ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹನಕೆರೆ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಮಾ.೭ರಂದು ರಾಮನಗರದ ಬಸವನಪುರ ಗ್ರಾಮದಲ್ಲಿರುವ ಹೆದ್ದಾರಿ ಪ್ರಾಧಿಕಾರದ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶಾಸಕ ಪಿ.ರವಿಕುಮಾರ್ ತಿಳಿಸಿದರು.ಈ ಮೊದಲು ಹನಕೆರೆ ಬಳಿ ಅಂಡರ್‌ಪಾಸ್ ನಿರ್ಮಿಸುವುದಾಗಿ ಆದೇಶವಾಗಿ ಶೀಘ್ರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದರು. ಇದೀಗ ಅಂಡರ್‌ಪಾಸ್ ಮಾಡಲು ಸಾಧ್ಯವಿಲ್ಲ. ಮೇಲ್ಸೇತುವೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಅವರ ಭಾವನೆಗಳಿಗೆ ಸ್ಪಂದಿಸಿ ಈ ಹೋರಾಟ ನಡೆಸುತ್ತಿದ್ದೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂಡರ್‌ಪಾಸ್ ಕಾಮಗಾರಿಯನ್ನು ಕೈಗೊಳ್ಳುವವರೆಗೆ ನನ್ನ ಹೋರಾಟ ಮುಂದುವರೆಯಲಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದಪ್ಪಚರ್ಮದ ಅಧಿಕಾರಿಗಳಾಗಿದ್ದು ಅವರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಕಿಡಿಕಾಆರಿದರು.ಶ್ರೀಆಂಜನೇಯನಿಗೆ ಬೆಳ್ಳಿ ಗದೆ ಕೊಡುಗೆ:
ಹನುಮಧ್ವಜ ವಿವಾದದಿಂದ ಹನುಮ ವಿರೋಧಿ ಎಂಬ ಕಳಂಕಕ್ಕೆ ಗುರಿಯಾಗಿದ್ದ ಶಾಸಕ ರವಿಕುಮಾರ್, ಕೆರಗೋಡು ಗ್ರಾಮದ ಶ್ರೀಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬೆಳ್ಳಿ ಗದೆ ಕೊಡುಗೆಯಾಗಿ ನೀಡಿದರು.ಬೂದನೂರು ಗ್ರಾಮದ ೪೩ ಮಂದಿ ನಿವೇಶನ ವಂಚಿತರ ಪೈಕಿ ೩೫ ಜನರಿಗೆ ಹಕ್ಕುಪತ್ರ ಕೊಡಿಸಿದ ನೆನಪಿಗಾಗಿ ಫಲಾನುಭವಿಗಳೆಲ್ಲರೂ ಸೇರಿ ಬೂದನೂರು ಉತ್ಸವದಲ್ಲಿ ಶಾಸಕರಿಗೆ ಬೆಳ್ಳಿ ಗದೆ ಕೊಟ್ಟು ಗೌರವ ಸಮರ್ಪಿಸಿದ್ದರು. ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಸರಿಯಲ್ಲ. ಆಂಜನೇಯನ ಜೊತೆ ಇದ್ದರೆ ಬೆಳ್ಳಿ ಗದೆಗೆ ಅರ್ಥ. ಹನುಮ ಜಯಂತಿ ದಿನ ಗದೆಯ ಸಮೇತವಾಗಿ ಆಂಜನೇಯನ ಮೆರವಣಿಗೆ ಮಾಡಲಿ. ಜನರು ಪ್ರೀತಿಯಿಂದ ಕೊಟ್ಟಿರುವ ಬೆಳ್ಳಿ ಗದೆ. ಬಡಜನರು ಕೊಟ್ಟ ಗದೆ ನನಗೆ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಹಾಗಾಗಿ ಅದನ್ನು ದೇವರಿಗೆ ಅರ್ಪಿಸುತ್ತಿದ್ದೇನೆ ಎಂದರು.‘ಸಂಸದೆ ಮಂಡ್ಯ ರೈತರ ವಿರೋಧಿ’
ಕನ್ನಡಪ್ರಭ ವಾರ್ತೆ ಮಂಡ್ಯಹೊಸ ಸಕ್ಕರೆ ಕಾರ್ಖಾನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ರೈತರ ವಿರುದ್ಧ ಇದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ನಯವಾಗಿಯೇ ಟೀಕಿಸಿದರು.
ಸುಮಲತಾ ಅವರು ಸಂಸದ ಸ್ಥಾನದ ಕೊನೆಯ ದಿನಗಳಲ್ಲಿ ಇದ್ದಾರೆ. ಯಾವ ಕಾರಣಕ್ಕಾಗಿ ಅವರು ಹೊಸ ಸಕ್ಕರೆ ಕಾರ್ಖಾನೆಯನ್ನು ವಿರೋಧ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಬಹುಶಃ ಅವರು ಖಾಸಗೀಕರಣದ ಪರವಾಗಿರಬಹುದು. ಹಾಗಂತ ಎಲ್ಲವನ್ನೂ ಖಾಸಗೀಕರಣ ಮಾಡುತ್ತಾ ಹೋದರೆ ಉಳಿಯುವುದೇನು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.ಪ್ರಧಾನಿ ಮೋದಿ ಸೇರಿದಂತೆ ಕೇಂದ್ರದ ಬಿಜೆಪಿಯ ಹಲವಾರು ನಾಯಕರ ಸಂಪರ್ಕವಿದ್ದರೂ ನೀವಂತೂ ಏನೂ ಮಾಡಲಿಲ್ಲ. ಅದನ್ನು ನಮ್ಮ ಸರ್ಕಾರ ಮಾಡುತ್ತದೆ. ಅಭಿವೃದ್ಧಿ ವಿಚಾರದಲ್ಲಿ ದಯವಿಟ್ಟು ತೊಂದರೆ ಕೊಡಬೇಡಿ. ಹೊಸ ಕಾರ್ಖಾನೆಗೆ ನಾವು ಗುದ್ದಲಿ ಪೂಜೆ ಮಾಡುವಾಗ ನೀವು ಅಧಿಕಾರದಲ್ಲಿ ಇದ್ದರೆ ನಿಮ್ಮನ್ನೂ ಆಹ್ವಾನಿಸುತ್ತೇವೆ. ಬನ್ನಿ ನೋಡಿ ಅದನ್ನು ಆನಂದಿಸಿ. ಹೊಸ ಕಾರ್ಖಾನೆಗೆ ವಿರುದ್ಧ ಅಪಸ್ವರವೆತ್ತಿ ಅಭಿವೃದ್ಧಿಗೆ ಅಡ್ಡಗಾಲಾಗಬೇಡಿ ಎಂದು ಕೈಮುಗಿದು ಮನವಿ ಮಾಡಿದರು.