ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡಲ್ಲಿ ರೈತರು ತೋಟಗಾರಿಕಾ ಬೆಳೆಗಳಲ್ಲಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸತೀಶ್ ಹೇಳಿದರು. ನಗರದ ತಾಲೂಕು ಕಚೇರಿ ಬಳಿ ಸಮರ್ಥ್ ರೈತ ಮಿತ್ರ ಆಗ್ರೋ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ದಾಳಿಂಬೆ ಬೆಳೆಗಾರರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿಪರ ಬೆಳೆಗಾರರನ್ನು ಸನ್ಮಾನಿಸಿ ಮಾತನಾಡಿದರು. ಸಾಂಪ್ರದಾಯಿಕ ಬೆಳೆಗಳಿಂದ ಹೆಚ್ಚಿನ ಆದಾಯ ಕಂಡುಕೊಳ್ಳಲಾಗದ ಅನ್ನದಾತರಿಗೆ ದಾಳಿಂಬೆ, ಬಾಳೆ, ಅಡಕೆ ವರವಾಗಿ ಪರಿಣಮಿಸಿವೆ. ಯಾವುದೇ ಚಟುವಟಿಕೆ ಆರಂಭಿಸುವ ಮುನ್ನ ತಜ್ಞರ ಸಲಹೆ ಪಡೆಯವುದು ಸೂಕ್ತ ಎಂದು ಮಾಹಿತಿ ನೀಡಿದರು.ದಾಳಿಂಬೆ ಬೆಳೆ ಸಲಹೆಗಾರ ಹಾಗೂ ಸಮರ್ಥ್ ರೈತ ಮಿತ್ರ ಆಗ್ರೋ ಸಂಸ್ಥೆ ಸ್ಥಾಪಕ ಅಕ್ಷಯ್ ಚಂದನ್ ಮಾತನಾಡಿ, ಎಂಎಸ್ಸಿ ಪದವಿ ಪಡೆದ ಬಳಿಕ ಕೈತುಂಬಾ ಸಂಬಳ ಪಡೆಯುವ ಉದ್ಯೋಗ ನನಗೆ ಲಭಿಸಿತ್ತು. ನನ್ನೂರಿನಲ್ಲಿ ಕೃಷಿಕರಿಗೆ ನೆರವಾಗಬೇಕು ಎನ್ನು ಸಂಕಲ್ಪದೊಂದಿಗೆ ಹೆಜ್ಜೆಯಿಟ್ಟಿದ್ದೇನೆ. ೨೦೨೦ರಲ್ಲಿ ಕೇವಲ ೫೦ ದಾಳಿಂಬೆ ಬೆಳೆಗಾರರು ಮಾತ್ರವೇ ಸಂಪರ್ಕಕ್ಕೆ ಬಂದಿದ್ದರು. ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳ ೨೭೦ ಬೆಳೆಗಾರರು ಸಂಸ್ಥೆಯ ನೆರವು ಕೋರಿರುವುದು ಸಂತಸ ತಂದಿದೆ. ಆಸಕ್ತ ರೈತರು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದು ದಾಳಿಂಬೆ ಬೆಳೆ ಬೆಳೆದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಗಳಿಸಬಹುದಾಗಿದೆ ಎಂದು ಅಂಕಿ ಅಂಶ ಸಹಿತ ವಿವರಿಸಿದರು.ತಿಪಟೂರಿನ ಕೆ.ವಿ.ಕೆ ಸಂಸ್ಥೆಯ ಹಿರಿ ಭೂ ವಿಜ್ಞಾನಿ ವಿ.ಗೋವಿಂದೇಗೌಡ ಮಾತನಾಡಿ, ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಅನ್ನದಾತರಿಗೆ ಒಂದೇ ಸೂರಿನ ಅಡಿಯಲ್ಲಿ ಅಗತ್ಯ ಕೃಷಿ ಪರಿಕರಗಳು ದೊರೆಯುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬೇಸಾಯದಲ್ಲಿ ತೊಡಗಿಸಿಕೊಂಡರೆ ಹೆಚ್ಚಿ ಆದಾಯ ಪಡೆಯಬಹುದಾಗಿದೆ. ದಾಳಿಂಬೆ, ತೆಂಗು, ಅಡಕೆ, ಡ್ರ್ಯಾಗನ್ ಫ್ರೂಟ್ ಒಳಗೊಂಡಂತೆ ಎಲ್ಲ ಬಗೆಯ ಸುಧಾರಿತ ತಳಿಗಳನ್ನು ಒಂದೇ ಸೂರಿನಡಿ ನೀಡುವ ವ್ಯವಸ್ಥೆ ರೂಪಿಸಬೇಕಿದೆ.
ಟ್ರ್ಯಾಕ್ಟರ್, ಟ್ರಿಲ್ಲರ್, ಬಿತ್ತನೆ ಬೀಜ, ಪೋಷಕಾಂಶಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿದಲ್ಲಿ ರೈತರ ಅನಗತ್ಯ ಸುತ್ತಾಟ ತಪ್ಪಿದಂತಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಬಿಎಸ್ಸಿ ಅಥವಾ ಎಂಎಸ್ಸಿ ಕೃಷಿ ಓದಿದ ಕೂಡಲೇ ಸರ್ಕಾರಿ ಕೆಲಸ ಸಿಗಬೇಕು ಎನ್ನುವ ಧೋರಣೆಯಿಂದ ಯುವಕ, ಯುವತಿಯರು ಹೊರಬರಬೇಕು. ಬೇಸಾಯ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಜತೆಗೆ ನಾಲ್ಕಾರು ಜನರಿಗೆ ದುಡಿಯಲು ಅವಕಾಶ ನೀಡವ ಆಯ್ಕೆ ನಿಮಗಿದೆ ಎಂದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್, ಚಿಕ್ಕನಾಯಕನಹಳ್ಳಿ ತಾಲೂಕಿನ ಕೃಷಿ ತಾಂತ್ರಿಕ ಅಧಿಕಾರಿ ಬೋರೆಹಳ್ಳಿ ಸೋಮಶೇಖರ್ ವೇದಿಕೆಯಲ್ಲಿದ್ದರು. ದಾಳಿಂಬೆ ಕೃಷಿಯಲ್ಲಿ ನಿರೀಕ್ಷೆಗೂ ಮೀರಿ ಆದಾಯ ಗಳಿಸಿದ ಪ್ರಗತಿಪರ ಬೆಳೆಗಾರರನ್ನು ಸನ್ಮಾನಿಸಲಾಯಿತು. ಚಲುವನಹಳ್ಳಿ ಸ್ವಾಮಿ, ಪರಮಶಿವು, ಕುರುಬರಹಳ್ಳಿ ಗುರುಮೂರ್ತಿ ಹಾಗೂ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.