ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ಕಾರಿ ನೌಕರರು ಒತ್ತಡ ಮುಕ್ತರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಸೋಮವಾರ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಆತ್ಮಸಾಕ್ಷಿಯಂತೆ ನಡೆದುಕೊಳ್ಳಿಸರ್ಕಾರಗಳು ಜಾರಿ ಮಾಡುವ ಯೋಜನೆ, ಕಾರ್ಯಕ್ರಮ, ಆದೇಶಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ವಿವಿಧ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಮಹತ್ವದ ಹೊಣೆಗಾರಿಕೆ ಸರ್ಕಾರಿ ನೌಕರರ ಮೇಲಿದೆ. ಸರ್ಕಾರಿ ನೌಕರರು ಆತ್ಮ ವಂಚನೆ ಮಾಡಿಕೊಳ್ಳದೇ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳ ಬೇಕು ಮತ್ತು ಸರ್ಕಾರಿ ನೌಕರರು ಒತ್ತಡ ಮುಕ್ತರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದರೆ ಮಾತ್ರ ಸರ್ಕಾರಗಳ ಯೋಜನೆಗಳು,ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದರು.
ಸರ್ಕಾರಿ ನೌಕರರ ಉತ್ತಮ ಆರೋಗ್ಯದ ದೃಷ್ಟಿಯಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಯೋಗ,ಪ್ರಾಣಾಯಾಮ ಧ್ಯಾನದ ಜೊತೆಗೆ ಲಘು ವ್ಯಾಯಾಮವನ್ನು ದೈನಂದಿನ ಚಟುವಟಿಕೆಗಳ ಭಾಗವನ್ನಾಗಿಸಿಕೊಳ್ಳಬೇಕು. ಆ ಮೂಲಕ ಒತ್ತಡ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿಕೊಂಡು ಸಾರ್ವಜನಿಕರ ಕೆಲಸಗಳನ್ನು ಆಯಾ ದಿನಗಳಲ್ಲೇ ಪೂರ್ಣಗೊಳಿಸಬೇಕು ಎಂದು ಸಲಹೆ ಮಾಡಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ನಗರ ಸಭೆ ಉಪಾಧ್ಯಕ್ಷ ನಾಗರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಖಜಾಂಚಿ ಅರುಣ್ ಕುಮಾರ್, ಸಂಘದ ಜಿಲ್ಲಾ ರಾಜ್ಯ ಪರಿಷತ್ ಸದಸ್ಯ ವಿ.ಅಮರ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸುನಿಲ್ ಪಿ. ಆರ್, ಜಿಲ್ಲಾ ಗೌರವಾಧ್ಯಕ್ಷ ರೆಡ್ಡಪ್ಪ, ಸರ್ಕಾರಿ ನೌಕರರು ಇದ್ದರು.
.