಯವಾಗಲಿದ್ದಾರೆ.

ವೀರಲೋಕ ಪುಸ್ತಕ ಸಂತೆಗೆ ಕೊಡಗಿನಿಂದ ಲೇಖಕ ಭಾರಧ್ವಾಜ್, ಬಿ.ಜಿ. ಅನಂತಶಯನ ಹಾಗೂ ಹೇಮಂತ್ ಪಾರೇರ ಅವರನ್ನು ಆಹ್ವಾನಿಸಲಾಗಿದ್ದು, ಪ್ರತ್ಯೇಕ ಮಳಿಗೆಯಲ್ಲಿ ಇವರ ಪುಸ್ತಕಗಳೂ ಲಭ್ಯವಿರುತ್ತವೆ.ಮೈಸೂರಿನಿಂದ ಲೇಖಕ ಅಬ್ದುಲ್ ರಶೀದ್ ಹಾಗೂ ಕುಸುಮಾ ಆಯರಹಳ್ಳಿ ಅವರನ್ನು ಆಹ್ವಾನಿಸಲಾಗಿದೆ.

ರಾಜ್ಯದ ಮೂಲೆ ಮೂಲೆಗಳಿಂದ ಲೇಖಕರು, ಪ್ರಕಾಶಕರನ್ನು ಗುರುತಿಸಿ, ಆಹ್ವಾನಿಸಲಾಗಿದ್ದು ಪ್ರತಿಯೊಬ್ಬರೂ ಪ್ರತ್ಯೇಕ ಮಳಿಗೆಗಳಲ್ಲಿ ಪುಸ್ತಕಗಳೊಂದಿಗೆ ಓದುಗರನ್ನು ಭೇಟಿ ಮಾಡಲಿದ್ದಾರೆ. ಲಕ್ಷ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ. ಲೇಖಕರು ಮಾರಾಟವಾಗುವ ತಮ್ಮ ಪುಸ್ತಕಗಳಿಗೆ ಖುದ್ದಾಗಿ ಸಹಿ ಮಾಡಲಿದ್ದಾರೆ.

ಪುಸ್ತಕ ಮಳಿಗೆಗಳನ್ನು ಹೊರತು ಪಡಿಸಿ ಇತರ ಆಕರ್ಷಣೆಗಳೂ ಇದ್ದು, ಮಕ್ಕಳಿಗಾಗಿಯೇ ವಿಶೇಷ ಆಟ ಮತ್ತು ಮನೋರಂಜನಾ ವಿಭಾಗಗಳಿವೆ. 100ಕ್ಕೂ ಅಧಿಕ ಆಹಾರ, ಆರೋಗ್ಯ, ವಸ್ತ್ರ, ಚಿತ್ರಕಲೆ, ಸಣ್ಣ ಕೈಗಾರಿಕಾ ಮಳೆಗೆಗಳು ಕನ್ನಡಿಗರನ್ನು ಆಕರ್ಷಿಸಲಿವೆ.

ಉದ್ಘಾಟನೆಯ ಬಳಿಕ ನಿತ್ಯ ಜಾನಪದ ಸಂಜೆ, ಭಾವಗೀತೆ ಸಂಜೆ, ಚಲನಚಿತ್ರ ಗೀತೆಗಳ ಸಂಜೆ ಕಾರ್ಯಕ್ರಮಗಳು ಆಕರ್ಷಕ ಲೋಕ ನಿರ್ಮಿಸಲಿವೆ ಎಂದು ವೀರಕಪುತ್ರ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ವೀರಲೋಕ ಪ್ರಕಟಣೆಯ ಇಪ್ಪತ್ತು ಪುಸ್ತಕಗಳು ಲೋಕಾರ್ಪಣೆ ಆಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.