ಸಾರಾಂಶ
. ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾನದ ಕಾರ್ಯಕ್ರಮದ ದಿನದಂದು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಪೊಲೀಸ್ ಬಂದು ಬಸ್ತ್ ಕಲ್ಪಿಸುವುದರ ಜತೆಗೆ ನಗರದಾದ್ಯಂತ ಪೊಲೀಸ್ ಗಸ್ತು ವ್ಯವಸ್ಥೆ ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಂದರ್ಭದಲ್ಲಿ ನಗರದಲ್ಲಿ ಶಾಂತಿ ಕದಡಲು ಯತ್ನಿಸಿದವರನ್ನು ಮಟ್ಟಹಾಕಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಸನ್ಮಾನಿಸಿದರು.ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪರೇಡ ಬಳಿಕ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘಿಸಿ ಸತ್ಕರಿಸುವ ಮೂಲಕ ಖಾಕಿ ಪಡೆಯಲ್ಲಿ ಹುಮ್ಮಸ್ಸು ತುಂಬುವ ಕಾರ್ಯ ಮಾಡಿದರು. ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾನದ ಕಾರ್ಯಕ್ರಮದ ದಿನದಂದು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಪೊಲೀಸ್ ಬಂದು ಬಸ್ತ್ ಕಲ್ಪಿಸುವುದರ ಜತೆಗೆ ನಗರದಾದ್ಯಂತ ಪೊಲೀಸ್ ಗಸ್ತು ವ್ಯವಸ್ಥೆ ಮಾಡಲಾಗಿತ್ತು.
ಆದರೂ ಕೆಲವು ಪುಂಡರು ಅಂದು ರಾತ್ರಿ ನಗರದ ದರ್ಬಾರ್ ಗಲ್ಲಿ ಮತ್ತು ಪೋರ್ಟ ರೋಡನಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸಿದಾಗ ತಕ್ಷಣ ಕಾರ್ಯ ಪ್ರವೃತ್ತರಾದ ಆರ್‌ಪಿಐ ವಿಠ್ಠಲ ಕೊಕಟನೂರ, ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ವಿಠ್ಠಲ ಹಾವನ್ನವರ, ಮಹಾಂತೇಶ ಮಠಪತಿ ಸಿಬ್ಬಂದಿ ನವೀನ್ ಕುಮಾರ್ ಎ.ಬಿ., ಮಲ್ಲಿಕಾರ್ಜುನ ಗುಂಜಿಕರ, ನಾಗರಾಜ ಭೀಮಗೌಡ, ಆರ್.ಎಸ್. ಕೋಲ್ಕಾರ, ಕೆ.ಎಸ್. ನಾಗರಾಳೆ, ಮನೋಹರ ಪಾಟೀಲ, ಅಸಿರ್ ಜಮಾದಾರ, ರಾಜು ಕಡಪಗೊಳ ತ್ವರಿತವಾಗಿ ಘಟನಾಸ್ಥಳಕ್ಕೆ ಧಾವಿಸಿ ಗಲಭೆ ಆಗದಂತೆ ತಪ್ಪಿಸಿ ಕಾನೂನು ವ್ಯವಸ್ಥೆಗೆ ಯಾವುದೇ ಧಕ್ಕೆ ಬರದಂತೆ ತಮ್ಮ ಕರ್ತವ್ಯ ನಿರ್ವಹಿಸಿದ್ದರು.ಈ ಹಿನ್ನೆಲೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಅವರು, ನಗದು ಬಹುಮಾನ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿ ಸನ್ಮಾನಿಸುವ ಮೂಲಕ ಹುರಿದುಮ್ಮಿಸುವ ಕಾರ್ಯ ಮಾಡಿದ್ದಾರೆ. ಈ ವೇಳೆ ಡಿಸಿಪಿಗಳಾದ ರೋಹನ್, ಸ್ನೇಹಾ ಪಿ.ವಿ., ಎಸಿಪಿಗಳು ಇದ್ದರು.