ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಖಂಡ ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ರಾಜ್ಯದ 30ನೇ ಜಿಲ್ಲೆಯಾಗಿ ಉದಯವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆ ರೂಪುಗೊಂಡು ಅಗಸ್ಟ್ 23 ಕ್ಕೆ ತನ್ನ 18 ವಸಂತಗಳನ್ನು ಪೂರೈಸಿ 19ನೇ ವರ್ಷಕ್ಕೆ ಪಾದರ್ಪಣೆ ಮಾಡಿದೆ.ಈ ಸುದೀರ್ಘ19 ವರ್ಷಗಳಲ್ಲಿ ಜಿಲ್ಲೆಯ ಜನತೆ ಆಡಳಿತ ನಡೆಸಿದ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರೀಕ್ಷಿಸಿದ್ದು ಬಹಳಷ್ಟು, ಆದರೆ ಜಿಲ್ಲೆಯ ಜನತೆಗೆ ಸಿಕ್ಕಿದ್ದು ಹಿಡಿಯಷ್ಟುದೆ. ಈ 19 ವರ್ಷಗಳ ಅವಧಿಯಲ್ಲಿ ವಿಭಿನ್ನ ಸರ್ಕಾರಗಳು ಅಧಿಕಾರ ನಡೆಸಿದರೂ ಜಿಲ್ಲೆಯು ಅನೇಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಆದರೂ, ಸಹ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಯ ಅಭಿವೃದ್ಧಿ ಆಗಿಲ್ಲ ಎಂಬ ಕೊರಗು ಜಿಲ್ಲೆಯ ಜನರಲ್ಲಿದೆ. ನೀರಾವರಿ ಸೌಲಭ್ಯ ಇಲ್ಲ
ಚಿಕ್ಕಬಳ್ಳಾಪುರ ಜಿಲ್ಲೆ ಎಂದಾಕ್ಷಣ ರೇಷ್ಮೆ ಮತ್ತು ಹೈನುಗಾರಿಕೆ ಅದರ ಜೊತೆಗೆ ಹೂ ಹಣ್ಣು ಮತ್ತು ತರಕಾರಿ ಉತ್ಪಾದನೆ ನೆನಪಾಗುತ್ತದೆ. ಸತತ ಬರಗಾಲದಿಂದ ತತ್ತರಿಸುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ನದಿ-ನಾಲೆಗಳಿಲ್ಲ. ಪಂಚ ನದಿಗಳ ಉಗಮ ಸ್ಥಾನ ನಂದಿಗಿರಿಧಾಮ ವಿದ್ದರೂ ಮಳೆಯೇ ಜೀವನಾಧಾರ , ಈ ಜಿಲ್ಲೆ ಬಯಲು ಸೀಮೆ ಜಿಲ್ಲೆಯಾಗಿದ್ದು ಇಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಜನರನ್ನು ನೀರಿನ ಸಮಸ್ಯೆ ಇನ್ನೂ ಕಾಡುತ್ತಿದೆ.ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್‌ಎನ್ ವ್ಯಾಲಿ ಯೋಜನೆಯನ್ನು ರೂಪಿಸಿ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಹರಿಸಿದ ಪರಿಣಾಮ ಜಿಲ್ಲೆಯ ಸುಮಾರು 64 ಕೆರೆಗಳಿಗೆ ನೀರು ಹರಿದಿದೆ. ಇನ್ನುಳಿದಂತೆ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಎರಡು ತಾಲ್ಲೂಕುಗಳಿಗೆ ಕುಡಿಯುವ ನೀರಿನ ಆಸರೆಗಾಗಿ ಜಕಲಮಡುಗು ಜಲಾಶಯದ ನೀರು ದೊರೆಯುತ್ತಿದೆ. ಕುಂಟುತ್ತಾ ಸಾಗಿರುವ ಎತ್ತಿನಹೊಳೆ ಯೋಜನೆ 2027ಕ್ಕೆ ನೀಡುವ ಭೆವಸೆಯನ್ನು ರಾಜ್ಯ ಸರ್ಕಾರ ನೀಡಿದೆ.
ವೈದ್ಯಕೀಯ ಕಾಲೇಜು ಸಮಸ್ಯೆಸರ್ಕಾರಿ ನಂದಿ ವೈದ್ಯಕೀಯ ಕಾಲೇಜಿನ ತರಗತಿಗಳನ್ನು ಅರೂರು ಬಳಿಯ ವೈದ್ಯಕೀಯ ಕಾಲೇಜಿನ ಸ್ವಂತ ಕಟ್ಟಡಕ್ಕೆ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು 2023 ರ ಸೆಪ್ಟಂಬರ್ 15ರಂದು ಸ್ಥಳಾಂತರಿಸಿದ್ದು, ಎರಡು ವರ್ಷಗಳಾಗುತ್ತಾ ಬಂದಿದ್ದರೂ ಸಹ ಇಲ್ಲಿ ಆಸ್ಪತ್ರೆ ಇನ್ನೂ ಪ್ರಾರಂಭವಾಗಿಲ್ಲ. ವೈದ್ಯ ವಿದ್ಯಾರ್ಥಿಗಳು ಸುಮಾರು 15 ಕಿ.ಮೀ ದೂರದಲ್ಲಿರುವ ನಗರದ ಜಿಲ್ಲಾಸ್ಪತ್ರೆಗೆ ರೋಗಿಗಳ ಅಧ್ಯಯನಕ್ಕೆ ಪ್ರತಿ ನಿತ್ಯವೂ ತೆರಳಬೇಕಾಗಿದೆ.
ಸೌಲಭ್ಯ ಇಲ್ಲದ ಹೊಸ ತಾಲೂಕುಚಿಕ್ಕಬಳ್ಳಾಪುರ ಜಿಲ್ಲೆ ಉದಯವಾದಾಗ 6 ತಾಲೂಕುಗಳನ್ನು ರಚಿಸಲಾಗಿತ್ತು. ಈಗ ಹೊಸದಾಗಿ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ಹಾಗೂ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಹೊಸ ತಾಲೂಕುಗಳಾಗಿ ಘೋಷಣೆ ಮಾಡಿ ಸರ್ಕಾರ ಅಧೀಕೃತವಾಗಿ ಅಧಿಸೂಚನೆಗಳನ್ನು ಹೊರಡಿಸಿ, ಅವುಗಳಿಗೆ ಬೇಕಾದ ಮೂಲ ಸೌಲಭ್ಯ ಇನ್ನೂ ಒದಗಿಸುಲ ಸಾಧ್ಯವಾಗಿಲ್ಲ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುವ ಇಬ್ಬರು ಸಂಸದರು, ಜಿಲ್ಲಾ ವ್ಯಾಪ್ತಿಯ ಐದು ವಿಧಾನಸಭಾ ಸದಸ್ಯರು, ನಾಲ್ಕು ಜನ ವಿಧಾನ ಪರಿಷತ್ ಸದಸ್ಯರುಗಳು, ಇವರೊಂದಿಗೆ ಸರ್ಕಾರಿ ನಾಮ ನಿರ್ದೇಶಕ ರಾಜಕಾರಣಿಗಳು ಹಾಗೂ ಇದ್ದು, ಇವರೆಲ್ಲ ಸರ್ಕಾರದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತಡ ಹೇರಬೇಕಾಗಿದೆ. ಆದರೆ ಈ ವಿಷಯದಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯ.ದುರಸ್ತಿ ಕಾಣದ ರಸ್ತೆಗಳು
ಜಿಲ್ಲಾ ಕೇಂದ್ರದಲ್ಲಿ ಅನೇಕ ರಸ್ತೆಗಳು ಗುಂಡಿಗಳಿಂದ ಆವರಿಸಿವೆ. ಇವುಗಳನ್ನು ಮುಚ್ಚಬೇಕಾಗಿದೆ. ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಿಂದ ಕಂದವಾರದ ಹೊರಗಿನ ರಸ್ತೆ ಹಾಳಾಗಿ ಸುಮಾರು 20 ವರ್ಷಗಳಾಗಿವೆ. ಇದೇ ರೀತಿ ಇನ್ನೂ ಅನೇಕ ಸಮಸ್ಯೆಗಳಿದ್ದು ಈ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ವತಮುಖ ಅಭಿವೃದ್ಧಿಗೆ ಕಾಯಕಲ್ಪ ನೀಡಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.