ಸಾರಾಂಶ
ಮಹೋತ್ಸವಕ್ಕೆ ಸೇವೆ ಸಲ್ಲಿಸಿದವರಿಗೆ ಅಭಿನಂದನಾ ಸಮಾರಂಭ । ೮.೭೫ ಕೋಟಿ ರು. ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬ ಜಾತ್ರಾ ಮಹೋತ್ಸವ-೨೦೨೩ ಅನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಮಾರ್ಗದರ್ಶನ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳು, ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳು ಮತ್ತು ಜಿಲ್ಲೆಯ ಎಲ್ಲಾ ಜನತೆಗೆ ಜಿಲ್ಲಾಧಿಕಾರಿ ಸತ್ಯಭಾಮ ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಅರ್ಚಕರೊಂದಿಗೆ ಚರ್ಚಿಸಿ ಈ ಬಾರಿ ದೇವಿ ದರ್ಶನಕ್ಕೆ ವಾರಪೂರ್ತಿ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ ಎಂದು ಹೇಳಿದರು.
ಪ್ರತಿ ಬಾರಿಗಿಂತ ವಿಭಿನ್ನವಾಗಿ ಹಾಸನಾಂಬ ಜಾತ್ರೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ನಿರ್ದೇಶನದಂತೆ ಭಕ್ತಾದಿಗಳಿಗೆ ತೊಂದರೆ ಆಗದಂತೆ ನೆಲಹಾಸು, ಜರ್ಮನ್ ಟೆಂಟ್, ಜನ ಸಂದಣಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಾರ್ ರೂಂ ತೆರೆಯಲಾಗಿತ್ತು. ಜೊತೆಗೆ ೬೪ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು ಎಂದು ತಿಳಿಸಿದರು.ಈ ಬಾರಿ ದೇವಸ್ಥಾನದ ಮೇಲ್ಛಾವಣಿ ದುರಸ್ತಿ ಮಾಡುವುದು, ದೇವಸ್ಥಾನಕ್ಕೆ ಬಣ್ಣದ ಜತೆಗೆ ದೇವಸ್ಥಾನದ ಪಕ್ಕದಲ್ಲಿದ್ದ ಅರ್ಚಕರ ಮನೆಯ ಅರ್ಧಭಾಗವನ್ನು ಖರೀದಿ ಮಾಡಿ ಜಾತ್ರಾ ಮಹೊತ್ಸವದ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಯಿತು. ಹೊಸ ಕಳಶ ಪ್ರತಿಷ್ಠಾಪಿಸಲಾಯಿತು. ಈ ಎಲ್ಲಾ ಕೆಲಸಗಳನ್ನು ಶ್ರೀ ಹಾಸನಾಂಬ ತಾಯಿಯವರ ದಯೇಯಿಂದ ಮಾಡಲಾಗಿದೆ ಎಂದು ಭಾವಿಸುತ್ತೇನೆ. ಈ ಬಾರಿ ೮.೭೫ ಕೋಟಿ ರು. ದಾಖಲೆಯ ಕಾಣಿಕೆ ಸಂಗ್ರಹವಾಗಿದೆ ಎಂದರು.
ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಆಯುಕ್ತರಾದ ಪಿ.ಜಿ.ಆರ್.ಸಿಂದ್ಯಾ ಮಾತನಾಡಿ, ಜಿಲ್ಲಾಧಿಕಾರಿಯವರು ಎಲ್ಲರನ್ನು ಒಂದು ತಂಡವಾಗಿ ಒಟ್ಟಿಗೆ ತೆಗೆದುಕೊಂಡು ಹೋಗುವುದರ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ೧೬ ಜಿಲ್ಲೆಯಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಬಂದು ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರಲ್ಲದೆ, ಜಾತ್ರಾ ಹುಂಡಿ ಹಣ ಎಣಿಕೆಯಲ್ಲಿ ಇವರನ್ನು ಬಳಸಿಕೊಳ್ಳುವುದು ಇವರ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರದರ್ಶಿಸುತ್ತದೆ. ಉತ್ತಮ ಉತ್ಕೃಷ್ಟವಾದ ಸೇವೆಯನ್ನು ತಾಳ್ಮೆಯಿಂದ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಮೈಸೂರಿನ ಚಾಮುಂಡೇಶ್ವರಿ, ಸವದತ್ತಿ ಎಲ್ಲಮ್ಮ, ಧರ್ಮಸ್ಥಳದ ಲಕ್ಷದೀಪೋತ್ಸವದಂತೆ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವು ವಿಶೇಷವಾಗಿ ಜರುಗುತ್ತದೆ. ದೇವಿಗೆ ವಿಶೇಷ ಶಕ್ತಿ ಇದೆ ಎಂಬ ಮನೋಭಾವದಿಂದ ಜನರು ಭಕ್ತಿಭಾವದಿಂದ ದರ್ಶನಕ್ಕೆ ಆಗಮಿಸುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೌರ ಕಾರ್ಮಿಕರನ್ನು ಪ್ರೀತಿ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಜೆ.ಗೋಪಾಲಕೃಷ್ಣ, ಎನ್.ಸಿ.ಸಿ. ಕಮಾಂಡೆಂಟ್ ಪುನಿತ್, ಉಪ ವಿಭಾಗಾಧಿಕಾರಿಗಳಾದ ಶೃತಿ, ಮಾರುತಿ., ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕರಾದ ಸುಜಯ್, ಸಹಾಯಕ ನಿರ್ದೇಶಕರಾದ ಶಂಸುದ್ದೀನ್ ಉಪಸ್ಥಿತರಿದ್ದರು.ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿದರು.