ಸಾರಾಂಶ
ಕನ್ನಡಪ್ರಭ ವಾರ್ತೆ ಮುಳಬಾಗಿಲುನಗರದ ಹಳೆ ಮದ್ರಾಸ್ ರಸ್ತೆ ಬೂಸಾಲಕುಂಟೆ ವ್ಯಾಪ್ತಿಯ ರಾಜಕಾಲುವೆ ಮತ್ತು ಚರಂಡಿಗಳನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಖಂಡಿಸಿ ಮಾದಿಗ ದಂಡೋರದಿಂದ ರಸ್ತೆ ತಡೆ ಮಾಡಿ ನೂರಾರು ಕಾರ್ಯಕರ್ತರು ಪ್ರತಿಭಟಿಸಿದರು.ನಗರಸಭೆ ಮಾಜಿ ಸದಸ್ಯ ಎಂ.ಎಸ್. ನಾರಾಯಣಸ್ವಾಮಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಬುಸಾಲಕುಂಟೆ ವ್ಯಾಪ್ತಿಯಲ್ಲಿ ರಾಜ ಕಾಲುವೆಗಳು ಮತ್ತು ಚರಂಡಿಗಳನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ಬಂದಾಗ ಜನರು ತೊಂದರೆ ಅನುಭವಿಸುವಂತಾಗಿದೆ ಎಂದರು.
ರಸ್ತೆ ಮೇಲೆ ಚರಂಡಿ ನೀರುಚರಂಡಿ ಮತ್ತು ರಾಜಕಾಲುವೆ ಒತ್ತುವರಿಯಿಂದಾಗಿ ಮಳೆಗಾಲದಲ್ಲಿ ಮಳೆ ನೀರು ಹರಿಯಲು ಅವಕಾಶ ಇಲ್ಲದಂತಾಗಿ ರಸ್ತೆ ಮೇಲೆ ನುಗ್ಗುತ್ತದೆ. ಚರಂಡಿಯ ಕೊಳಚೆ ನೀರು ರಸ್ತೆಯ ಮೇಲೆ ಹರಿಯುವುದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮನೆಗಳಿಗೆ ಮತ್ತು ಅಂಗಡಿಗಳಿಗೆ ಕೊಳಚೆ ನೀರು ಹರಿಯುತ್ತಿದ್ದು ಇದರಿಂದ ನಾನಾ ರೀತಿ ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿಸಿದರು.
ಸರ್ವೇ ಮಾಡಿಸುವ ಭರವಸೆಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ವಿ. ಗೀತಾ, ಪೌರಾಯುಕ್ತ ವಿ. ಶ್ರೀಧರ್ ಆಗಮಿಸಿ, ಮನವಿಪತ್ರ ಸ್ವೀಕರಿಸಿ ಮಾತನಾಡಿ, ಸರ್ವೇ ಸಿಬ್ಬಂದಿಯಿಂದ ಶೀಘ್ರದಲ್ಲೇ ಸರ್ವೇ ಕಾರ್ಯ ಮಾಡಿಸಿ ಒತ್ತುವರಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡ ಪಿ. ರಾಮಚಂದ್ರಯ್ಯ, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ. ದೇವರಾಜ್, ಜಿಲ್ಲಾಧ್ಯಕ್ಷ ಆಲೇರಿ ಮುನಿರಾಜು, ತಾಲೂಕು ಅಧ್ಯಕ್ಷ ಎಂ.ವಿ. ಸತೀಶ್, ಕಾರ್ಯದರ್ಶಿ ಎನ್.ವೇಣು, ವಕೀಲರಾದ ಪಿ.ನಟರಾಜ್, ಎಂ.ಎಸ್. ಕೃಷ್ಣಮೂರ್ತಿ, ವಿ. ಜಯಪ್ಪ, ದಸಂಸ ಮುಖಂಡ ಕೀಳುಹೊಳಲಿ ಸತೀಶ್ ಇದ್ದರು.