ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯನ್ನು ಶುದ್ಧವಾಗಿ ಕಾಪಾಡಿಕೊಳ್ಳಬೇಕು ಹಾಗೂ ಪರಿಸರ ಮಾಲಿನ್ಯವಾದರೆ, ಪ್ರಾಣಿಪಕ್ಷಿಗಳು ಅನೇಕ ರೋಗಗಳಿಗೆ ತುತ್ತಾಗುವ ಜತೆಗೆ ಸಮಸ್ಯೆ ಸೃಷ್ಠಿಯಾಗುತ್ತದೆ. ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ದೊಡ್ಡಕಾಡನೂರು ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ ಸಲಹೆ ನೀಡಿದರು.ತಾಲೂಕಿನ ನಗರ್ತಿ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಪರಿಸರ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ ಎಂಬ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದರು. ಯುವಜನರು ಅದರಲ್ಲಿಯೂ ವಿದ್ಯಾರ್ಥಿಗಳು ಪರಿಸರ ರಕ್ಷಣೆಯಲ್ಲಿ ಹೆಚ್ಚಿನ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಪರಿಸರ ಮಲೀನವಾಗುವುದರಿಂದ ನಾವು ಮುಂದಿನ ದಿನಗಳಲ್ಲಿ ಅಪಾರವಾದ ತೊಂದರೆಗಳಿಗೆ ಸಿಕ್ಕಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಪರಿಸರ ಸಂರಕ್ಷಣೆ ಎಂದರೆ ನಾವು ವಾಸ ಮಾಡುವ ಮನೆ, ಶಾಲೆ, ಕಾಲೇಜು, ಆಸ್ಪತ್ರೆ, ಹೋಟೆಲ್, ಅಂಗಡಿ, ಕಚೇರಿಗಳು ಯಾವುದೇ ಆಗಿರಲಿ, ಅವುಗಳನ್ನು ಸುತ್ತಮುತ್ತಲಿನಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಎಂದರ್ಥ. ಪ್ರತಿನಿತ್ಯದ ಜೀವನದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಿ, ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದರು.
ತ್ಯಾಜ್ಯವಸ್ತುಗಳನ್ನು ಎಲ್ಲೆಲ್ಲೊ ಬಿಸಾಡಬಾರದು, ದನಕರುಗಳು ತ್ಯಾಜ್ಯದ ಕವರ್‌ಗಳನ್ನು ತಿನ್ನುವುದರಿಂದ ಅವುಗಳಿಗೂ ಅನೇಕ ರೋಗಗಳು ಬರುತ್ತವೆ. ಜೊತೆಗೆ ಪ್ರಾಣಿಗಳ ಕರುಳಿನಲ್ಲಿ ಸಿಕ್ಕಿಕೊಂಡು ಪ್ರಾಣ ಬಿಡುತ್ತವೆ ಮತ್ತು ತ್ಯಾಜ್ಯ ವಸ್ತುಗಳಲ್ಲಿ ನೀರು ತುಂಬಿಕೊಂಡು, ಸೊಳ್ಳೆಗಳ ಸಂಖ್ಯೆ ಜಾಸ್ತಿಯಾಗಿ ಅವುಗಳಿಂದ ಅನೇಕ ರೋಗಗಳು ಬರುತ್ತದೆ. ಗಿಡ ಮರಗಳನ್ನು ಕಡಿಯುವುದು, ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ರಸಗೊಬ್ಬರ, ಕೀಟನಾಶಕ ಬಳಸುವುದರಿಂದಲೂ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಮನಸ್ಸಿನ ಮಾಲಿನ್ಯವು ಭೌತಿಕ ಪರಿಸರಕ್ಕಿಂತಲೂ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ನಾವುಗಳು ಪರಿಸರಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದು ಮಾಡಲು ಸಾಧ್ಯವಾದರೆ ಮಾಡಬೇಕು. ಒಳ್ಳೆಯದನ್ನು ಮಾಡಲು ಸಾಧ್ಯವಾಗದಿದ್ದರೆ, ಸುಮ್ಮನೆ ಇರಬೇಕು. ಯಾವುದೇ ಕಾರಣಕ್ಕೂ ಕೆಟ್ಟದ್ದು ಮಾಡಬಾರದು ಅಂದರೆ ಪರಿಸರ ಮಾಲಿನ್ಯಕ್ಕೆ ಮುಂದಾಗಬಾರದು ಎಂದು ಸಲಹೆ ನೀಡಿದರು.ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ನಂದನ್ ಸ್ವಾಗತಿಸಿದರು ಹಾಗೂ ಶಿಬಿರಾಧಿಕಾರಿಗಳಾದ ಡಾ. ಉಮೇಶ್ ವಂದನಾರ್ಪಣೆ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾದ ಬರ್ನಾಡ್ ಎಫ್. ಅಧ್ಯಕ್ಷತೆ ವಹಿಸಿದ್ದರು. ಸಹ ಶಿಬಿರಾಧಿಕಾರಿ ಡಾ. ಸಿದ್ಧರಾಮು ಆರ್ ಮುಖಂಡರಾದ ಧನಂಜಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಗರ್ತಿ ಗ್ರಾಮದ ಮುಖಂಡರು, ಕಾಲೇಜಿನ ಉಪನ್ಯಾಸಕರು ಹಾಗೂ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.