ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್‌ ಜ್ಞಾನ ಅತ್ಯವಶ್ಯ

| Published : Jul 01 2025, 12:47 AM IST

ಸಾರಾಂಶ

ಇಂದಿನ ಸ್ಪರ್ಧಾತ್ಮಕ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಂಪ್ಯೂಟರ್ ಜ್ಞಾನ ಹೊಂದಬೇಕು. ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಈ ಜ್ಞಾನವು ಅಗತ್ಯ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು. ಶ್ರೀರಾಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ತಂತ್ರಜ್ಞಾನ ನೆರವಿನ ಕಲಿಕಾ ಕಾರ್ಯಕ್ರಮ ಯೋಜನೆಯಡಿ ನೀಡಿರುವ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಹ ವಿದ್ಯಾರ್ಥಿ ದಿಸೆಯಿಂದಲೇ ಅಂತರ್ಜಾಲದಲ್ಲಿರುವ ಉತ್ತಮ ವಿಷಯಗಳನ್ನು ಅರಿತುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಇಂದಿನ ಸ್ಪರ್ಧಾತ್ಮಕ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಂಪ್ಯೂಟರ್ ಜ್ಞಾನ ಹೊಂದಬೇಕು. ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಈ ಜ್ಞಾನವು ಅಗತ್ಯ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಗೂರಮಾರನಹಳ್ಳಿ ಶ್ರೀರಾಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ತಂತ್ರಜ್ಞಾನ ನೆರವಿನ ಕಲಿಕಾ ಕಾರ್ಯಕ್ರಮ ಯೋಜನೆಯಡಿ ನೀಡಿರುವ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಹ ವಿದ್ಯಾರ್ಥಿ ದಿಸೆಯಿಂದಲೇ ಅಂತರ್ಜಾಲದಲ್ಲಿರುವ ಉತ್ತಮ ವಿಷಯಗಳನ್ನು ಅರಿತುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಶಾಲೆಗಳು ಶೇ.೧೦೦ ಫಲಿತಾಂಶಕ್ಕಾಗಿ ಸಾಧಾರಣವಾಗಿ ಓದುವ ವಿದ್ಯಾರ್ಥಿಗಳನ್ನು ವರ್ಗಾವಣೆ ಪತ್ರ ನೀಡಿ ಬೇರೆ ಶಾಲೆಗೆ ಕಳಿಸುತ್ತಿರುವುದು ಬೇಸರದ ಸಂಗತಿ. ಇಂತಹ ಪ್ರಸಂಗಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದ್ದು, ಸಮಾಜಘಾತುಕ ಶಕ್ತಿಗಳನ್ನು ಸೃಷ್ಟಿಸಿದಂತಾಗುತ್ತದೆ. ಇದಕ್ಕೆ ಎಂದಿಗೂ ಆಸ್ಪದ ನೀಡಬಾರದು. ಪ್ರಾಥಮಿಕ ಹಂತದಿಂದಲೂ ಒಂದೇ ಶಾಲೆಯಲ್ಲಿ ಓದಿದ ಮಕ್ಕಳನ್ನು ೧೦ನೇ ತರಗತಿವರೆಗೆ ಬರುವ ತನಕ ತಯಾರು ಮಾಡಲು ಆಗದಿರುವುದೂ ವಿಪರ್ಯಾಸವಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ರೀತಿಯ ೧೩ ಮಕ್ಕಳು ನವೋದಯ ವಿದ್ಯಾಶಾಲೆಗೆ ದಾಖಲಾಗಿದ್ದಾರೆ. ಪಾಲಕರೊಂದಿಗೆ ಕಡ್ಡಾಯವಾಗಿ ಸಭೆ ನಡೆಸಿ ಅವರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಳ್ಳಬೇಕು. ಮತ್ತೊಂದೆಡೆ ಹಲವು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನೂ ಮೀರಿಸುವ ಹಂತಕ್ಕೆ ಬೆಳೆದಿರುವುದು ಶ್ಲಾಘನೀಯ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಹಲವಾರು ಸೌಲಭ್ಯಗಳು ಮಕ್ಕಳಿಗೆ ಸಿಗುತ್ತಿದ್ದರೂ ಪಾಲಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುವುದು ಬೇಸರದ ಸಂಗತಿಯಾಗಿದೆ ಎಂದರು.ಡಯಟ್ ಉಪನ್ಯಾಸಕ ಸಿ.ಕೃಷ್ಣೇಗೌಡ ಮಾತನಾಡಿ, ವಿದ್ಯಾ ರ್ಥಿಗಳು ಗಣಕಯಂತ್ರದ ಸಾಮಾನ್ಯ ಜ್ಞಾನ ಪಡೆದುಕೊಳ್ಳಬೇಕು. ಇಂದಿನ ಕಂಪ್ಯೂಟರ್ ಯುಗದಲ್ಲಿ ಸಂಪರ್ಕ ಸಂವಹ ನಕ್ಕೆ ಇ-ಮೇಲ್ ಹಾಗೂ ಇತರ ಸಾಮಾಜಿಕ ಜಾಲತಾಣಗಳು ಹೆಚ್ಚು ಉಪಯುಕ್ತವಾಗಿವೆ. ಅವುಗಳ ನಿರ್ವಹಣೆ ವೇಳೆ ಎಚ್ಚರ ವಹಿಸಬೇಕು. ಅಂತರ್ಜಾಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ. ಒಳ್ಳೆಯದಕ್ಕೆ ಬಳಸಿಕೊಂಡಷ್ಟು ಅದರ ಲಾಭಹೆಚ್ಚು. ಹೀಗಾಗಿ ವಿದ್ಯಾರ್ಥಿಗಳು ಕೆಟ್ಟದ್ದನ್ನು ಬಿಟ್ಟು ಜ್ಞಾನಾರ್ಜನೆಗೆ ಪೂರಕವಾದ ಒಳ್ಳೆಯ ವಿಷಯಗಳನ್ನು ಮಾತ್ರ ತಿಳಿದುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.ಪ್ರಸಕ್ತ ಸಾಲಿನಲ್ಲಿ ತಂತ್ರಜ್ಞಾನ ನೆರವಿನ ಕಲಿಕಾ ಕಾರ್ಯಕ್ರಮ ಯೋಜನೆಯಡಿ ಜಿಲ್ಲೆಯ ೬ ಶಾಲೆಗಳಿಗೆ ಮಾತ್ರ ಕಂಪ್ಯೂಟರ್‌ಗಳನ್ನು ನೀಡುವ ಯೋಜನೆ ಇದೆ. ಅವುಗಳಲ್ಲಿ ಈ ಶಾಲೆಯೂ ಒಂದಾಗಿದೆ. ಅಕ್ಟೋಬರ್ ವೇಳೆಗೆ ಇನ್ನೂ ೬ ಕಂಪ್ಯೂಟರ್‌ಗಳನ್ನು ನೀಡಲಾಗುವುದು. ಈಗಾಗಲೇ ಪ್ರಯೋಗಾಲಯ ನಿರ್ಮಾಣಕ್ಕೆ ೨ ಲಕ್ಷ ರು.ಗಳನ್ನು ಕಳೆದ ಸಾಲಿನಲ್ಲಿಯೇ ನೀಡಲಾಗಿದೆ ಎಂದರು.

ಕ್ಷೇತ್ರ ಸಂಪನ್ಮೂಲ ಸಮನ್ವ ಯಾಧಿಕಾರಿ ಕೆ.ಎನ್.ಅನಿಲ್, ಮುಖ್ಯಶಿಕ್ಷಕಿ ಬಿ.ಎನ್.ಗೀತಾ, ಟಿಎಪಿಸಿಎಂಎಸ್ ಅಧ್ಯಕ್ಷ ಕುಮಾರ್, ಪುರಸಭಾ ಸದಸ್ಯ ಜಿ. ಆರ್‌. ಸುರೇಶ್, ಶಿಕ್ಷಣ ಸಂಯೋಜಕ ಲೋಕೇಶ್, ಶ್ರೀನಿವಾಸ್, ಕರಿಯಪ್ಪ ಗೌಡ, ಶಿವಾನಂದ್, ಸಿಆರ್‌ಪಿ ಮಲ್ಲೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಟಿ.ಆನಂದ್ ಇದ್ದರು.