ಸಾರಾಂಶ
ಹೇಮಾದ್ರಿ ಬೆಟ್ಟದಿಂದ ಬರುವ ನೀರಿಗೆ ಕಾಲುವೆಗಳನ್ನು ಮಾಡಿದ್ದು ಸುಮಾರು ವರ್ಷಗಳಿಂದ ಈ ಕಾಲುವೆಗಳಲ್ಲಿ ಕಸ ಕಡ್ಡಿ ಸೇರಿ ಮುಚ್ಚಿಹೋಗಿವೆ. ಜೋರಾಗಿ ಮಳೆ ಬಂದಾಗ ಬೆಟ್ಟದ ನೀರು ರೈತರ ಜಮೀನಿನೊಳಗೆ ನುಗ್ಗುತ್ತದೆ.
ಕನ್ನಡಪ್ರಭ ವಾರ್ತೆ ಟೇಕಲ್
ಕಳೆದ ಎರಡು ದಿನಗಳಿಂದ ಟೇಕಲ್ ಸುತ್ತಮುತ್ತ ಬೀಳುತ್ತಿರುವ ಮಳೆಯಿಂದಾಗಿ ರೈತರ ಜಮೀನುಗಳು ಕೆರೆಯಂತಾಗಿವೆ. ಇದು ಒಬ್ಬರ ತೊಂದರೆಯಲ್ಲ. ಈ ಭಾಗದಲ್ಲಿ ಬೆಟ್ಟದಂಚಿನಲ್ಲಿರುವ ಎಲ್ಲ ರೈತರ ಜಮೀನುಗಳ ಪರಿಸ್ಥಿತಿ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಳ್ಳೇರಹಳ್ಳಿ ಗ್ರಾಮದಲ್ಲಿ ಸುರಿದ ಭಾರೀ ಮಳೆಯಿಂದ ಜಮೀನು ಮಿನಿಕೆರೆಯಾಗಿ ಮಾರ್ಪಾಟಾಗಿದೆ. ಉಳ್ಳೇರಹಳ್ಳಿ ಗ್ರಾಮವು ಹೇಮಾದ್ರಿ ಮತ್ತು ಪಾಮಾದ್ರಿ ಎಂಬ ಎರಡು ಬೆಟ್ಟಗಳ ಮಧ್ಯೆ ಇದೆ. ಹೇಮಾದ್ರಿ ಬೆಟ್ಟದಿಂದ ಬರುವ ನೀರಿಗೆ ಕಾಲುವೆಗಳನ್ನು ಮಾಡಿದ್ದು ಸುಮಾರು ವರ್ಷಗಳಿಂದ ಈ ಕಾಲುವೆಗಳಲ್ಲಿ ಕಸ ಕಡ್ಡಿ ಸೇರಿ ಮುಚ್ಚಿಹೋಗಿವೆ. ಜೋರಾಗಿ ಮಳೆ ಬಂದಾಗ ಬೆಟ್ಟದ ನೀರು ರೈತರ ಜಮೀನಿನೊಳಗೆ ನುಗ್ಗುತ್ತದೆ. ಇದರಿಂದ ಈ ಭಾಗದ ರೈತರು ಕೃಷಿ ಕಾರ್ಯ ನಡೆಸಿದಂತಾಗಿದೆ.ಕಾಲುವೆಗಳ ದುರಸ್ತಿಗೆ ಮನವಿ
ಬೆಟ್ಟದಿಂದ ಬಂದ ನೀರು ಜಮೀನುಗಳ ಮೇಲೆ ಹರಿಯುತ್ತಾ ಖಾನೆಕೆರೆ ಸೇರುತ್ತದೆ. ಮಳೆ ಬಂದಾಗ ಈ ಸಮಸ್ಯೆ ಹೆಚ್ಚಾಗುತ್ತಿದ್ದು ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಯು ನಾಶವಾಗುತ್ತಿವೆ. ಸಂಬಂಧಪಟ್ಟವರು ಕಾಲುವೆಯನ್ನು ಸರಿಪಡಿಸಿ ರೈತರ ಜಮೀನನ್ನು ರಕ್ಷಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಳ್ಳೇರಹಳ್ಳಿ ರೈತ ನಾಗರಾಜ್, ನಮ್ಮ ಗ್ರಾಮದಲ್ಲಿ ಬೆಟ್ಟದಿಂದ ಹರಿದುಬರುವ ನೀರಿನ ಕಾಲುವೆಗಳು ಬಹಳ ವರ್ಷಗಳಿಂದ ಮುಚ್ಚಿ ಹೋಗಿವೆ. ಜೋರಾಗಿ ಮಳೆ ಬಂದಾಗ ಜಮೀನುಗಳಲ್ಲಿ ನೀರು ಸಂಗ್ರಹವಾಗಿ ಮಿನಿ ಕೆರೆಯಂತಾಗುತ್ತವೆ. ಈಗಲಾದರೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.