ಸಾರಾಂಶ
ಬೆಂಗಳೂರು : ದಸರಾ ವೇಳೆಗೆ ಕೆಆರ್‌ಎಸ್‌ನಲ್ಲಿ ‘ಕಾವೇರಿ ಆರತಿ’ ಕಾರ್ಯಕ್ರಮ ಆಯೋಜಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು ಜಲಮಂಡಳಿ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಸದಾಶಿವನಗರದ ಸ್ಯಾಂಕಿ ಕೆರೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಕಾವೇರಿ ಆರತಿ ಮಾಡಲಾಗುತ್ತಿದೆ. ಈಗಾಗಲೇ ಕೆಆರ್‌ಎಸ್‌ನಲ್ಲಿ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವ ಉದ್ದೇಶದಿಂದ ರೂಪುರೇಷೆ ತಯಾರಿಸಲು ಸಮಿತಿ ಮಾಡಲಾಗಿದ್ದು, ದಸರಾ ವೇಳೆಗೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಬೆಂಗಳೂರು, ಕಾವೇರಿ ಅವಲಂಬಿತ ನಗರ. ಹಾಗಾಗಿ, ಕಾವೇರಿಗೆ ಪ್ರಾರ್ಥನೆ ಸಲ್ಲಿಸುವ ಅಗತ್ಯವಿದೆ. ನಗರಕ್ಕೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಾರದೆಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೀರಿನ ಸಂರಕ್ಷಣೆ ಹಾಗೂ ಉಳಿಸುವ ಕುರಿತು ಎಲ್ಲರೂ ಸ್ವಯಂ ಜಾಗೃತರಾಬೇಕು ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಶಿವಕುಮಾರ್ ಸಮೇತ ಗಂಗಮ್ಮ ದೇವಿಗೆ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ, ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಬಾಲಕೃಷ್ಣ್, ಶರತ್ ಬಚ್ಚೇಗೌಡ, ಎಚ್.ಡಿ ರಂಗನಾಥ್, ಎನ್.ಶ್ರೀನಿವಾಸ್, ಎ.ಸಿ ಶ್ರೀನಿವಾಸ್, ಶಿವಲಿಂಗೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ಸಾಥ್ ನೀಡಿದರು.
‘ವಿಶ್ವ ಜಲ ಪ್ರತಿಜ್ಞಾ ವಿಧಿ’ ಹೀಗಿದೆ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೋಧಿಸಿದ ‘ವಿಶ್ವ ಜಲ ಪ್ರತಿಜ್ಞಾ ವಿಧಿ’ ಹೀಗಿದೆ. ‘ದೈನಂದಿನ ಚಟುವಟಿಕೆಗಳಲ್ಲಿ ಮಿತವಾಗಿ ನೀರನ್ನು ಬಳಸಿ, ನೀರನ್ನು ಉಳಿಸುತ್ತೇನೆ, ಮಳೆ ನೀರಿನ ಕೊಯ್ಲು ವಿಧಾನವನ್ನು ಅನುಸರಿಸುವ ಮೂಲಕ ಅಂತರ್ಜಲ ಮರುಪೂರಣಕ್ಕೆ ಸಹರಿಸುತ್ತೇನೆ. ಜಲಮೂಲಗಳ ರಕ್ಷಣೆಗಾಗಿ ಮತ್ತು ಭವಿಷ್ಯದ ಪೀಳಿಗೆಗಾಗಿ ಅವುಗಳ ಸಂರಕ್ಷಣೆಗೆ ಮುಂದಾಗುತ್ತೇನೆ. ನಾನು, ನನ್ನ ಕುಟುಂಬ ಮತ್ತು ಸಮುದಾಯದಲ್ಲಿ ನೀರು ಉಳಿಸುವ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸುಸ್ಥಿರ ಭವಿಷ್ಯದ ನಿರ್ಮಾಣಕ್ಕಾಗಿ ನನ್ನ ಜೀವನದಲ್ಲಿ ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತೇನೆ.
ಭಕ್ತಿ ಭಾವದಲ್ಲಿ ಮಿಂದ ಸಿಟಿ ಮಂದಿ
ಸ್ಯಾಂಕಿ ಕೆರೆಯಲ್ಲಿ ಶನಿವಾರ ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ 6 ಗಂಟೆಯ ವೇಳೆಗೆ ಗೋವಿಂದ, ಗೋವಿಂದ ನಾಮ ಸ್ಮರಣೆಯೊಂದಿಗೆ ಸ್ಯಾಂಕಿ ಕೆರೆಯ ದಂಡೆಯಲ್ಲಿರುವ ಗಂಗಮ್ಮ ದೇವಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ತಂದು, ಕೆರೆಯ ಮಧ್ಯಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದ ತೇಲುವ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಭಾಗಮಂಡಲದಿಂದ ತೆಗೆದುಕೊಂಡು ಬಂದಿದ್ದ ತ್ರಿವೇಣಿ ಸಂಗಮದ ನೀರಿನಿಂದ ಪೂಜೆ ಸಲ್ಲಿಸಲಾಯಿತು. ಈ ವೇಳೆ ವೇದಘೋಷಗಳು ಮುಗಿಲು ಮುಟ್ಟಿದ್ದವು. ಬಳಿಕ ವಾರಣಾಸಿಯಿಂದ ಆಗಮಿಸಿದ್ದ ತಂಡಗಳು ಕಾವೇರಿ ಆರತಿ ಮೂಲಕ ಕಾವೇರಿ ಮಾತೆಗೆ ನಮನ ಸಲ್ಲಿಸಿದವು.
ಸಂಗೀತದ ಮೋಡಿ:
ಅನನ್ಯ ಭಟ್ ಹಾಗೂ ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ವೇಳೆ ವಿದ್ಯುತ್ ದೀಪಗಳ ಬೆಳಕಿನ ನೃತ್ಯ ವೈಭವ ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು. ಸ್ಯಾಂಕಿ ಕೆರೆಯ ವಾಕಿಂಗ್ ಪಾತ್‌ನಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ತಡರಾತ್ರಿವರೆಗೆ ಕುಳಿತು, ಕಾರ್ಯಕ್ರಮ ವೀಕ್ಷಿಸಿ ಕಣ್ತುಂಬಿಕೊಂಡರು.