ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಧಾರಣೆ ಕುಸಿತ ತಾಲೂಕಿನಲ್ಲಿ ಮತ್ತಷ್ಟು ರೈತರು ಭತ್ತ ಬೆಳೆಯುವುದರಿಂದ ವಿಮುಖವಾಗುವಂತೆ ಮಾಡಿದೆ.ಭತ್ತ ಬೆಳೆಯುವುದು ನಷ್ಟ, ಆದಾಯಕ್ಕಿಂತ ಖರ್ಚೇ ಹೆಚ್ಚು ಎಂಬ ಕಾರಣದಿಂದ ಕಳೆದೊಂದು ದಶಕದಿಂದ ಸಾಕಷ್ಟು ರೈತರು ಭತ್ತ ಬೆಳೆಯುವುದನ್ನೆ ಬಿಟ್ಟಿದ್ದಾರೆ. ಇದರಿಂದಾಗಿ ತಾಲೂಕಿನಲ್ಲಿಯೇ ಎಲ್ಲೆಂದರಲ್ಲಿ ಪಾಳುಬಿದ್ದ ಗದ್ದೆಗಳು ಸಾವಿರಾರು ಎಕರೆಯಷ್ಟು ಕಣ್ಣಿಗೆ ರಾಚುತ್ತಿವೆ. ತಾಲೂಕಿನಲ್ಲಿ ೧೧ ಸಾವಿರ ಹೇಕ್ಟೆರ್ ಭತ್ತದ ಗದ್ದೆಗಳಿದ್ದರೂ ಪ್ರಸಕ್ತವರ್ಷ ಕೇವಲ ೭೨೦೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದ್ದು, ಹತ್ತಾರು ಎಕರೆ ಭತ್ತದ ಗದ್ದೆಗಳಿದ್ದರೂ ಅಂಗಡಿಯಿಂದ ಕೊಂಡು ತಂದು ತಿನ್ನುವ ಸ್ಥಿತಿ ತಾಲೂಕಿನ ರೈತರದ್ದಾಗಿದೆ. ಆದರೂ, ಈ ಮಧ್ಯೆ ಕೆಲವು ರೈತರು ಹಲವು ಸಮಸ್ಯೆಗಳ ನಡುವೆ ಭತ್ತ ಬೆಳೆಯುತ್ತಿದ್ದಾರೆ. ಆದರೆ ಪ್ರಸಕ್ತವರ್ಷ ಭತ್ತಕ್ಕಿರುವ ಧಾರಣೆ ಇವರನ್ನೂ ಸಹ ಬೆಳೆ ಬೆಳೆಯುವುದರಿಂದ ವಿಮುಖವಾಗುವಂತೆ ಮಾಡಿದೆ.
ಸದ್ಯ ತಾಲೂಕಿನಲ್ಲಿ ತುಂಗಾ ಭತ್ತವನ್ನು ಶೇ. ೮೦ರಷ್ಟು ಬೆಳೆದಿದ್ದರೆ, ಅಲ್ಪ ಪ್ರಮಾಣದಲ್ಲಿ ಆರ್‌ಎನ್‌ಆರ್ ಹೈಬ್ರಿಡ್ ಭತ್ತ ಬೆಳೆದಿದ್ದು ಅಲ್ಲೊಬ್ಬ ಇಲ್ಲೊಬ್ಬ ರೈತರು ಊಟಕ್ಕೆ ಉತ್ತಮ ಎಂಬ ಕಲ್ಪನೆಯಲ್ಲಿ ಸಣ್ಣಮಧು, ರಾಜಮುಡಿಯಂತಹ ಭತ್ತ ಬೆಳೆಯುತ್ತಿದ್ದಾರೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಎಲ್ಲ ಭತ್ತಕ್ಕೂ ಪ್ರತಿಕ್ವಿಂಟಲ್‌ಗೆ ೫೦೦ ರು.ಗಳಿಂದ ಸಾವಿರರೂಗಳವರಗೆ ಧಾರಣೆ ಕಡಿಮೆಯಾಗಿದೆ. ಕಳೆದ ಬಾರಿ ತುಂಗಾ ಭತ್ತ ಪ್ರತಿ ಕ್ವಿಂಟಲ್‌ಗೆ ೨೫೦೦ ರಿಂದ ೨೮೦೦ ರು.ಗಳವರಗೆ ದರವಿದ್ದರೆ ಈ ಬಾರಿ ೧೮೦೦ ರು.ಗಳಿಂದ ೨೦೦೦ ಸಾವಿರಕ್ಕೆ ಸೀಮಿತಗೊಂಡಿದೆ. ರಾಜಮುಡಿ ಭತ್ತ ಕಳೆದ ಬಾರಿ ೩೫೦೦ರಿಂದ ನಾಲ್ಕುಸಾವಿರ ರು.ಗಳ ಆಜುಬಾಜಿನಲ್ಲಿದ್ದರೆ ಈ ಬಾರಿ ೨೭೦೦ ರು.ಗಳಿಂದ ೩೦೦೦ ರು.ಗಳಲ್ಲಿ ಮಾರಾಟವಾಗುತ್ತಿದೆ. ಸಣ್ಣಮಧು ಭತ್ತಕ್ಕೂ ಸಹ ಧಾರಣೆ ಕುಸಿತದ ಬಿಸಿ ತಟ್ಟಿದ್ದು ೩೩೦೦ ರು.ಗಳಿಂದ ೩೭೦೦ರು.ಗಳವರಗೆ ಪ್ರತಿಕ್ವಿಂಟಲ್‌ಗೆ ಮಾರಾಟವಾಗುತ್ತಿದ್ದ ಈ ಭತ್ತ ಪ್ರಸಕ್ತವರ್ಷ ೨೪೦೦ರು.ಗಳಿಂದ ೨೮೦೦ ರು.ಗಳಲ್ಲಿ ಮಾರಾಟವಾಗುತ್ತಿದೆ. ಇದರಿಂದಾಗಿ ಕಾಡುಪ್ರಾಣಿಗಳ ಕಾಟ, ಕಾರ್ಮಿಕರ ಕೊರತೆ ನಡುವೆ ಶ್ರಮಪಟ್ಟು ಬೆಳೆದಿದ್ದ ಬೆಳೆಗಾರರಿಗೆ ಧಾರಣೆ ಕುಸಿತ ಭ್ರಮನಿರಸವಾಗುವಂತೆ ಮಾಡಿದೆ.ಕಾರ್ಮಿಕರು ಬರುವುದಿಲ್ಲ: ಭತ್ತದ ಪೈರು ಕಟಾವು ಸಂಸ್ಕರಣೆ ಕಷ್ಟದ ಕೆಲಸ ಎಂಬ ಕಾರಣಕ್ಕೆ ಎಷ್ಟೇ ಕೂಲಿ ಕೊಟ್ಟರೂ ಸ್ಥಳೀಯ ಕಾರ್ಮಿಕರು ಭತ್ತದ ಗದ್ದೆ ಕೆಲಸ ಮಾಡಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಭತ್ತದ ಕೆಲಸದ ಅನುಭವವಿಲ್ಲದಿದ್ದರೂ ಉತ್ತರ ಭಾರತದ ಕಾರ್ಮಿಕರನ್ನು ಹೆಚ್ಚು ಕೂಲಿ ಕೊಟ್ಟು ದುಡಿಸಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಯಂತ್ರದ ಬಾಡಿಗೆ ಹೆಚ್ಚಳ: ತಾಲೂಕಿನಲ್ಲಿ ಭತ್ತದ ಕಟಾವು ಆರಂಭವಾದ ಹಾಗೆ ತಮಿಳುನಾಡಿನಿಂದ ತರಿಸಿರುವ ಭತ್ತದ ಕಟಾವು ಯಂತ್ರಗಳು ಸದ್ದುಮಾಡುತ್ತಿವೆ. ಆದರೆ, ಯಂತ್ರಗಳ ಬಾಡಿಗೆ ಸಹ ದುಬಾರಿ ಎಂಬ ಮಾತಿದ್ದು, ಕಳೆದ ಬಾರಿ ಪ್ರತಿ ಗಂಟೆಗೆ ೨೮೦೦ ರು.ಗಳಿಂದ ೩೦೦೦ ಸಾವಿರ ರು.ಗಳಿದ್ದರೆ ಈ ಬಾರಿ ೩೩೦೦ ರು.ಗಳಿಗಿಂತ ಅಧಿಕ. ಸ್ಥಳೀಯ ಮಧ್ಯವರ್ತಿಗಳು ಯಂತ್ರಗಳ ಬಾಡಿಗೆ ಏರಿಕೆಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಾರ್ಮಿಕರ ಹೊರೆಯನ್ನು ಸಾಕಷ್ಟು ತಗ್ಗಿಸುವ ಯಂತ್ರಗಳಿದ್ದರೂ ಇವುಗಳ ಉಪಯೋಗ ಪಡೆಯಲು ಸಾಕಷ್ಟು ರೈತರಿಗೆ ಸಾಧ್ಯವಿಲ್ಲದಾಗಿದ್ದು, ಶೀತಬಾಧಿತ ಭತ್ತದ ಗದ್ದೆಗಳಲ್ಲಿ ಈ ಯಂತ್ರಗಳು ಕೆಲಸ ಮಾಡದಿರುವುದು ಇದಕ್ಕೆ ಕಾರಣವಾಗಿದೆ.ಇಳುವರಿ ಕಡಿಮೆ: ತಾಲೂಕಿನಲ್ಲಿ ಭತ್ತ ಬೆಳೆಯುವ ರೈತರಿಗೆ ಇಳುವರಿ ಕುಸಿತ ಸಹ ಒಂದು ಸಮಸ್ಯೆಯಾಗಿ ಕಾಡುತ್ತಿದೆ. ಹೆಚ್ಚು ಮಳೆ ಬೀಳುವ ತಾಲೂಕಿನಲ್ಲಿ ಭತ್ತದ ಗದ್ದೆಗಳು ಅಧಿಕ ಸಂಖ್ಯೆಯಲ್ಲಿ ಶೀತಬಾಧಿತವಾಗಿದ್ದು, ಸಾಮಾನ್ಯವಾಗಿ ಇಂತಹ ಪ್ರದೇಶದಲ್ಲಿ ಇಳುವರಿ ತೀರ ಕಡಿಮೆ ಎಂಬುದು ಅಧಿಕಾರಿಗಳ ಮಾತು ತಾಲೂಕಿನಲ್ಲಿ ಸರಾಸರಿ ಭತ್ತದ ಇಳುವರಿ ೧೪ ಕ್ವಿಂಟಲ್ ಎನ್ನಲಾಗುತ್ತಿದೆ. ೨೦ ಕ್ವಿಂಟಲ್ ಭತ್ತ ಬೆಳೆಯುವುದು ತಾಲೂಕಿನಲ್ಲಿ ದುಸ್ತರವಾಗಿದೆ, ಶೀತ ಬಾಧಿತ ಪ್ರದೇಶದಲ್ಲಿ ಇಳುವರಿ ೭ರಿಂದ ೧೦ ಕ್ವಿಂಟಲ್ ಮಾತ್ರ. ಆದರೆ, ಇತರೆ ತಾಲೂಕಿನಲ್ಲಿ ಭತ್ತದ ಇಳುವರಿ ಸರಾಸರಿ ಪ್ರಮಾಣ ೨೦ರಿಂದ ೨೪ ಕ್ವಿಂಟಲ್‌ಗಳಾಗಿದ್ದು ಇಲ್ಲಿ ೪೦ ಕ್ವಿಂಟಲ್ ಭತ್ತವನ್ನು ಯಾವುದೇ ವಿಶೇಷ ಶ್ರಮವಿಲ್ಲದೆ ಬೆಳೆಯಲಾಗುತ್ತದೆ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ವಿವರಣೆ. ಯಾವ ಹೋಬಳಿಯಲ್ಲಿ ಎಷ್ಟು ಬೆಳೆ: ತಾಲೂಕಿನ ಐದು ಹೋಬಳಿಯಲ್ಲಿ ಕೃಷಿ ಇಲಾಖೆ ೭೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಿದ್ದರೂ ಶೇ. ೯೩ರಷ್ಟು ಗುರಿ ತಲುಪಲು ಮಾತ್ರ ಸಾಧ್ಯವಾಗಿದೆ. ಕಸಬಾ ಹೋಬಳಿಯಲ್ಲಿ ೨೧೦೦ ಹೆಕ್ಟೇರ್ ಪೈಕಿ ೨೦೦೦, ಬೆಳಗೋಡು ಹೋಬಳಿಯಲ್ಲಿ ೧೦೦೦ ಹೇಕ್ಟರ್ ಪೈಕಿ ೯೦೦ ಹೆಕ್ಟೇರ್, ಹೆತ್ತೂರು ಹೋಬಳಿ ೧೫೫೦ ಹೆಕ್ಟೇರ್ ಪೈಕಿ ೧೪೦೦ ಹೆಕ್ಟೇರ್ ಪ್ರದೇಶದಲ್ಲಿ ಯಸಳೂರು ಹೋಬಳಿಯ ೧೭೫೦ ಹೆಕ್ಟೇರ್ ಪೈಕಿ ೧೬೦೦ ಹೆಕ್ಟೇರ್, ಹಾನುಬಾಳ್ ಹೋಬಳಿಯ ೧೧೦೦ ಹೆಕ್ಟೇರ್ ಪೈಕಿ ೧೧೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಪ್ರತಿವರ್ಷ ಕೃಷಿ ಇಲಾಖೆಯ ಗುರಿಗಿಂತ ಕಡಿಮೆ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿರುವುದು ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. * ಹೇಳಿಕೆ1
ಹೊರರಾಜ್ಯದಿಂದ ಅಧಿಕ ಪ್ರಮಾಣದಲ್ಲಿ ಭತ್ತ ನಮ್ಮ ರಾಜ್ಯಕ್ಕೆ ಬರುತ್ತಿರುವುದು ಭತ್ತದ ಧಾರಣೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ರತಿ ಕ್ವಿಂಟಲ್‌ಗೆ 500 ರು.ಗಳಿಂದ 1000 ರು.ಗಳವರಗೆ ಬೆಲೆ ಕಡಿಮೆ ಆಗಿದೆ.- ಧರ್ಮೇಂದ್ರ, ಭತ್ತದ ವ್ಯಾಪಾರಿ * ಹೇಳಿಕೆ2
ತಾಲೂಕಿನಲ್ಲಿ ೧೧ ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶವಿದ್ದರೂ ವಿವಿಧ ಕಾರಣದಿಂದ ಕೇವಲ ೭೨೦೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ.- ಪ್ರಕಾಶ್ ಕುಮಾರ್, ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಸಕಲೇಶಪುರ