ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಅರುವನಹಳ್ಳಿ ಗ್ರಾಮದ ಉದ್ಭವ ಬಸವಣ್ಣ ದೇವಸ್ಥಾನದ ೮ ಎಕರೆ ಮೀಸಲಿಟ್ಟ ಜಮೀನನ್ನು ಬೇರೆಯವರಿಗೆ ಖಾತೆ ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ದೇವಸ್ಥಾನ ಮುಖ್ಯ ವ್ಯವಸ್ಥಾಪಕ ನಾಗರಾಜ್ ಮಾತನಾಡಿ, ಶ್ರವಣಬೆಳಗೊಳ ಹೋಬಳಿ ಅರುವನಹಳ್ಳಿ ಗ್ರಾಮದ ಉದ್ಭವ ಬಸವಣ್ಣ ಮತ್ತು ಕಾಡುಬಸವೇಶ್ವರ ದೇಗುಲ ಸುಮಾರು ೧೦-೧೫ ಹಳ್ಳಿಗಳ ದೇವಾಲಯವಾಗಿದ್ದು, ಈ ದೇವಾಲಯ ಸರ್ಕಾರದಿಂದ ಎಂಟು ಎಕರೆ ಜಮೀನನ್ನು ಕಾಯ್ದಿರಿಸಲಾಗಿತ್ತು. ಆದರೆ ಕೆಲ ಕಂದಾಯ ಇಲಾಖೆ ಅಧಿಕಾರಿಗಳು ಈ ಎಂಟು ಎಕರೆ ಜಮೀನನ್ನು ಬೇರೆಯವರಿಗೆ ಖಾತೆ ಮಾಡಿದ್ದಾರೆ. ಜೊತೆಗೆ ಈ ಜಾಗವನ್ನು ಖಾತೆದಾರರು ಉಳುಮೆಯನ್ನು ಸಹ ಮಾಡುತ್ತಿದ್ದು, ಈ ಜಾಗ ನಮಗೆ ಸೇರುವುದು ಎಂದು ದೇವಸ್ಥಾನಕ್ಕೆ ಜಾಗವನ್ನು ನೀಡದೆ ಸಮಸ್ಯೆಯನ್ನು ಉಂಟುಮಾಡಿದ್ದಾರೆ ಹಾಗೂ ಗ್ರಾಮಸ್ಥರು ಇದರ ಬಗ್ಗೆ ಕೇಳಲು ಹೋದರೆ ಗ್ರಾಮಸ್ಥರ ಮೇಲೆ ಜಗಳ ಆಡುವ ಪರಿಸ್ಥಿತಿಯು ಕೂಡ ನಿರ್ಮಾಣವಾಗಿದೆ. ದೇವಾಲಯ ತನ್ನದೇ ಆದ ಇತಿಹಾಸವನ್ನು ಕೂಡ ಒಳಗೊಂಡಿದೆ. ಈಗಾಗಲೇ ಗ್ರಾಮಸ್ಥರು ಮತ್ತು ಕೆಲ ರಾಜಕಾರಣಿಗಳನ್ನು ಕೂರಿಸಿ ಕೂಡ ಮಾತುಕತೆ ಮಾಡಲಾಗಿದೆ. ಆದರೂ ಕೂಡ ಈ ಜಾಗದ ಸಮಸ್ಯೆ ಬಗೆಹರಿದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಂದ ಮಾತ್ರ ಸಾಧ್ಯ. ಈ ಸಮಸ್ಯೆಯನ್ನು ಉಂಟುಮಾಡಿರುವುದು ಕಂದಾಯ ಇಲಾಖೆ ಅಧಿಕಾರಿಗಳು. ಹಾಗಾಗಿ ಅವರೇ ಬಗೆಹರಿಸಲು ಮುಂದಾಗಬೇಕು ಎಂದರು. ಇದೇ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಮುಖಂಡ ಅಶೋಕ್ ಮಾತನಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ದೇವಸ್ಥಾನಕ್ಕೆ ಜಾಗವನ್ನು ಬಿಡಿಸಿಕೊಡಬೇಕು ಮತ್ತು ದೇವಸ್ಥಾನದ ಹೆಸರಿಗೆ ಖಾತೆ ಮಾಡಿಕೊಡಬೇಕು. ತಾಲೂಕಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಈ ದೇವಸ್ಥಾನಕ್ಕೆ ಸೇರಿರಬೇಕಾದ ಆಸ್ತಿಯನ್ನು ಹಣ ಮತ್ತು ರಾಜಕೀಯ ಹೊಂದಿರುವ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟು ಇಂದು ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ ಜಾತ್ರೆ ಮತ್ತು ಇತರ ಕಾರ್ಯಕ್ರಮ ಮಾಡಲು ಸ್ಥಳ ಅವಕಾಶವಿಲ್ಲದೆ ರಸ್ತೆ ಮತ್ತು ಬೇರೆಯವರ ಜಮೀನಿನಲ್ಲಿ ಜಾತ್ರೆ ಮತ್ತು ಅನ್ನದಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಹಿಂದೆಯೂ ಕೂಡ ಗ್ರಾಮಸ್ಥರು ಮತ್ತು ಗ್ರಾಮದ ಮುಖಂಡರುಗಳು ಒಟ್ಟಾಗಿ ಸೇರಿಕೊಂಡು ಜಿಲ್ಲಾಧಿಕಾರಿಗಳಿಗೆ ಮತ್ತು ಕಂದಾಯ ಇಲಾಖೆಗೆ ಈಗಾಗಲೇ ಅರ್ಜಿಯನ್ನು ಸಹ ನೀಡಿದ್ದೇವೆ. ಆದರೂ ಕೂಡ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ದೇವಸ್ಥಾನಕ್ಕೆ ಸಂಬಂಧಪಟ್ಟ ೮ ಎಕರೆ ಜಮೀನನ್ನು ದೇವಸ್ಥಾನಕ್ಕೆ ಉಳಿಸಿಕೊಡಬೇಕೆಂದು ಮನವಿ ಮಾಡಿದರು. ಹಾಗೇನಾದರೂ ಜಮೀನನ್ನು ನೀಡದೆ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.