ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕುರುಬ ಸಮುದಾಯದ ವಿರುದ್ಧ ಕೀಳುಮಟ್ಟದ ಭಾಷೆಯನ್ನು ಬಳಸಿ ಜಾತಿ ನಿಂದನೆ ಮಾಡಿರುವ ಇಬ್ಬರನ್ನು ಕೂಡಲೇ ಬಂಧಿಸುವಂತೆ ವಕೀಲರಾದ ಮಧುಸೂದನ್ ಹಾಗೂ ಕೆಡಿಪಿ ಸದಸ್ಯ ಮಹೇಶ್ ಕಬ್ಬಾಳು ಒತ್ತಾಯಿಸಿದ್ದಾರೆ.ಅವರು ಪಟ್ಟಣದ ನಗರ ಪೊಲೀಸ್ ಠಾಣೆಗೆ ರಾಷ್ಟ್ರೀಯ ಅಹಿಂದ ಸಂಘಟನೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಾತಿ ನಿಂದನೆ ಮಾಡಿರುವುದನ್ನು ಖಂಡಿಸಿ ಸಬ್‌ಇನ್‌ಸ್ಪೆಕ್ಟರ್ ಮಲ್ಲಪ್ಪ ಅವರಿಗೆ ದೂರು ನೀಡಿ ಕೂಡಲೇ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಮಾತನಾಡಿ, ಬಸನಾಳು ಗ್ರಾಮದ ಹೇಮಾವತಿ ಬಡಾವಣೆಯಲ್ಲಿ ಬೆನ್ನಹಟ್ಟಿ ಗ್ರಾಮದ ಕುಮಾರ ಬಿ.ಎನ್ ಬಿನ್ ನಿಂಗಯ್ಯ ಹಾಗೂ ಶಾನಭೋಗನಹಳ್ಳಿ ಗ್ರಾಮದ ಮಹೇಶ ಎಂಬುವವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಜಾತಿಯ ಹೆಸರಿನಿಂದ ನಿಂದಿಸಿದ್ದಲ್ಲದೇ ಕುರುಬ ಸಮುದಾಯದ ವಿರುದ್ಧ ಕೀಳುಮಟ್ಟದ ಭಾಷೆಯನ್ನು ಬಳಸಿ ನಿಂದಿಸಿರುತ್ತಾರೆ. ಅವರು ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಿಂದ ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಹಾಗೂ ಕುರುಬ ಸಮುದಾಯಕ್ಕೆ ಧಕ್ಕೆ ಉಂಟಾಗಿರುತ್ತದೆ. ಇಂತಹ ವಿಕೃತ ಮನಸ್ಸುಳ್ಳ ವ್ಯಕ್ತಿಗಳಿಂದ ಜಾತಿ ಜಾತಿಗಳ ನಡುವೆ ದ್ವೇಷವನ್ನುಂಟುಮಾಡಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದ್ದರಿಂದ ಈ ಇಬ್ಬರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾಗೂರು ನವಿಲೆ ಹೋರಾಟ ಸಮಿತಿ ಅಧ್ಯಕ್ಷ ಎಚ್. ಸಿ. ಶಂಕರಲಿಂಗೇಗೌಡ, ಆರೋಗ್ಯ ರಕ್ಷಾ ಕಮಿಟಿ ಸದಸ್ಯ ಬಾಲು, ಕನ್ನಡ ಸಾಹಿತ್ಯ ಪರಿಷತ್ ಸಾಂಸ್ಕೃತಿಕ ಘಟಕದ ಕಾರ್ಯದರ್ಶಿ ಜಬೀಉಲ್ಲಾ ಬೇಗ್, ಕಾಂಗ್ರೆಸ್ ಮುಖಂಡರಾದ ಲಿಬರ್ಟಿ ಜಬೀ, ಸುರೇಶ್ ಕಬ್ಬಾಳು, ಪುರಸಭಾ ಮಾಜಿ ಸದಸ್ಯ ಪರಶುರಾಮ್, ಗಿರೀಶ್, ಮಂಜು ಡಿಂಕ ಮತ್ತಿತರಿದ್ದರು.