ಸಾರಾಂಶ
ಕೊಪ್ಪಳ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದಿರುವ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯುವುದಕ್ಕಾಗಿ 9ನೇ ತರಗತಿಯಲ್ಲಿ ದಡ್ಡ ಮಕ್ಕಳನ್ನು ಗುರುತಿಸಿ ಖಾಸಗಿ ಮತ್ತು ಮೊರಾರ್ಜಿ ಶಾಲೆಯಿಂದ ಟೀಸಿ ಕೊಟ್ಟು ಕಳುಹಿಸಿರುವ ಬಗ್ಗೆ ಕನ್ನಡಪ್ರಭ ವರದಿ ಪ್ರಕಟಿಸಿದ್ದು ವರದಿ ನೀಡುವಂತೆ ಕೇಳಿದೆ.
ಕೊಪ್ಪಳ:
ಎಸ್‌ಎಸ್‌ಎಲ್‌ಸಿ 100 % ರಿಸಲ್ಟ್‌ಗಾಗಿ ದಡ್ಡ ಮಕ್ಕಳಿಗೆ ಟೀಸಿ ಎನ್ನುವ ಶೀರ್ಷಿಕೆಯಡಿ ಕನ್ನಡಪ್ರಭ ಪ್ರಕಟಿಸಿದ ಸರಣಿ ವರದಿ ಆಧರಿಸಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.ಕೊಪ್ಪಳ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷ ನಾಗಣ್ಣ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯುವುದಕ್ಕಾಗಿ 9ನೇ ತರಗತಿಯಲ್ಲಿ ದಡ್ಡ ಮಕ್ಕಳನ್ನು ಗುರುತಿಸಿ ಖಾಸಗಿ ಮತ್ತು ಮೊರಾರ್ಜಿ ಶಾಲೆಯಿಂದ ಟೀಸಿ ಕೊಟ್ಟು ಕಳುಹಿಸಿರುವ ಬಗ್ಗೆ ಕನ್ನಡಪ್ರಭ ವರದಿ ಪ್ರಕಟಿಸಿದೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗುವುದು ಹಾಗೂ ಶಿಕ್ಷಣದಿಂದ ದೂರವಾಗಿರುವ ಸಾಧ್ಯತೆ ಇದೆ. ಈ ಕುರಿತು ಕಳೆದ ಮೂರು ವರ್ಷಗಳಲ್ಲಿ ಖಾಸಗಿ ಶಾಲೆ ಮತ್ತು ಮೊರಾರ್ಜಿ ಶಾಲೆಯಿಂದ 9ನೇ ತರಗತಿಗೆ ಎಷ್ಟು ವಿದ್ಯಾರ್ಥಿಗಳಿಗೆ ಟೀಸಿ ಕೊಟ್ಟು ಕಳುಹಿಸಲಾಗಿದೆ ಎನ್ನುವ ಮಾಹಿತಿ ನೀಡುವಂತೆ ತಾಕಿತು ಮಾಡಲಾಗಿದೆ.
ಮೂರು ವರ್ಷಗಳ ಅವಧಿಯಲ್ಲಿ ಮಕ್ಕಳ ಹಾಜರಾತಿಯನ್ನು ಸರಿಯಾಗಿ ಪರಾಮರ್ಶೆ ಮಾಡಿದರೆ ಸತ್ಯ ಗೊತ್ತಾಗುತ್ತದೆ. ಹೀಗಾಗಿ ಮೂರು ವರ್ಷದ 9 ಮತ್ತು 10ನೇ ತರಗತಿಯ ದಾಖಲಾದ ಮಕ್ಕಳ ಅಂಕಿ-ಸಂಖ್ಯೆಯನ್ನು 7 ದಿನದೊಳಗಾಗಿ ನೀಡುವಂತೆ ಕೋರಿದ್ದಾರೆ.ಈ ಕುರಿತು ಈ ಹಿಂದೆಯೂ ಮೌಖಿಕವಾಗಿಯೂ ಆಯೋಗದ ಮುಂದೆ ದೂರು ಬಂದಿವೆ. ಹೀಗಾಗಿ ಆಯೋಗ ಸ್ವಯಂ ದೂರು ದಾಖಲಿಸಿಕೊಳ್ಳುತ್ತಿದ್ದು, ಇದರಲ್ಲಿ ಸತ್ಯ ಗೊತ್ತಾಗುತ್ತದೆ. ಅಂಥ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕು ಮತ್ತು ಇದರಿಂದ ತೊಂದರೆಗೆ ಒಳಗಾದ ಮಕ್ಕಳಿಗೂ ನ್ಯಾಯ ಕೊಡಿಸಬೇಕಾಗಿದೆ.ಶೇಖರಗೌಡ ರಾಮತ್ನಾಳ ಸದಸ್ಯರು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ