ಭ್ರಷ್ಟತೆಯಿಂದ ಕೂಡಿದ ಸಮಾಜದಲ್ಲಿ ಯುವಪೀಳಿಗೆ ಬದುಕುತ್ತಿರುವುದು ದುರಂತ. ಭ್ರಷ್ಟಮುಕ್ತ ಸಮಾಜದಿಂದ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಡಾ.ಆರ್. ಕಾವಲಮ್ಮ ಹೇಳಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಭ್ರಷ್ಟತೆಯಿಂದ ಕೂಡಿದ ಸಮಾಜದಲ್ಲಿ ಯುವಪೀಳಿಗೆ ಬದುಕುತ್ತಿರುವುದು ದುರಂತ. ಭ್ರಷ್ಟಮುಕ್ತ ಸಮಾಜದಿಂದ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಡಾ.ಆರ್. ಕಾವಲಮ್ಮ ಹೇಳಿದರು.ತುಮಕೂರು ವಿವಿಯ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ, ಮಹಿಳಾ ಅಧ್ಯಯನ ಕೇಂದ್ರ ಮತ್ತು ಹಾಲಪ್ಪ ಪ್ರತಿಷ್ಠಾನ ವತಿಯಿಂದ ಗುರುವಾರ ಆಯೋಜಿಸಿದ್ದ ‘ರಾಷ್ಟ್ರ ನಿರ್ಮಾಣ ಮತ್ತು ಯುವಜನತೆ’ ಕುರಿತ ವಿಶೇಷ ಉಪನ್ಯಾಸ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶಿಷ್ಟಾಚಾರದ ನೆಪದಲ್ಲಿ ದಬ್ಬಾಳಿಕೆ ಅಸ್ತಿತ್ವದಲ್ಲಿದೆ. ಅಧಿಕಾರ ಕಾರ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ದೇಶಿಸಬೇಕು, ಸಾಮಾನ್ಯರ ಮೇಲೆ ಪ್ರಯೋಗಿಸಬಾರದು. ಸ್ಥಾನ ಬದಲಾದಂತೆ ಪ್ರಬುದ್ಧರಾಗಿ, ಸಮಾಜದ ರಕ್ಷಣೆಗಾಗಿ ದುಡಿಯಬೇಕು, ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದರು.ವಿಜಯನಗರ ಕಾಲದ ಆಳ್ವಿಕೆಯಲ್ಲಿ ತಾಯಿ ಮಗುವಿಗೆ ಹಾಲುಣಿಸುತ್ತಾ ‘ಮಗು, ಕೆರೆಯನ್ನು ಕಟ್ಟಿಸು, ಬಾವಿ ತೋಡಿಸು, ದೇವಾಲಯಗಳನ್ನು ನಿರ್ಮಿಸು’ ಎಂದು ಸಾಮ್ರಾಜ್ಯದ ನಿರ್ಮಾಣಕ್ಕಾಗಿ, ಗಡಿಗಳನ್ನು ವಿಸ್ತರಿಸಲು ಮಕ್ಕಳನ್ನು ತಯಾರು ಮಾಡುತ್ತಿದ್ದಳು. ಈಗಿನ ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಪ್ರಜ್ಞೆ ಇಲ್ಲದೆ ಅಪ್ರಬುದ್ಧರಾಗಿದ್ದಾರೆ. ನನ್ನ ಮನೆಯಷ್ಟೇ ಉದ್ಧಾರವಾಗಬೇಕೆಂಬ ಪೋಷಕರ ಮನಸ್ಥಿತಿ ದೇಶದ ಅಭಿವೃದ್ಧಿಯನ್ನು ಕುಂಟಿತಗೊಳಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಧರ್ಮೋರಕ್ಷತಿರಕ್ಷಿತಃ’ ಎಂದರೆ ನಮ್ಮಕಾರ್ಯವನ್ನು ಸರಿಯಾಗಿ ಮಾಡಿದರೆ ಕಾರ್ಯವು ನಮ್ಮನ್ನು ರಕ್ಷಿಸುತ್ತದೆ ಎಂದರ್ಥ. ಆಸೆ, ಆಶಯಗಳಿರಬೇಕು. ಇದರಿಂದ ರಾಷ್ಟ್ರರಕ್ಷಣೆ ಸಾಧ್ಯ. ಸಂಕುಚಿತ ಮನೋಭಾವದಿಂದ, ಆಲಸ್ಯತೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ತಾಳ್ಮೆ, ವಿಷಯಗಳ ಮೇಲಿನ ಪ್ರಭುತ್ವ, ಹಿಡಿತ ಅಗತ್ಯ. ನಾಗರಿಕ ಸೇವಾ ಅಧಿಕಾರ ಸೃಜನಶೀಲತೆಯಿಂದ ಕೂಡಿದ್ದಾಗಿದೆ. ಗಡಿಯಲ್ಲಿ ಸೈನಿಕ, ಮಣ್ಣಿನ ಮಗನಾಗಿ ರೈತ ಬದುಕು ಸವೆಸುತ್ತಾನೆ. ದೇಶದ ಪ್ರಜೆಯಾಗಿ ನಮ್ಮ ಪಾತ್ರವೇನು? ಎಂಬ ಪ್ರಶ್ನೆ ಕೇಳಿಕೊಳ್ಳುವ ಸಮಯವಾಗಿದೆ ಎಂದರು.
ಡಾ.ಆರ್. ಕಾವಲಮ್ಮ ಅವರನ್ನು ಗೌರವಿಸಲಾಯಿತು. ನಾಗರಿಕ ಸೇವಾ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಕೆಲವು ಸಮುದಾಯದ, ಕುಟುಂಬಗಳ ಸಂಕುಚಿತ ಮನೋಭಾವದಿಂದಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಅವಕಾಶ ವಂಚಿತರಾಗುತ್ತಿದ್ದಾರೆ. ಡಾ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದಾಗಿಯೇ ಶೋಷಿತರು, ಮಹಿಳೆಯರು ಮುನ್ನೆಲೆಗೆ ಬಂದಿರುವುದು ಎಂಬುದನ್ನು ಯಾರೂ ಮರೆಯಬಾರದು ಎಂದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಜಾತಿ ಪದ್ಧತಿ ಆಚರಣೆ ಇದ್ದಂತಹ ಕಾಲದಲ್ಲಿ ಸವಾಲುಗಳನ್ನು ಎದುರಿಸಿ ಮಹಿಳೆಯರಿಗೆ ಮಾದರಿಯಾದವರು ಡಾ. ಕಾವಲಮ್ಮ ಎಂದು ಶ್ಲಾಘಿಸಿದರು.ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ. ಪ್ರಸನ್ನಕುಮಾರ್, ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕಿ ಡಾ. ಪ್ರಿಯಾ ಠಾಕೂರ್, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಉಪಸ್ಥಿತರಿದ್ದರು.