ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದೇಶ ಉಳಿಸುವ ಮಹಾಯಾನದ ಭಾಗವಾಗಿ ಏ. 26ರಂದು ದಾವಣಗರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನಡೆಸುತ್ತಿರುವುದಾಗಿ ದಲಿತ ನಾಯಕ ಗಡ್ಡಂ.ಎನ್. ವೆಂಕಟೇಶ್ ತಿಳಿಸಿದರು.ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ಕಾರ್ಪೊರೇಟ್ ಹಾಗೂ ಮನುವಾದಿ ಶಕ್ತಿಗಳ ಸಂಯುಕ್ತ ಮಾಫಿಯಾ ರೀತಿ ಕೆಲಸ ಮಾಡುತ್ತಿದೆ ಎಂದರು.
ಸಂವಿಧಾನ ವಿರೋಧಿ ಕಾನೂನುಅಧಿಕಾರಕ್ಕೆ ಬರಲು ದೇಶವನ್ನು ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ಛಿದ್ರಗೊಳಿಸಲಾಗುತ್ತಿದೆ. ಸಂವಿಧಾನ ನೀಡಿದ ಹಕ್ಕುಗಳಿಗೆ ವಿರುದ್ಧ ದಿಕ್ಕಿನಲ್ಲಿ ಕಾನೂನುಗಳನ್ನು ರೂಪಿಸಿ, ತನ್ನ ಕಾರ್ಪೋರೇಟ್ ಬಳಗವನ್ನು ಬೆಳೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ರೈತ, ಕಾರ್ಮಿಕ, ದಲಿತ, ಅಲ್ಪಸಂಖ್ಯಾತ, ಆದಿವಾಸಿ ಮುಂತಾದ ಜನ ವರ್ಗಗಳ ವಿರೋಧಿಯಾದ ನೀತಿಗಳ ವಿರುದ್ಧ ಕರ್ನಾಟಕ ಹಾಗೂ ಭಾರತದ ಜನಪರ ಸಂಘಟನೆಗಳೆಲ್ಲಾ ವಿವಿಧ ವೇದಿಕೆಗಳಡಿ ಒಗ್ಗೂಡಿ ನಿರಂತರ ಹೋರಾಟ ನಡೆಸುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ನೀತಿಗಳನ್ನೇ ಮುಂದುವರಿಸುತ್ತಿದೆ. ಗ್ಯಾರಂಟಿಗಳಂತಹ ಕೆಲವು ಜನಹಿತ ನೀತಿಗಳನ್ನು ಚುನಾವಣೆಗಾಗಿ ಮಾಡಿದ್ದು ಬಿಟ್ಟರೆ, ಮಿಕ್ಕಂತೆ ದೊಡ್ಡ ವ್ಯತ್ಯಾಸವಿಲ್ಲವಾಗಿದೆ. ಎಲ್ಲಾ ವಿರೋಧ ಪಕ್ಷಗಳೂ ತಾವು ಅಧಿಕಾರಕ್ಕೆ, ಬರುವ ಸಲುವಾಗಿ ಬಿಜೆಪಿಯನ್ನು ವಿರೋಧಿಸುತ್ತಿವೆ. ಆದರೆ ಈ ಶಕ್ತಿಗಳ ವಿರುದ್ಧ ನೀತಿಬದ್ಧ ಹೋರಾಟಕ್ಕೆ ಸಿದ್ಧರಿಲ್ಲ ಎಂದು ಟೀಕಿಸಿದರು.‘ಸಂವಿಧಾನ ಸಂರಕ್ಷಕ ಪಡೆ’ ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಒಂದು ಲಕ್ಷ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಪ್ರಕ್ರಿಯೆಗೆ ರಾಜ್ಯ ಮಟ್ಟದ ಚಾಲನೆ ನೀಡಲು ಇದೇ 26 ರಂದು ದಾವಣಗೆರೆಯಲ್ಲಿ “ಸಂವಿಧಾನ ಸಂರಕ್ಷಕರ ಸಮಾವೇಶ "ವನ್ನು ಆಯೋಜಿಸಲಾಗುತ್ತಿದೆ. ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಿ.ಸಿ.ಗಂಗಪ್ಪ, ಸುಧಾವೆಂಕಟೇಶ್, ಬಿ.ವಿ.ಆನಂದ್,ಸೌಭಾಗ್ಯ, ನಾರಾಯಣಸ್ವಾಮಿ, ಶಾಮೀರ್ ಜಿ, ಮತ್ತಿತರರು ಇದ್ದರು.