ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನೂರಾರು ಜನರ ಜೀವ-ಜೀವನ ವಾಹನ ಚಾಲಕರ ಕೈಲಿರುತ್ತದೆ. ಹಾಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಹೆಚ್ಚಿನ ಸಮಯ ಮೀಸಲಿಟ್ಟು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ತಿಳಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ವಾಹನ ಚಾಲಕರಿಗೆ ಹೃದಯಾಘಾತ ತಡೆ ಬಗ್ಗೆ ಅರಿವು ಮೂಡಿಸಲು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ವಾಹನ ಚಾಲಕರ ಸೇವೆ ಅಗತ್ಯವಿದೆ. ಇತ್ತೀಚಿನ ವರದಿಯ ಪ್ರಕಾರ ಶೇ.೧೦೦ರಲ್ಲಿ ಶೇ.೩೦ರಷ್ಟು ಜನ ವಾಹನ ಚಾಲಕರು ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಇದಕ್ಕೆ ಕಾರಣ ಮಾನಸಿಕ ಒತ್ತಡದಿಂದ ಕೆಲಸ ಮಾಡುವುದು ಮತ್ತು ವ್ಯಸನಗಳು, ದುಶ್ಚಟಗಳು ಕಾರಣವಾಗಿರಬಹುದು. ಆದ್ದರಿಂದ ಅವುಗಳನ್ನು ಬಿಟ್ಟು ಶಿಸ್ತುಬದ್ಧ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಹೇಳಿದರು.
ವೈದ್ಯರಿಗಿಂತ ವಾಹನ ಚಾಲಕರು ಮೊದಲು ಮುಖ್ಯ. ಚಾಲಕರು ಆರೋಗ್ಯವಾಗಿದ್ದರೆ ಅವರ ಕುಟುಂಬ, ಸಮಾಜ ಆರೋಗ್ಯವಾಗಿರುತ್ತದೆ. ಮಾನಸಿಕವಾಗಿ ದೈಹಿಕವಾಗಿ ಒಂದು ಉತ್ತಮ ಆರೋಗ್ಯವನ್ನು ಇಟ್ಟುಕೊಳ್ಳುವುದೇ ನಿಜವಾದ ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರಲ್ಲದೆ, ವಾಹನ ಚಾಲಕ ವರ್ಗವನ್ನು ಗುರಿಯಾಗಿಸಿಕೊಂಡು ಅವರ ಜೀವನವನ್ನು ಸುಧಾರಿಸಲು ಜಿಲ್ಲಾಡಳಿತವೆಲ್ಲ ಒಗ್ಗೂಡಿ ಇದೇ ತಿಂಗಳ ೩೦ನೇ ತಾರೀಖಿನಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುತ್ತಿದ್ದೇವೆ, ಜೊತೆಗೆ ಸರ್ಕಾರವು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗಳಂತಹ ಅನೇಕ ಯೋಜನೆಗಳನ್ನು ನಿಮ್ಮ ಅನುಕೂಲಕ್ಕೆ ನೀಡಿದೆ ಅವುಗಳ ಸದುಪಯೋಗ ಪಡೆದುಕೊಳ್ಳಿ ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ, ನಿಮ್ಮ ೪೫ ನಿಮಿಷದ ನಡಿಗೆ ೧೦ ವರ್ಷದ ಆಯಸ್ಸನ್ನು ಹೆಚ್ಚಿಸುವಂತಹದ್ದಾಗಿದೆ. ಹಾಗಾಗಿ ದಿನಕ್ಕೆ ಒಂದು ಗಂಟೆಯಾದರೂ ನಿಮ್ಮ ಆರೋಗ್ಯಕ್ಕಾಗಿ ಮೀಸಲಿಡಿ. ಆರೋಗ್ಯದ ಜೊತೆಗೆ ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ನಿದ್ರೆ, ಆಹಾರ, ಆರೋಗ್ಯದ ಕಡೆಗೆ ಹೆಚ್ಚಿನ ಗಮನವಹಿಸಿ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ ಕೃಷ್ಣ ಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನಿಲ್, ಹಿಮ್ಸ್ ನಿರ್ದೇಶಕರಾದ ಡಾ. ರಾಜಣ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಪ್ರಕಾಶ್, ಕೆಎಸ್‌ಆರ್‌ಟಿಸಿ ಪ್ರಾಂಶುಪಾಲರಾದ ಗೀತಾಂಜಲಿ, ಕಾರ್ಮಿಕ ಕಲ್ಯಾಣ ಅಧಿಕಾರಿ ಕೆ.ಟಿ ರವಿ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಚೇತನ್, ಆರ್‌ಸಿಎಚ್ ಅಧಿಕಾರಿ ಡಾ. ಶಿವಶಂಕರ್, ಜಿಲ್ಲಾ ಶಸ್ತ್ರಕಿತ್ಸಕರಾದ ಡಾ. ನಾಗಪ್ಪ, ಡಾ ನಾಗೇಶ್ ಆರಾಧ್ಯ, ಮನೋರೋಗ ತಜ್ಞರಾದ ಡಾ. ಸುನೀತಾ, ಕಾರ್ಲೆ ವೈದ್ಯಾಧಿಕಾರಿಗಳಾದ ಡಾ. ತೇಜಸ್ವಿ ಉಪಸ್ಥಿತರಿದ್ದರು. ವಾಹನ ಚಾಲಕ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ವಾಹನ ಚಾಲಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.