ಪಾಕ್‌ ವಿರುದ್ಧ ‘ಚೋಟ್ ಮೂಟ್‌’ ಯುದ್ಧ: ಖರ್ಗೆ

| Published : May 20 2025, 11:48 PM IST

ಸಾರಾಂಶ

ಪಹಲ್ಗಾಂ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಚೋಟ್ ಮೂಟ್‌ ಯುದ್ದ ನಡೆದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪಹಲ್ಗಾಂ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಚೋಟ್ ಮೂಟ್‌ ಯುದ್ದ ನಡೆದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಖರ್ಗೆ, ‘17ನೇ ತಾರೀಕಿಗೆ ಕಾಶ್ಮೀರಕ್ಕೆ ಹೋಗುವುದನ್ನು ಕ್ಯಾನ್ಸಲ್ ಮಾಡಿದ ಮೋದಿ, ಪ್ರವಾಸಿಗರನ್ನು ಯಾಕೆ ತಡೆಯಲಿಲ್ಲ. ಕಾಶ್ಮೀರದಲ್ಲಿ ಗಲಾಟೆಯಾಗುವ ಸಾಧ್ಯತೆ ಇದೆ ಎಂಬುದು ಮೋದಿಗೆ ಗೊತ್ತಿತ್ತು. ಆದರೂ ಅದನ್ನು ತಡೆಯಲಿಲ್ಲ. ಹೆಚ್ಚುವರಿ ಭದ್ರತೆ ಹಾಕಲಿಲ್ಲ. ಹೆಚ್ಚೂ ಕಡಿಮೆ ಪಾಕ್‌ ವಿರುದ್ಧ ಚೋಟ್ ಮೂಟ್ ಯುದ್ಧ ನಡೆದಿವೆ’ ಎಂದರು.

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದನೆ ಕೃತ್ಯ ಖಂಡನೀಯ. ಪಾಕಿಗಳು ಹೇಡಿಗಳು. ಕೈಲಾಗದವರು. ಧರ್ಮದ ಹೆಸರಿನಲ್ಲಿ ಅಮಾಯಕ ಮುಗ್ಧರನ್ನು ಕೊಂದು ಹಾಕಿದ್ದಾರೆ. ಪಾಕಿಗಳಿಗೆ ಸ್ವಂತ ಶಕ್ತಿಯಿಲ್ಲ. ಚೀನಾದ ಬೆಂಬಲದಿಂದ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗುತ್ತಿದ್ದಾರೆ ಎಂದು ಅವರು ಪಹಲ್ಗಾಂ ಘಟನೆಯನ್ನು ಖಂಡಿಸಿದರು.

ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯ ನಡೆಯುತ್ತಿದೆ ಎಂದು ಮೋದಿ ಅವರಿಗೆ ತಿಳಿದಿತ್ತು. ಬೇಹುಗಾರಿಕೆಯಿಂದ ಅವರಿಗೆ ಮಾಹಿತಿ ತಿಳಿದಿದ್ದರಿಂದಾಗಿಯೇ ಅವರು ಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದರು. ಆದರೆ, ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯ ನಡೆಯುತ್ತಿದೆ ಎಂದು ಗೊತ್ತಿದ್ದೂ ಪಹಲ್ಗಾಂನಲ್ಲಿ ಯಾಕೆ ಪ್ರವಾಸಿಗರಿಗೆ ಭದ್ರತೆ ನೀಡಲಿಲ್ಲ. ಪ್ರವಾಸಕ್ಕೆ ಬರಬೇಡಿ ಎಂದು ಯಾಕೆ ಜನರಿಗೆ ಮುನ್ನೆಚ್ಚರಿಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಮೋದಿಯೇ ಹೊಣೆ ಎಂದರು.

ಪಹಲ್ಗಾಂ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ಎರಡು ಬಾರಿ ಸರ್ವಪಕ್ಷಗಳ ಸಭೆ ನಡೆಸಿದರು. ಆದರೆ, ಎರಡು ಸಭೆಗಳಿಗೂ ಅವರು ಬರಲಿಲ್ಲ. ಸೇನಾ ಅಧಿಕಾರಿಯನ್ನು ಪಾಕಿಸ್ತಾನದ ಸಹೋದರಿ ಎಂದು ಹೀಯಾಳಿಸಿದ ಬಿಜೆಪಿ ಸಚಿವನ ವಿರುದ್ಧ ಯಾವ ಕ್ರಮ ಕೈಗೊಂಡರು?. ಭಾರತದ ಸೇನೆ ಹಾಗೂ ಭಾರತದ ವಿರುದ್ಧ ಮಾತನಾಡುವವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು. ಬಿಜೆಪಿಯಲ್ಲಿರುವ ದೇಶದ್ರೋಹಿಗಳನ್ನು ಮೋದಿ ಮೊದಲು ಹೊರಹಾಕಬೇಕು ಎಂದು ಖರ್ಗೆ ಆಗ್ರಹಿಸಿದರು.

ಕಾಂಗ್ರೆಸ್ಸಿಗೆ ತ್ಯಾಗ-ಬಲಿದಾನದ ಪರಂಪರೆಯಿದೆ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ದೇಶಕ್ಕಾಗಿ ಪ್ರಾಣ ನೀಡಿದ್ದಾರೆ. ನಮಗೆ ದೇಶಭಕ್ತಿಯ ಬಗ್ಗೆ ಹೇಳಿಕೊಡಬೇಕಾಗಿಲ್ಲ. ದೇಶ ಮೊದಲು, ಜಾತಿ, ಧರ್ಮ ಆಮೇಲೆ ಎಂದು ಮೊದಲಿನಿಂದಲೂ ಪ್ರತಿಪಾದಿಸಿಕೊಂಡೇ ಬಂದವರು ನಾವು ಎಂದರು.

ಇನ್ನು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ ಖರ್ಗೆ ‘ರಾಜ್ಯದ ಅಭಿವೃದ್ಧಿಯ ಜತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದರ ಜತೆಗೆ ನಾಡಿನ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಅನೇಕ ಭರವಸೆ ನೀಡಿದ್ದರು. ಆದರೆ, ಯಾವುದನ್ನೂ ಈಡೇರಿಸಲಿಲ್ಲ. ಬ್ಯಾಂಕ್‌ ಖಾತೆಗೆ ₹15 ಲಕ್ಷ ಜಮೆ ಆಗಲಿಲ್ಲ. ನೋಟ್‌ ಬ್ಯಾನ್‌ನಿಂದ ಕಪ್ಪುಹಣ ಹೊರ ಬರಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಅಧಿಕಾರಕ್ಕಾಗಿ ಮೋದಿಯವರು ಇಲ್ಲಸಲ್ಲದ ಭರವಸೆಗಳನ್ನು ನೀಡಿದರು. ನುಡಿದಂತೆ ನಡೆಯುವ ಜಾಯಮಾನ ಬಿಜೆಪಿಯವರದ್ದಲ್ಲ. ಆದರೆ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಅನೇಕ ಸವಾಲುಗಳ ನಡುವೆ ಚುನಾವಣೆಗೂ ಮುನ್ನ ಮಾತು ಕೊಟ್ಟಂತೆಯೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸೈ ಎನಿಸಿಕೊಂಡಿದೆ ಎಂದು ಹೇಳಿದರು.ಮೋದಿಯೇ ಹೊಣೆ:

ಕೇಂದ್ರದ ಬಿಜೆಪಿ ಸರ್ಕಾರ ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ, ಇ.ಡಿ. ಹಾಗೂ ಸಿಬಿಐನಂತಹ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸುತ್ತಿದೆ. ಆದರೆ, ನಾವು ಯಾವುದಕ್ಕೂ ಜಗ್ಗಲ್ಲ. ಬಗ್ಗಲ್ಲ ಎಂಬುದನ್ನು ಬಿಜೆಪಿ ನಾಯಕರು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ, ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌, ಬಿಜೆಪಿಯ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಅವರು ಎಚ್ಚರಿಸಿದರು.